ಮಡಿಕೇರಿ, NEWS DESK ಅ.8: ನಗರದ ಸಂಪಿಗೆಕಟ್ಟೆ ಮೂಲಕ ಮಹದೇವಪೇಟೆ ಸಂಪರ್ಕಿಸುವ ರಸ್ತೆಯನ್ನು ರೂ.85 ಲಕ್ಷ ವೆಚ್ಚದಲ್ಲಿ ಸರ್ವಋತು ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಮೊದಲ ಹಂತದಲ್ಲಿ ನಿರ್ಮಿಸಲಾದ 80 ಮೀಟರ್ ಕಾಂಕ್ರೀಟ್ ರಸ್ತೆಯನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು.
ರಸ್ತೆಯ ಕಾಮಗಾರಿಯ ಗುಣಮಟ್ಟ ಪರಿಶೀಲಿಸುವ ಉದ್ದೇಶದಿಂದ ಶಾಸಕರು ದ್ವಿಚಕ್ರ ವಾಹನದಲ್ಲಿ ಸಂಚರಿಸಿ ರಸ್ತೆ ಪರಿಶೀಲನೆ ನಡೆಸಿದರು. ಉಳಿದ ರಸ್ತೆಯ ದುರಸ್ತಿ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಎರಡೂ ಬದಿಗಳಲ್ಲಿ ವೆಟ್ ಮಿಕ್ಸ್ ಅಳವಡಿಸಿ, ಬಳಿಕ ಡಾಮರೀಕರಣ ಕಾಮಗಾರಿ ನಡೆಸುವಂತೆ ಸೂಚಿಸಿದರು.
ರಸ್ತೆಯ ಸುದೀರ್ಘ ಬಾಳಿಕೆ ಹಾಗೂ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಎರಡೂ ಬದಿಗಳಲ್ಲಿ ಸುಸಜ್ಜಿತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಕಾಮಗಾರಿಯಲ್ಲಿ ಗುಣಮಟ್ಟವನ್ನು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು ಎಂದು ಗುತ್ತಿಗೆದಾರರು, ನಗರಸಭಾ ಪೌರಾಯುಕ್ತರು ಹಾಗೂ ಇಂಜಿನಿಯರ್‌ಗೆ ಶಾಸಕರು ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಪಿಗೆಕಟ್ಟೆ ನಾಗರಿಕರ ಪರವಾಗಿ ಶಾಸಕರನ್ನು ಅಭಿನಂದಿಸಿ ಗೌರವಿಸಲಾಯಿತು.
25 ವರ್ಷಗಳಿಂದ ದುರಸ್ತಿ ಮಾತ್ರ: ತೆನ್ನಿರ ಮೈನಾ
ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಮಾತನಾಡಿ, ಸಂಪಿಗೆಕಟ್ಟೆ–ಮಹದೇವಪೇಟೆ ಸಂಪರ್ಕ ರಸ್ತೆಯಲ್ಲಿ ಕಳೆದ 25 ವರ್ಷಗಳಿಂದ ದುರಸ್ತಿ ಕಾಮಗಾರಿಗಳನ್ನು ಮಾತ್ರ ನಡೆಸಲಾಗುತ್ತಿತ್ತು. ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರ ವಿಶೇಷ ಪ್ರಯತ್ನದ ಫಲವಾಗಿ ಇದೀಗ ಸರ್ವಋತು ಕಾಂಕ್ರೀಟ್ ರಸ್ತೆ ನಿರ್ಮಾಣವಾಗುತ್ತಿದೆ. ಇದಕ್ಕಾಗಿ ಸಾರ್ವಜನಿಕರ ಪರವಾಗಿ ಶಾಸಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಪಿ. ಕಲಾವತಿ, ಪೌರಾಯುಕ್ತ ಹೆಚ್.ಆರ್. ರಮೇಶ್, ವಾರ್ಡ್ ಸದಸ್ಯ ಕೆ.ಎಸ್. ರಮೇಶ್, ನಾಮ ನಿರ್ದೇಶಿತ ಸದಸ್ಯ ಸದಾ ಮುದ್ದಪ್ಪ, ಮುತ್ತುರಾಜ್, ಮೂಡಾ ಅಧ್ಯಕ್ಷ ಬಿ.ವೈ. ರಾಜೇಶ್, ಕಾಂಗ್ರೆಸ್ ಮುಖಂಡರಾದ ಟಿ.ಎಂ. ಅಯ್ಯಪ್ಪ, ಪ್ರಕಾಶ್ ಆಚಾರ್ಯ, ಬೂತ್ ಅಧ್ಯಕ್ಷ ರಿಯಾಝದ್ದೀನ್, ಕೋಚನ ಚೇತನ್, ಆರ್.ಪಿ. ಚಂದ್ರಶೇಖರ್, ಮಿನಾಝ್ ಪ್ರವೀಣ್, ಲೀಲಾ ಶೇಷಮ್ಮ, ಸಂಪಿಗೆಕಟ್ಟೆ ಯುವಕ ಸಂಘದ ಗೌರವಾಧ್ಯಕ್ಷ ಈ.ಕೆ. ಶಶಿಧರನ್, ಅಧ್ಯಕ್ಷ ಪ್ರಮೋದ್, ಕೊಡಗು ಅಭಿವೃದ್ಧಿ ಸಮಿತಿ ಸಂಚಾಲಕ ಪ್ರಸನ್ನ ಭಟ್, ಕನ್ನಂಡ ಸುಧಾ ಬೊಳ್ಳಪ್ಪ, ಕನ್ನಂಡ ವಾಸು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

















