ಮಡಿಕೇರಿ, NEWS DESK ಅ.8: ಶತಮಾನೋತ್ಸವ ಕಂಡಿರುವ ಹೆಮ್ಮೆಯ ಸಂಸ್ಥೆ ಕೊಡಗು ಗೌಡ ವಿದ್ಯಾ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಅ.11ರಂದು ಬೆಳಿಗ್ಗೆ 10 ಗಂಟೆಗೆ ಮಡಿಕೇರಿಯ ಕೊಡಗು ಗೌಡ ಸಮಾಜದಲ್ಲಿ ನಡೆಯಲಿದೆ. ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ವಿದ್ಯಾನಿಧಿ ದಾನಿಗಳು ಹಾಗೂ ಉದ್ಯಮಿ ಮುಕ್ಕಾಟಿ ಎ. ಮನೋಜ್ ಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ವಿದ್ಯಾನಿಧಿಯ ದಾನಿಗಳಾದ ನಿಕಟಪೂರ್ವ ಅಧ್ಯಕ್ಷರು ಹಾಗೂ ಉದ್ಯಮಿ ಹೊಸೂರು ರಮೇಶ್ ಜೋಯಪ್ಪ, ನಿವೃತ್ತ ಪ್ರಾಂಶುಪಾಲರಾದ ತೆಕ್ಕಡೆ ಗುಲಾಬಿ ಜನಾರ್ಧನ, ಸಂಘದ ಮಾಜಿ ನಿರ್ದೇಶಕ ಹಾಗೂ ಕಾಫಿ ಬೆಳೆಗಾರ ಕುಕ್ಕುನೂರು ನಾಣಯ್ಯ, ಚೇರಂಬಾಣೆ ಬಿ.ಬಾಡಗದ ಕಾಫಿ ಬೆಳೆಗಾರ ತೊತ್ತಿಯನ ಕೀರ್ತಿಕುಮಾರಿ ಮೋಹನ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. *ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ* ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೊಕ್ಕಲೆ ವಿ. ಸುಮಂತ್, ನಡುವಟ್ಟಿರ ಎಂ. ಬಿಪಿನ್ ಅಚ್ಚಪ್ಪ, ಕೆ.ಬಿ. ರೀಮಾ ಜಯಪ್ರಕಾಶ್, ಅಡಿಕೇರಿ ಎಸ್. ದಾಮಿನಿ, ಮೊಟ್ಟೆರ ಜೆ. ಯಾಶಿಕಾ ಹಾಗೂ ಸಿರಕಜೆ ಎಸ್. ಮೌಲ್ಯ ಶ್ರೀಧರ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. *94 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ* ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 38 ವಿದ್ಯಾರ್ಥಿಗಳು, ಪಿಯುಸಿಯಲ್ಲಿ 42 ವಿದ್ಯಾರ್ಥಿಗಳು, ಪದವಿಯಲ್ಲಿ 11 ವಿದ್ಯಾರ್ಥಿಗಳು ಹಾಗೂ ಸಿಇಟಿಯಲ್ಲಿ ಸಾಧನೆ ಮಾಡಿದ ಮೂರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಇದರೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನೂ ಸನ್ಮಾನಿಸಲಾಗುವುದು ಎಂದು ಅಂಬೆಕಲ್ಲು ನವೀನ್ ಕುಶಾಲಪ್ಪ ತಿಳಿಸಿದರು. *ಶೈಕ್ಷಣಿಕ ಪ್ರಗತಿಗೆ ನಿರಂತರ ಸೇವೆ* 1908ರಲ್ಲಿ ಸ್ಥಾಪನೆಯಾದ ಕೊಡಗು ಗೌಡ ವಿದ್ಯಾ ಸಂಘವು ಗೌಡ ಸಮುದಾಯದ ಶೈಕ್ಷಣಿಕ ಪ್ರಗತಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸುವುದರ ಜೊತೆಗೆ ಗ್ರಾಮೀಣ ಹಿನ್ನೆಲೆಯ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುನ್ನಡೆಯಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಸಂಸ್ಥೆಯ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆಯಲು ಉದಾರ ಮನಸ್ಸಿನ ದಾನಿಗಳ ಕೊಡುಗೆ ಪ್ರಮುಖವಾಗಿದೆ. ಈ ವರ್ಷವೂ ಪ್ರತಿಭಾ ಪುರಸ್ಕಾರದ ಜೊತೆಗೆ ಕ್ರೀಡೆ, ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ, ಕಿರು ಕೊಡುಗೆಗಳ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ. ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡು ಸಾಧಕರನ್ನು ಪ್ರೋತ್ಸಾಹಿಸುವಂತೆ ಸಂಘದ ಅಧ್ಯಕ್ಷರು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಅಮೆ ಸಿ. ಸೀತಾರಾಮ್, ಕಾರ್ಯದರ್ಶಿ ಪೇರಿಯನ ಕೆ. ಉದಯಕುಮಾರ್, ಸಹ ಕಾರ್ಯದರ್ಶಿ ತಳೂರು ಕೆ. ದಿನೇಶ್ ಕುಮಾರ್, ನಿರ್ದೇಶಕರಾದ ಮೂಲೆಮಜಲು ಎಂ. ಮನೋಜ್ ಕುಮಾರ್ ಹಾಗೂ ಪುದಿಯನೆರವನ ರೇವತಿ ರಮೇಶ್ ಉಪಸ್ಥಿತರಿದ್ದರು.

















