

ಮಡಿಕೇರಿ, NEWS DESK ಅ.6: ಪರಿಶಿಷ್ಟ ಪಂಗಡ ಸಮಾಜಗಳ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ 15 ದಿನಗಳೊಳಗೆ ಕುಂದುಕೊರತೆ ಸಭೆ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಕ್ಟೋಬರ್ 26ರಂದು ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಸಂಬಂಧ ಮಂಗಳವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರಿಶಿಷ್ಟ ಪಂಗಡ ಸಮಾಜಗಳ ಹಲವು ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ತುರ್ತಾಗಿ ಕುಂದುಕೊರತೆ ಸಭೆ ಕರೆಯಬೇಕು ಎಂದು ವಾಲ್ಮೀಕಿ ಸಮಾಜದ ಜಿಲ್ಲಾ ಅಧ್ಯಕ್ಷ ಕೆ.ಎನ್. ಅಶೋಕ್ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಜಿಲ್ಲಾ ಮಟ್ಟದಲ್ಲಿ ಪರಿಹರಿಸಬಹುದಾದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಗುವುದು. ಇತ್ಯರ್ಥವಾಗದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ವ್ಯವಸ್ಥಾಪಕರು ಇಲ್ಲದ ಕಾರಣ ಕಳೆದ ಮೂರು ವರ್ಷಗಳಿಂದ ಸಮಾಜಕ್ಕೆ ಸಮರ್ಪಕವಾಗಿ ಸೌಲಭ್ಯಗಳು ತಲುಪುತ್ತಿಲ್ಲ. ಆದ್ದರಿಂದ ಐಟಿಡಿಪಿ ಇಲಾಖೆಯ ಅಧಿಕಾರಿಯೊಬ್ಬರಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹೆಚ್ಚುವರಿ ಪ್ರಭಾರ ನೀಡಬೇಕು ಎಂದು ಅಶೋಕ್ ಮನವಿ ಮಾಡಿದರು. ನಿಗಮಗಳಿಗೆ ಬಿಡುಗಡೆಯಾಗುವ ಸರ್ಕಾರಿ ಅನುದಾನ ಹಾಗೂ ಸೌಲಭ್ಯಗಳು ವಾಲ್ಮೀಕಿ ಸಮಾಜಕ್ಕೂ ಸಮರ್ಪಕವಾಗಿ ತಲುಪಬೇಕು ಎಂದು ಅವರು ಒತ್ತಾಯಿಸಿದರು. ಕುಂದುಕೊರತೆ ಸಭೆಗೆ ತಾಲ್ಲೂಕು ಮಟ್ಟದ ಐಟಿಡಿಪಿ ಅಧಿಕಾರಿಗಳನ್ನೂ ಆಹ್ವಾನಿಸಬೇಕು ಎಂದು ಅವರು ತಿಳಿಸಿದರು. ಅರ್ಥಪೂರ್ಣವಾಗಿ ವಾಲ್ಮೀಕಿ ಜಯಂತಿ ಆಚರಣೆ > ಅಕ್ಟೋಬರ್ 26ರಂದು ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರು ಐಟಿಡಿಪಿ ಅಧಿಕಾರಿಗೆ ನಿರ್ದೇಶನ ನೀಡಿದರು. ನಗರದ ಗಾಂಧಿ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಮುಖ್ಯ ಭಾಷಣಕಾರರನ್ನು ಆಹ್ವಾನಿಸುವ ಕುರಿತು ಐಟಿಡಿಪಿ ಅಧಿಕಾರಿಗಳು ಹಾಗೂ ಸಮಾಜದ ಪ್ರಮುಖರು ಚರ್ಚಿಸಿ ನಿರ್ಧರಿಸುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು. ಎರಡು-ಮೂರು ದಿನಗಳಲ್ಲಿ ಮುಖ್ಯ ಭಾಷಣಕಾರರ ಕುರಿತು ಮಾಹಿತಿ ನೀಡಲಾಗುವುದು ಎಂದು ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷರು ತಿಳಿಸಿದರು. ತಾಲ್ಲೂಕು ಮಟ್ಟದಲ್ಲಿಯೂ ವಾಲ್ಮೀಕಿ ಜಯಂತಿ ಆಚರಿಸಬೇಕು. ಕುಶಾಲನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಕಾರ್ಯಕ್ರಮ ಆಯೋಜಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಮಾಜದ ಪ್ರತಿನಿಧಿಯೊಬ್ಬರು ಮನವಿ ಮಾಡಿದರು. ಕಾರ್ಯಕ್ರಮಕ್ಕೆ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಈ ಸಂಬಂಧ ಹಾಜರಾತಿ ಪಡೆಯಲಾಗುವುದು. ಅಧಿಕಾರಿಗಳು ಗೈರು ಹಾಜರಾದಲ್ಲಿ ನೋಟಿಸ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು. ಐಟಿಡಿಪಿ ಇಲಾಖಾ ಅಧಿಕಾರಿ ಭಾಗೀರಥಿ ಮಾತನಾಡಿ, ವಾಲ್ಮೀಕಿ ಜಯಂತಿ ಅಂಗವಾಗಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ಅಲ್ಲದೆ ಮಾಜಿ ಸೈನಿಕರು, ಕೃಷಿಕರು ಹಾಗೂ ಪೌರಕಾರ್ಮಿಕರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಕುಡಿಯರ ಮುತ್ತಪ್ಪ ಅವರು ಮಾತನಾಡಿ, ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಪರಿಶಿಷ್ಟ ವರ್ಗದವರನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ನಿರಂಜನ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಹೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ. ಗಣಪತಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಧರ, ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಐ.ಪಿ. ಮೇದಪ್ಪ, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಮಂಜುನಾಥ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ಜಿ. ಬಿಲಾಲ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ. ವಿಸ್ಮಯಿ, ಐಟಿಡಿಪಿ ಇಲಾಖೆಯ ವ್ಯವಸ್ಥಾಪಕ ದೇವರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಾಲ್ಮೀಕಿ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.









