
ಮಡಿಕೇರಿ, NEWS DESK ಅ.6: ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಾಗೂ ಪ್ರಗತಿ ಕುರಿತು ಮಡಿಕೇರಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಂದ್ರೀರ ಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮಂದ್ರೀರ ಮೋಹನ್ ದಾಸ್, ‘ಗೃಹಲಕ್ಷ್ಮಿ’ ಯೋಜನೆಯ ಫಲಾನುಭವಿಗಳ ಕಡ್ಡಾಯ ಮನೆ-ಮನೆ ಮರುಪರಿಶೀಲನಾ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ಮರುಪರಿಶೀಲನಾ ಕಾರ್ಯ ಪಾರದರ್ಶಕವಾಗಿ ನಡೆಯಲು ತಹಶೀಲ್ದಾರ್ ಹಾಗೂ ಪಿಡಿಒಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಮೊಬೈಲ್ ಅಪ್ಲಿಕೇಶನ್ ಬಳಸಿ ಜಿಪಿಎಸ್ ಟ್ರ್ಯಾಕಿಂಗ್ ಮೂಲಕ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ನಿಗದಿತ ಅವಧಿಯೊಳಗೆ ಸಮೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದರು. ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯುವ ಸಂದರ್ಭದಲ್ಲಿ ತಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ದೂರವಾಣಿ ಸಂಖ್ಯೆ, ಪಡಿತರ ಚೀಟಿ, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಸೇರಿದಂತೆ ಅಗತ್ಯ ದಾಖಲೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು. ಬ್ಯಾಂಕ್ ಖಾತೆಗಳು ಕರ್ನಾಟಕದಲ್ಲಿರುವ ಶಾಖೆಗಳಲ್ಲಿರಬೇಕು ಹಾಗೂ ಜಂಟಿ ಖಾತೆಯಾಗಿರಬಾರದು ಎಂದು ತಿಳಿಸಿದರು. ಕರ್ನಾಟಕದ ನಿವಾಸ ವಿಳಾಸ ಹೊಂದಿದ್ದು, ಸ್ವಂತ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ಹೊಂದಿರುವ ಖಾತೆದಾರರಿಗೆ ಮಾತ್ರ ಯೋಜನೆಯ ಸೌಲಭ್ಯ ಅನ್ವಯವಾಗುತ್ತದೆ. ಮರಣ ಹೊಂದಿರುವ ಮಹಿಳಾ ಫಲಾನುಭವಿಗಳ ಮಾಹಿತಿಯನ್ನು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಪಂಚಾಯಿತಿಗೆ ವರದಿ ಮಾಡಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿ ಶೇಖರ್ ತಿಳಿಸಿದರು. ಗೃಹಲಕ್ಷ್ಮಿ ಯೋಜನೆ >> ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶನದಂತೆ ಫಲಾನುಭವಿಗಳ ಪ್ರಸ್ತುತ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಬಯೋಮೆಟ್ರಿಕ್ ಹಾಗೂ ಫೇಶಿಯಲ್ ಅಥೆಂಟಿಕೇಷನ್ ಮೂಲಕ ಕಡ್ಡಾಯ ಮನೆ-ಮನೆ ಮರುಪರಿಶೀಲನೆ ಆರಂಭಿಸಲಾಗಿದೆ. ಗಣತಿದಾರರು ಹಾಗೂ ಸಮಿತಿ ಸದಸ್ಯರು ನೇರವಾಗಿ ಮನೆಗಳಿಗೆ ಭೇಟಿ ನೀಡಿ ಜಿಪಿಎಸ್ ಸಾಕ್ಷ್ಯದೊಂದಿಗೆ ಮಾಹಿತಿ ಸಂಗ್ರಹಿಸಲಿದ್ದಾರೆ. ಇದು ಹೊಸ ನೋಂದಣಿ ಪ್ರಕ್ರಿಯೆಯಲ್ಲ. ಈಗಾಗಲೇ ಯೋಜನೆಯಡಿ ಇರುವ ಫಲಾನುಭವಿಗಳ ಪರಿಶೀಲನೆ ಮಾತ್ರವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು. ಜೂನ್ ತಿಂಗಳಲ್ಲಿ 26,723 ಫಲಾನುಭವಿಗಳಿಗೆ ಒಟ್ಟು ರೂ.53,44,600 ಹಣ ಪಾವತಿಸಲಾಗಿದೆ. ಎನ್‌ಪಿಸಿಐ ಹಾಗೂ ಇ-ಕೆವೈಸಿ ಪೂರ್ಣಗೊಳಿಸಲು ಬಾಕಿ ಉಳಿದಿರುವ ಫಲಾನುಭವಿಗಳ ಸಂಖ್ಯೆ 69 ಆಗಿದ್ದು, ಎಸ್‌ಟಿ ಶ್ರೇಣಿಯಿಂದ ತಿರಸ್ಕೃತಗೊಂಡ ಫಲಾನುಭವಿಗಳ ಸಂಖ್ಯೆ 849 ಆಗಿದೆ. ಗೃಹಲಕ್ಷ್ಮಿ ಯೋಜನೆಯ ಆರ್ಥಿಕ ನೆರವಿನಿಂದ ಸ್ವಾವಲಂಬಿ ಜೀವನ ನಡೆಸಿ, ಸಾಮಾಜಿಕ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳಾ ಫಲಾನುಭವಿಗಳನ್ನು ಗುರುತಿಸಿ ಸನ್ಮಾನಿಸಲು ಹಾಗೂ ಅವರ ಯಶೋಗಾಥೆಗಳನ್ನು ಸಂಗ್ರಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. *ಶಕ್ತಿ ಯೋಜನೆ* 2026ರ ಆಗಸ್ಟ್‌ವರೆಗೆ ಒಟ್ಟು 19,72,6369 ಮಹಿಳಾ ಪ್ರಯಾಣಿಕರು ಉಚಿತ ಬಸ್ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಯಿತು. ದಿನವೊಂದಕ್ಕೆ ಸರಾಸರಿ 16,675 ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಮುಕ್ಕೋಡ್ಲು ಭಾಗದಲ್ಲಿ ಹಳೆಯ ಬಸ್‌ಗಳಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ನೂತನ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು. ಬಸ್ ಚಾಲಕರು ಕಡ್ಡಾಯವಾಗಿ ಸಮಯ ಪಾಲನೆ ಮಾಡುವಂತೆ ಸೂಚಿಸಲಾಯಿತು. ಯುವನಿಧಿ ಯೋಜನೆ 2026ರ ಜುಲೈವರೆಗೆ 654 ಮಂದಿ ನೋಂದಣಿಯಾಗಿದ್ದು, ಜುಲೈ ತಿಂಗಳಲ್ಲಿ ಒಟ್ಟು ರೂ.1,68,49,500 ನೇರ ನಗದು ವರ್ಗಾವಣೆ (ಡಿಬಿಟಿ) ಮಾಡಲಾಗಿದೆ. 472 ಫಲಾನುಭವಿಗಳು ಮಾಸಿಕ ಸ್ವಯಂ ಘೋಷಣೆ ಸಲ್ಲಿಸದಿರುವುದು, ಉನ್ನತ ವ್ಯಾಸಂಗಕ್ಕೆ ಸೇರ್ಪಡೆಯಾಗಿರುವುದು ಹಾಗೂ 24 ತಿಂಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ 892 ಫಲಾನುಭವಿಗಳನ್ನು ನಿಯಮಾನುಸಾರ ಯೋಜನೆಯಿಂದ ಕೈಬಿಡಲಾಗಿದೆ. ಮಾಸಿಕ ಸ್ವಯಂ ಘೋಷಣೆ ಸಲ್ಲಿಸದ 472 ಫಲಾನುಭವಿಗಳಿಗೆ ಡಿಬಿಟಿ ತಡೆಹಿಡಿಯಲಾಗಿದೆ. ಮುಖ್ಯ ಕಚೇರಿಯ ದತ್ತಾಂಶದ ಪ್ರಕಾರ ಮೂವರು ಫಲಾನುಭವಿಗಳು ಈಗಾಗಲೇ ಉದ್ಯೋಗದಲ್ಲಿರುವುದಾಗಿ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ದಾಖಲೆ ಹಾಗೂ ಭೌತಿಕ ಪರಿಶೀಲನೆ ವೇಳೆ ನಿಯಮ ಉಲ್ಲಂಘಿಸಿರುವ ಕಾರಣ ಒಟ್ಟು 166 ಅರ್ಜಿಗಳನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ. ಯುಯುಸಿಎಂಸಿ ದತ್ತಾಂಶದ ಪ್ರಕಾರ ಜಿಲ್ಲೆಯ 177 ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮುಂದುವರಿಸುತ್ತಿರುವುದು ಕಂಡುಬಂದಿದ್ದು, ಇವರನ್ನು ಯೋಜನೆಯಿಂದ ಅನರ್ಹಗೊಳಿಸಲಾಗಿದೆ. ಗೃಹಜ್ಯೋತಿ ಯೋಜನೆ ತಾಲ್ಲೂಕಿನಲ್ಲಿ ಒಟ್ಟು 52,758 ಅರ್ಹ ಸ್ಥಾವರಗಳಿದ್ದು, 52,131 ನೋಂದಾಯಿತ ಅರ್ಜಿಗಳೊಂದಿಗೆ ಶೇ.98.81ರಷ್ಟು ಪ್ರಗತಿ ಸಾಧಿಸಲಾಗಿದೆ. ಮರುಪರಿಶೀಲನಾ ಕಾರ್ಯವು ನಗರ ವ್ಯಾಪ್ತಿಯಲ್ಲಿ ಶೇ.62 ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ ಶೇ.80ರಷ್ಟು ಪೂರ್ಣಗೊಂಡಿದೆ. ಅನ್ನಭಾಗ್ಯ ಯೋಜನೆ ತಾಲ್ಲೂಕಿನಲ್ಲಿ ಒಟ್ಟು 38,226 ಪಡಿತರ ಚೀಟಿಗಳಿದ್ದು, 1,21,053 ಫಲಾನುಭವಿಗಳಿದ್ದಾರೆ. ಇದರಲ್ಲಿ 1,893 ಅಂತ್ಯೋದಯ ಹಾಗೂ 21,845 ಆದ್ಯತಾ ಪಡಿತರ ಚೀಟಿಗಳು ಸೇರಿವೆ. ತಾಲ್ಲೂಕಿನಲ್ಲಿ 1,391 ಅನರ್ಹ ಫಲಾನುಭವಿಗಳನ್ನು ಪತ್ತೆಹಚ್ಚಲಾಗಿದ್ದು, ನಿಯಮಾನುಸಾರ ಪಟ್ಟಿಯನ್ನು ಪರಿಷ್ಕರಿಸಿ ಅನರ್ಹರ ಹೆಸರುಗಳನ್ನು ಕೈಬಿಡುವ ಪ್ರಕ್ರಿಯೆ ಕೈಗೊಳ್ಳಲಾಗಿದೆ. ವೈದ್ಯಕೀಯ ಸೌಲಭ್ಯ ಸೇರಿದಂತೆ ವಿವಿಧ ತಿದ್ದುಪಡಿಗಳಿಗಾಗಿ ಸಾರ್ವಜನಿಕರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಇದೇ ವೇಳೆ ವಿವಿಧ ಜನಪರ ಯೋಜನೆಗಳ ಪ್ರಗತಿಯ ಬಗ್ಗೆಯೂ ಸಭೆಯಲ್ಲಿ ಮಾಹಿತಿ ನೀಡಲಾಯಿತು. ಪಿಎಂ ಕಿಸಾನ್, ಪಿಎಂ ವಿಶ್ವಕರ್ಮ, ವಿಕೆಎಫ್‌ವೈ, ಪಿಎಂ ಸ್ವನಿಧಿ, ಎನ್‌ಟಿಎಚ್‌ಜೆ ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳ ವಿವರಗಳನ್ನು ಪರಿಶೀಲಿಸಲಾಯಿತು. ಸಭೆಯಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ದರ್ಶನ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಿ.ಹೆಚ್. ಮಹೇಶ್, ಉದ್ಯೋಗಾಧಿಕಾರಿ ಸಿ.ಬಿ. ಮಂಜುನಾಥ್, ಸೆಸ್ಕ್ ಎಇಇ ಕೆ.ಎ. ರಾಜೇಶ್ವರಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಪ್ರಭಾಕರ ರೈ, ಹೆಚ್.ಪಿ. ರಫಿ, ಫ್ಯಾನ್ಸಿ ಪಾರ್ವತಿ, ರಾಜೇಶ್ವರಿ, ಸಿರಾಜುದ್ದಿನ್, ಎಂ.ಎನ್. ದಯಾನಂದ, ರಂಗಪ್ಪ, ಮಿಟ್ಟು ಸೋಮಯ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.









