ಮಡಿಕೇರಿ, NEWS DESK ಅ. 9: ಕೊಡಗು ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎನ್ನಲಾದ ಬಾಂಗ್ಲಾದೇಶಿ ವಲಸಿಗರನ್ನು ಪತ್ತೆಹಚ್ಚಿ, ಕಾನೂನು ಪ್ರಕ್ರಿಯೆಯ ಮೂಲಕ ಗಡಿಪಾರು ಮಾಡಬೇಕು ಹಾಗೂ ದೇಶದ ಆಂತರಿಕ ಭದ್ರತೆಗಾಗಿ ಕಠಿಣ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿ ಕೊಡಗು ಸುರಕ್ಷ ಆಂದೋಲನ ಸಮಿತಿ ಹಮ್ಮಿಕೊಂಡಿದ್ದ 12 ದಿನಗಳ ಜನಜಾಗೃತಿ ಜಾಥಾ ಶುಕ್ರವಾರ ಮಡಿಕೇರಿಯಲ್ಲಿ ಸಮಾರೋಪಗೊಂಡಿತು.
ಕುಟ್ಟದಿಂದ ಆರಂಭಗೊಂಡ ಜಾಥಾ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಚರಿಸಿ 48 ಕೇಂದ್ರಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ ಬಳಿಕ ಜಿಲ್ಲಾ ಕೇಂದ್ರ ಮಡಿಕೇರಿಯನ್ನು ತಲುಪಿತು. ಮೂರ್ನಾಡು ಮಾರ್ಗವಾಗಿ ಶುಕ್ರವಾರ ಬೆಳಗ್ಗೆ ನಗರಕ್ಕೆ ಆಗಮಿಸಿದ ಭಾರತ ಮಾತೆಯ ಭಾವಚಿತ್ರವಿದ್ದ ಮಂಟಪವನ್ನು ಪುಷ್ಪಾರ್ಚನೆ ಮೂಲಕ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಭಾರತ ಮಾತೆ ಹಾಗೂ ಜನರಲ್ ಕೆ.ಎಸ್. ತಿಮ್ಮಯ್ಯ ಅವರಿಗೆ ಗೌರವ ಸಲ್ಲಿಸಲಾಯಿತು.
ನಂತರ ಕೊಡಗು ಸುರಕ್ಷ ಆಂದೋಲನ ಸಮಿತಿಯ ಪ್ರಮುಖರು ಮತ್ತು ಕಾರ್ಯಕರ್ತರು ಗಾಂಧಿ ಮೈದಾನದಿಂದ ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದವರೆಗೆ ಘೋಷಣೆಗಳೊಂದಿಗೆ ಜಾಗೃತಿ ಜಾಥಾ ನಡೆಸಿದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ನವದೆಹಲಿಯ ಲೀಗಲ್ ಇಂಡಿಯಾ ಡಾಟ್ ಕಾಂ ಸಂಸ್ಥಾಪಕ ಭರತ್ ಭೂಷಣ್, ಅಕ್ರಮ ವಲಸೆಯಿಂದ ಉಂಟಾಗಬಹುದಾದ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರ ಮತ್ತು ರಾಜಕಾರಣಿಗಳನ್ನೇ ಅವಲಂಬಿಸದೆ ಸ್ಥಳೀಯರು ಸಂಘಟಿತರಾಗಿ ಧ್ವನಿ ಎತ್ತಬೇಕು ಎಂದು ಹೇಳಿದರು. ವಿವಿಧ ದೇಶಗಳಲ್ಲಿ ಅಕ್ರಮ ವಲಸೆಯಿಂದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳು ಉಂಟಾಗುತ್ತಿರುವುದನ್ನು ಉಲ್ಲೇಖಿಸಿದ ಅವರು, ಸ್ಥಳೀಯ ಸಂಘಟನೆಗಳು ಸರ್ಕಾರದ ಗಮನ ಸೆಳೆದು ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ರಾಷ್ಟ್ರೀಯ ಭಾವನೆಗಳೇ ನಮ್ಮ ಶಕ್ತಿ
ಮುಖ್ಯ ಭಾಷಣಕಾರರಾಗಿ ಮಾತನಾಡಿದ ರಾಜ್ಯ ಬಿಜೆಪಿ ವಕ್ತಾರ ಎಚ್.ಎನ್. ಚಂದ್ರಶೇಖರ್, ಭಾರತದ ಧಾರ್ಮಿಕ ಮತ್ತು ರಾಷ್ಟ್ರೀಯ ಪ್ರಜ್ಞೆಗಳು ದೇಶದ ನಾಗರಿಕತೆಯ ಉಳಿವಿನಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದರು. ಕೊಡಗಿನಲ್ಲಿ ಕಾರ್ಮಿಕರಿಗೆ ಉದ್ಯೋಗ ನೀಡುವ ಸಂದರ್ಭದಲ್ಲಿ ಸ್ಥಳೀಯರು ಜಾಗರೂಕರಾಗಿರಬೇಕು. ಹಣ ಉಳಿತಾಯದ ಉದ್ದೇಶದಿಂದ ಕಾನೂನುಬಾಹಿರ ವಲಸೆಗೆ ಪರೋಕ್ಷವಾಗಿ ಉತ್ತೇಜನ ನೀಡುವಂತಾಗಬಾರದು ಎಂದು ಅಭಿಪ್ರಾಯಪಟ್ಟರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಕ್ಯಾಪ್ಟನ್ ಬಿದ್ದಂಡ ನಾಣಿ ನಾಣಯ್ಯ ಮಾತನಾಡಿ, ಅಕ್ರಮವಾಗಿ ದೇಶ ಪ್ರವೇಶಿಸಿ ನೆಲೆಸುವವರ ಕುರಿತು ಸ್ಥಳೀಯರು ಎಚ್ಚರಿಕೆ ವಹಿಸಬೇಕು. ಅನುಮಾನಾಸ್ಪದ ಅಕ್ರಮ ವಲಸೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
48 ಕೇಂದ್ರಗಳಲ್ಲಿ ಜಾಗೃತಿ ಕಾರ್ಯಕ್ರಮ
ಕೊಡಗು ಸುರಕ್ಷ ಆಂದೋಲನ ಸಮಿತಿಯ ಸಂಯೋಜಕ ಕುಕ್ಕೇರ ಅಜಿತ್ ಪ್ರಾಸ್ತಾವಿಕವಾಗಿ ಮಾತನಾಡಿ, ಕುಟ್ಟದಿಂದ ಮಡಿಕೇರಿವರೆಗೆ 12 ದಿನಗಳ ಕಾಲ ನಡೆದ ಜಾಗೃತಿ ಜಾಥಾದಲ್ಲಿ ಜಿಲ್ಲೆಯ 48 ಕೇಂದ್ರಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎನ್ನಲಾದ ಬಾಂಗ್ಲಾದೇಶಿ ವಲಸಿಗರನ್ನು ಗುರುತಿಸಿ, ಕಾನೂನುಬದ್ಧ ಕ್ರಮದ ಮೂಲಕ ಗಡಿಪಾರು ಮಾಡಬೇಕು ಎಂಬುದು ಆಂದೋಲನದ ಪ್ರಮುಖ ಆಗ್ರಹವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಶಾಸಕ ಕೆ.ಜಿ. ಬೋಪಯ್ಯ ಸೇರಿದಂತೆ ಸಮಿತಿಯ ಪ್ರಮುಖರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

















