ಮಡಿಕೇರಿ, NEWS DESK ಅ.7: ಅರ್ಥಶಾಸ್ತ್ರದ ಅರಿವು ಮತ್ತು ಸಾರ್ವಜನಿಕ ಚರ್ಚೆಗಳು ಶಕ್ತಿಯುತ ಪ್ರಜಾಪ್ರಭುತ್ವದ ಅಡಿಪಾಯವಾಗಿದ್ದು, ಆಳವಾದ ಅಧ್ಯಯನ, ತಾರ್ಕಿಕ ಚಿಂತನೆ ಹಾಗೂ ಪ್ರಾಮಾಣಿಕ ಆಲೋಚನೆಗಳು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗೆ ಪ್ರೇರಣೆ ನೀಡುವ ಶಕ್ತಿ ಹೊಂದಿವೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಸಚಿವರು ಹಾಗೂ ಪರೀಕ್ಷಾಂಗ ಪ್ರೊ. ಸುರೇಶ್ ಎಂ. ಹೇಳಿದರು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಖ್ಯಾತ ಅರ್ಥಶಾಸ್ತ್ರಜ್ಞ ಎ.ಡಿ. ಶ್ರಾಫ್ ಅವರ 60ನೇ ಸ್ಮರಣಾರ್ಥ ಆಯೋಜಿಸಿದ್ದ ಜಿಲ್ಲಾಮಟ್ಟದ ಅರ್ಥಶಾಸ್ತ್ರ ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾತು, ಆಲೋಚನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಶಕ್ತಿಯನ್ನು ಸಂಭ್ರಮಿಸುವ ಉದ್ದೇಶದಿಂದ ಎ.ಡಿ. ಶ್ರಾಫ್ ಅವರ ಸ್ಮರಣಾರ್ಥ ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಭಾಷಣವೆಂದರೆ ಕೇವಲ ಶಬ್ದಗಳ ಉಚ್ಚಾರಣೆ ಅಥವಾ ಧ್ವನಿಯ ಏರಿಳಿತವಲ್ಲ. ವಿಚಾರಗಳನ್ನು ಧೈರ್ಯವಾಗಿ, ಸ್ಪಷ್ಟವಾಗಿ ಹಾಗೂ ಪರಿಣಾಮಕಾರಿಯಾಗಿ ವ್ಯಕ್ತಪಡಿಸುವ ಕಲೆಯಾಗಿದ್ದು, ವಿದ್ಯಾರ್ಥಿಗಳು ಈ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಪ್ರೊ. ಸುರೇಶ್ ಎಂ. ಹೇಳಿದರು.
ಕಾರ್ಯಕ್ರಮದ ಸಂಯೋಜಕರಾದ ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ತಿಪ್ಪೇಸ್ವಾಮಿ ಈ. ಮಾತನಾಡಿ, ಭಾರತದ ಆರ್ಥಿಕ, ಕೈಗಾರಿಕಾ ಹಾಗೂ ವಾಣಿಜ್ಯ ನೀತಿಗಳಿಗೆ ಎ.ಡಿ. ಶ್ರಾಫ್ ನೀಡಿದ ಕೊಡುಗೆಗಳನ್ನು ಸ್ಮರಿಸುವ ಉದ್ದೇಶದಿಂದ ಭಾಷಣ, ಪ್ರಬಂಧ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಅರ್ಥಶಾಸ್ತ್ರದ ಕುರಿತ ಜ್ಞಾನವನ್ನು ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಮುಖ್ಯ ಅತಿಥಿ, ಸಾಹಿತಿ ಹಾಗೂ ಎಫ್‌ಎಂಸಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ನಿರ್ದೇಶಕಿ ಐಚಂಡ ರಶ್ಮಿ ಮೇದಪ್ಪ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಆತ್ಮಸ್ಥೈರ್ಯ ಮತ್ತು ಜ್ಞಾನ ವೃದ್ಧಿಯಾಗುತ್ತದೆ. ಸ್ಪರ್ಧೆಗಳು ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಪೂರಕವಾಗಿದ್ದು, ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ. ಮಾತನಾಡಿ, ಅರ್ಥಶಾಸ್ತ್ರವೆಂದರೆ ಕೇವಲ ಅಂಕಿ-ಅಂಶಗಳು, ಬೇಡಿಕೆ-ಪೂರೈಕೆ, ಹಣದುಬ್ಬರ, ಜಿಡಿಪಿ ಅಥವಾ ಆರ್ಥಿಕ ನೀತಿಗಳ ಅಧ್ಯಯನವಲ್ಲ. ಅರ್ಥಶಾಸ್ತ್ರದ ಕೇಂದ್ರಬಿಂದು ಮಾನವನಾಗಿದ್ದು, ಮಾನವ ಕಲ್ಯಾಣ, ಸಾಮಾಜಿಕ ನ್ಯಾಯ ಮತ್ತು ಸುಸ್ಥಿರ ಅಭಿವೃದ್ಧಿಯ ಕುರಿತು ಆಳವಾದ ಜ್ಞಾನವನ್ನು ನೀಡುವ ವಿಷಯವಾಗಿದೆ ಎಂದರು.
ಇಂತಹ ಸ್ಪರ್ಧೆಗಳು ಸಮರ್ಥ ವೃತ್ತಿಪರರು, ವಿಮರ್ಶಾತ್ಮಕ ಚಿಂತಕರು, ನೈತಿಕತೆ ಹೊಂದಿದ ನಾಗರಿಕರು ಹಾಗೂ ಹೊಣೆಗಾರಿಕೆಯ ಯುವ ನಾಯಕರನ್ನು ರೂಪಿಸಲು ಸಹಕಾರಿಯಾಗುತ್ತವೆ ಎಂದು ಅವರು ಹೇಳಿದರು.
ಬಿಂದ್ಯಾ ಐ.ಪಿ.ಗೆ ಪ್ರಥಮ ಸ್ಥಾನ
ಜಿಲ್ಲಾಮಟ್ಟದ ಭಾಷಣ ಸ್ಪರ್ಧೆಯಲ್ಲಿ ವಿರಾಜಪೇಟೆಯ ಕಾವೇರಿ ಕಾಲೇಜಿನ ವಿದ್ಯಾರ್ಥಿನಿ ಬಿಂದ್ಯಾ ಐ.ಪಿ. ಪ್ರಥಮ ಸ್ಥಾನ ಪಡೆದು ರೂ.2,500 ನಗದು ಬಹುಮಾನ ಗಳಿಸಿದರು. ಗೋಣಿಕೊಪ್ಪದ ಕಾವೇರಿ ಕಾಲೇಜಿನ ವಿದ್ಯಾರ್ಥಿ ಬೆಳ್ಳಿಯಪ್ಪ ಎಂ.ಜಿ. ದ್ವಿತೀಯ ಸ್ಥಾನ ಪಡೆದು ರೂ.1,500 ಹಾಗೂ ಇದೇ ಕಾಲೇಜಿನ ಸಫಾನ ಕೆ.ಎಸ್. ತೃತೀಯ ಸ್ಥಾನ ಪಡೆದು ರೂ.1,000 ಬಹುಮಾನ ಪಡೆದರು.
ಎಫ್‌ಎಂಸಿ ಕಾಲೇಜಿನ ವಿದ್ಯಾರ್ಥಿನಿ ಹೇಮಾವತಿ ಎಸ್. ಹಾಗೂ ನಾಪೋಕ್ಲು ಮರ್ಕಜ್ ಕಾಲೇಜಿನ ವಿದ್ಯಾರ್ಥಿ ನಫ್ಸೀಮಾ ಪಿ.ಎ. ಸಮಾಧಾನಕರ ಬಹುಮಾನ ಪಡೆದರು.
ಸ್ಪರ್ಧೆಯ ತೀರ್ಪುಗಾರರಾದ ಹಿಂದಿ ವಿಭಾಗದ ಸಹ ಪ್ರಾಧ್ಯಾಪಕ ಡಾ. ತಳವಾರ್ ಬಿ.ಹೆಚ್., ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ರಮೇಶ್ ಹೆಚ್.ಆರ್. ಹಾಗೂ ಟಿವಿ1 ವರದಿಗಾರ್ತಿ ಹರ್ಷಿತ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಭಾಷಣದ ವಿಷಯವನ್ನು ಪರಿಣಾಮಕಾರಿಯಾಗಿ ಮಂಡಿಸುವ ವಿಧಾನ, ಧ್ವನಿಯ ಏರಿಳಿತ, ವಿಚಾರಗಳ ಮೂಲಕ ಸಭಿಕರನ್ನು ಆಕರ್ಷಿಸುವ ರೀತಿ ಹಾಗೂ ಎ.ಡಿ. ಶ್ರಾಫ್ ಅವರ ಚಿಂತನೆಗಳನ್ನು ಪ್ರಸ್ತುತಪಡಿಸುವ ಕುರಿತು ಮಾರ್ಗದರ್ಶನ ನೀಡಿದರು.
ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ರೇಣುಶ್ರೀ ಎಚ್.ಕೆ. ಸ್ವಾಗತಿಸಿದರು. ವಿದ್ಯಾರ್ಥಿನಿ ಸ್ವಪ್ನ ಎಂ. ಶೇಟ್ ಪ್ರಾರ್ಥಿಸಿದರು. ಹೇಮಾವತಿ ಎಸ್. ವಂದಿಸಿದರು. ಮೇಘ ಎಸ್. ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪ್ರೊ. ಡಾ. ನಯನ ಕೆ.ಎಸ್., ಗಣಿತ ವಿಭಾಗದ ಮುಖ್ಯಸ್ಥ ಪ್ರೊ. ಡಾ. ರಾಜೇಂದ್ರ ಆರ್., ಸಮಾಜಶಾಸ್ತ್ರ ವಿಭಾಗದ ಡಾ. ಗಾಯತ್ರಿ ಎ.ಎನ್., ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪ್ರದೀಪ್ ಆರ್. ಭಂಡಾರಿ, ರಾಜ್ಯಶಾಸ್ತ್ರ ವಿಭಾಗದ ಡಾ. ಶೃಂಗಾರ್, ಇತಿಹಾಸ ವಿಭಾಗದ ಡಾ. ಚಂದ್ರಯ್ಯ ಸೇರಿದಂತೆ ವಿವಿಧ ಕಾಲೇಜುಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

















