
ವಿರಾಜಪೇಟೆ ಅ.7 NEWS DESK : ಆಧುನಿಕ ಜೀವನ ವ್ಯವಸ್ಥೆ ಅತಿ ವೇಗವಾಗಿ ಸಾಗುತ್ತಿದ್ದರೂ, ನೈತಿಕ ನೆಲೆಗಟ್ಟುಗಳು ಕುಸಿಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಾಹಿತಿ ಶ್ರೀಶೈಲ ಬೀಳಗಿ ಅಭಿಪ್ರಾಯಪಟ್ಟರು. ಶ್ರೀ ಅರಮೇರಿ ಕಳಂಚೇರಿ ಮಠದಲ್ಲಿ ನಡೆದ ‘ಹೊಂಬೆಳಕು ಕಿರಣ 248’ ಮಾಸಿಕ ತತ್ತ್ವಚಿಂತನಾಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಸುದೀರ್ಘ ವೃತ್ತಿಜೀವನದ ಅನುಭವಗಳನ್ನು ಹಂಚಿಕೊಂಡರು. ಇಂದಿನ ವಿದ್ಯಾರ್ಥಿಗಳು ಕೇವಲ ಅಂಕಗಳು ಹಾಗೂ ಕಾಗದದ ಪದವಿಗಳಿಗೆ ಸೀಮಿತರಾಗಬಾರದು. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ವ್ಯಾಮೋಹದಿಂದ ಹೊರಬಂದು, ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು. ಪಕ್ಕದ ಮನೆಯವರೊಂದಿಗೆ ಬೆರೆಯದ ಸಂಕುಚಿತ ಮನೋಭಾವ ಹೆಚ್ಚುತ್ತಿರುವುದು ವಿಷಾದನೀಯ. ವಿದ್ಯಾರ್ಥಿಗಳು ಉತ್ತಮ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಸಮಾಜಮುಖಿಯಾಗಿ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಹುಣಸೂರು ತಾಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಡಾ. ರೇಣುಕ ಪ್ರಸಾದ್ ಕೆ.ಎಸ್. ಅವರು ವ್ಯಕ್ತಿತ್ವದ ಘನತೆ ಹಾಗೂ ಶೈಕ್ಷಣಿಕ ಜವಾಬ್ದಾರಿ ಕುರಿತು ಉಪನ್ಯಾಸ ನೀಡಿದರು. ಕಾಯಕಯೋಗಿ ಬಸವಣ್ಣ ಹಾಗೂ ಅಕ್ಕಮಹಾದೇವಿಯವರ ವಚನಗಳನ್ನು ಉಲ್ಲೇಖಿಸಿದ ಅವರು, ಮನುಷ್ಯ ಹೇಗಿರಬೇಕು ಎಂಬುದರ ಕುರಿತು ಗಹನವಾಗಿ ವಿವರಿಸಿದರು. ಬಸವಣ್ಣನವರ ಕಾಯಕ ಕ್ರಾಂತಿ ಹಾಗೂ ಅಕ್ಕಮಹಾದೇವಿಯವರ ವಚನಗಳ ಸಾರವನ್ನು ವಿವರಿಸಿದ ಅವರು, ‘ಕಾಯಕವೇ ಕೈಲಾಸ’ ಎಂಬ ತತ್ತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಅಕ್ಕಮಹಾದೇವಿಯವರು ಭೌತಿಕ ಪ್ರಪಂಚದ ಮೋಹವನ್ನು ತೊರೆದು ಅಂತರಂಗದ ಶುದ್ಧಿಯನ್ನು ಸಾಧಿಸಿದಂತೆ, ಇಂದಿನ ಮನುಷ್ಯನು ಜಾತಿ, ಧರ್ಮ, ಮತಗಳ ಗಡಿಯನ್ನು ಮೀರಿ ಮೊದಲು ಪರಿಶುದ್ಧವಾದ ಮನುಷ್ಯತ್ವವನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು. ಮನುಷ್ಯನ ಆಲೋಚನೆಗಳು ಸಂಕುಚಿತವಾಗಿರಬಾರದು. ಬುದ್ಧಿಯನ್ನು ಸನ್ಮಾರ್ಗದಲ್ಲಿ ಇಟ್ಟುಕೊಂಡು, ಪ್ರತಿಯೊಂದನ್ನೂ ಕೇವಲ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ನೋಡುವ ಪ್ರವೃತ್ತಿಯನ್ನು ಬಿಡಬೇಕು ಎಂದು ಸಲಹೆ ನೀಡಿದರು. ಹಿಂದಿನ ಕಾಲದ ಶಿಕ್ಷಣಕ್ಕೂ ಇಂದಿನ ಶಿಕ್ಷಣಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಶಿಕ್ಷಣದ ಗುಣಮಟ್ಟ ಕುಸಿಯುತ್ತಿರುವ ಸಂದರ್ಭದಲ್ಲಿ ಕೇವಲ ಪದವಿ ಪಡೆಯುವ ಆತುರಕ್ಕೆ ಒಳಗಾಗದೆ, ಒಳಗಿನಿಂದ ಗಟ್ಟಿಯಾದ ಶೈಕ್ಷಣಿಕ ಅರ್ಹತೆ ಹಾಗೂ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಗುರುವಿನ ಮಹತ್ವವನ್ನು ಅರಿತು ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದು ಹೇಳಿದರು. ಇಂದಿನ ಯುವಜನತೆ ಸಾಮಾಜಿಕ ಜಾಲತಾಣಗಳು ಹಾಗೂ ರೀಲ್ಸ್‌ಗಳ ವ್ಯಾಮೋಹಕ್ಕೆ ಒಳಗಾಗಿ ತಪ್ಪು ದಾರಿಗೆ ಸಾಗುತ್ತಿರುವುದು ಖಂಡನೀಯ. ಮಾನವ ಸಂಬಂಧಗಳೂ ಎಚ್ಚರ ತಪ್ಪಿದರೆ ಕಳಚಿಹೋಗಬಹುದು. ಒಬ್ಬರು ಮಾಡಿದರೆ ಅದು ಊಟ, ಹತ್ತು ಜನ ಸೇರಿ ಮಾಡಿದರೆ ಹಬ್ಬದ ಊಟ ಎಂಬಂತೆ ಒಗ್ಗಟ್ಟು ಹಾಗೂ ಸಾಮರಸ್ಯದಿಂದ ಬದುಕಬೇಕು ಎಂದು ಕರೆ ನೀಡಿದರು. ಪ್ರಕೃತಿಯೊಂದಿಗೆ ಒಡನಾಟ ಇಟ್ಟುಕೊಂಡು ಬದುಕು ಕಟ್ಟಿಕೊಳ್ಳಬೇಕು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಹಾಗೂ ಸಾಮರ್ಥ್ಯದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಮನುಷ್ಯ ಎಷ್ಟೇ ದೊಡ್ಡ ಹುದ್ದೆಗೆ ಏರಿದರೂ, ಸಮಾಜದಲ್ಲಿ ಆತನ ವ್ಯಕ್ತಿತ್ವದ ಘನತೆ ಹಾಗೂ ಸಮಾಜಮುಖಿ ಚಿಂತನೆಯೇ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
:: ನೈತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣ ಅಗತ್ಯ :: ಶ್ರೀ ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ಇಂದಿನ ಸಮಾಜ ಹಾಗೂ ವಿದ್ಯಾರ್ಥಿ ಸಮುದಾಯಕ್ಕೆ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಅತ್ಯಂತ ಅಗತ್ಯವಾಗಿದೆ ಎಂದರು. ಹಿಂದಿನ ಕಾಲದ ಶಿಕ್ಷಣ ವ್ಯವಸ್ಥೆಗೂ ಇಂದಿನ ಶಿಕ್ಷಣ ವ್ಯವಸ್ಥೆಗೂ ಬಹಳ ವ್ಯತ್ಯಾಸವಿದೆ. ಅಂದಿನ ಕಾಲದಲ್ಲಿ ಕೇವಲ ಅಕ್ಷರಜ್ಞಾನ ಅಥವಾ ಬೌದ್ಧಿಕ ಶಿಕ್ಷಣಕ್ಕೆ ಮಾತ್ರ ಒತ್ತು ನೀಡದೆ, ನೈತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣಕ್ಕೂ ಮಹತ್ವ ನೀಡಲಾಗುತ್ತಿತ್ತು. ಬದುಕಿನಲ್ಲಿ ಕೇವಲ ಪುಸ್ತಕದ ಜ್ಞಾನವಿದ್ದರೆ ಸಾಲದು. ಜೀವನವನ್ನು ಹೇಗೆ ಎದುರಿಸಬೇಕು, ಸವಾಲುಗಳನ್ನು ಎದುರಿಸುವ ಗಟ್ಟಿತನವನ್ನು ಹೇಗೆ ರೂಢಿಸಿಕೊಳ್ಳಬೇಕು ಎಂಬ ಅನುಭವದ ಮಾಗುವಿಕೆಯೂ ಪ್ರತಿಯೊಬ್ಬ ವಿದ್ಯಾರ್ಥಿಗೆ ಅಗತ್ಯ ಎಂದು ಹೇಳಿದರು. ತಾಂತ್ರಿಕತೆ ಮುಂದುವರಿಯುತ್ತಿರುವಂತೆ ಯುವ ಪೀಳಿಗೆಯ ಆಲೋಚನೆಗಳಲ್ಲೂ ಬದಲಾವಣೆಯಾಗುತ್ತಿದೆ. ಆದರೆ ಈ ಬದಲಾವಣೆ ವಿನಾಶದತ್ತ ಸಾಗದೆ ಸನ್ಮಾರ್ಗದತ್ತ ಕೊಂಡೊಯ್ಯಬೇಕು. ಆಧುನಿಕತೆಯ ಭರಾಟೆಯಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ಮರೆಯದೆ, ಆಧ್ಯಾತ್ಮಿಕ ಚಿಂತನೆ ಹಾಗೂ ಅಂತರಂಗದ ಶಾಂತಿಯನ್ನು ರೂಢಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಿಸಬೇಕು ಎಂದು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಚಾರಗಳನ್ನು ಹಂಚಿಕೊಂಡ ಅತಿಥಿಗಳಾದ ಶ್ರೀಶೈಲ ಬೀಳಗಿ ಹಾಗೂ ಡಾ. ರೇಣುಕ ಪ್ರಸಾದ್ ಅವರನ್ನು ಶ್ರೀಮಠದ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ರೇಣುಕ ಪ್ರಸಾದ್ ಅವರ ಪತ್ನಿ ಸುಜಾತಾ, ವಿರಾಜಪೇಟೆಯ ವೈದ್ಯರು ಹಾಗೂ ಪಕ್ಷಿ ತಜ್ಞರಾದ ಡಾ. ನರಸಿಂಹನ್, ಸಾಹಿತಿ ಗಿರೀಶ್ ಕಿಗ್ಗಾಲು, ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಯೋಗ ಗುರು ಪಿ.ಎ. ಲಕ್ಷ್ಮಿನಾರಾಯಣ, ಕೃಷಿಕರಾದ ತಿಮ್ಮಪ್ಪಯ್ಯ ಹಾಗೂ ಆಶಾ ತಿಮ್ಮಪ್ಪಯ್ಯ, ಶಿಕ್ಷಕರಾದ ಮೈಥಿಲಿ ರಾವ್, ಸುಧಾಕರ್, ಸೀತಾಲಕ್ಷ್ಮಿ, ವೈಲೇಶ್, ಡಿ. ಮಂಜುನಾಥ್, ರಜಿತ ಕಾರ್ಯಪ್ಪ ಸೇರಿದಂತೆ ಗಣ್ಯರು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಯಶಸ್ ಗೌಡ ಸ್ವಾಗತಿಸಿದರು. ಶಿಕ್ಷಕಿ ಚೈತ್ರ ನಿರೂಪಿಸಿದರು. ವರ್ಷಿಣಿ ವಂದನಾರ್ಪಣೆ ಸಲ್ಲಿಸಿದರು. ಉದ್ಘಾಟಕರಾದ ಶ್ರೀಶೈಲ ಬೀಳಗಿ ಅವರ ಪರಿಚಯವನ್ನು ಧೀರಜ್ ಗೌಡ ಹಾಗೂ ಉಪನ್ಯಾಸಕ ಡಾ. ರೇಣುಕ ಪ್ರಸಾದ್ ಅವರ ಪರಿಚಯವನ್ನು ವಿದ್ಯಾರ್ಥಿನಿ ಸೋನಾ ಮಾಡಿಕೊಟ್ಟರು.

















