ಮಡಿಕೇರಿ, NEWS DESK ಅ. 9: ಸಿದ್ದಾಪುರ ಸಮೀಪದ ಘಟ್ಟದಳ್ಳದಲ್ಲಿ ಗುರುವಾರ ರಾತ್ರಿ ಹುಲಿಯೊಂದು ರಸ್ತೆ ದಾಟುತ್ತಿರುವ ದೃಶ್ಯ ಕಂಡುಬಂದಿದ್ದು, ಸುತ್ತಮುತ್ತಲಿನ ಪ್ರದೇಶಗಳ ಜನರಲ್ಲಿ ಆತಂಕ ಮೂಡಿಸಿದೆ. ಲಾರಿ ಚಾಲಕರೊಬ್ಬರು ಹುಲಿ ರಸ್ತೆ ದಾಟುತ್ತಿದ್ದ ದೃಶ್ಯವನ್ನು ಸೆರೆಹಿಡಿದಿದ್ದಾರೆ.
ಹುಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ರಾತ್ರಿ ವೇಳೆ ಸಂಚರಿಸುವಾಗ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ. ಹುಲಿ ಜನವಸತಿ ಪ್ರದೇಶಗಳಿಗೆ ಪ್ರವೇಶಿಸದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಹುಲಿಯನ್ನು ಮರಳಿ ಕಾಡಿನತ್ತ ಹಿಮ್ಮೆಟ್ಟಿಸಿದ್ದಾರೆ.
ವಿರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನಿತಾ ಚೌಹಾನ್, ತಿತಿಮತಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಹಾಗೂ ವಲಯ ಅರಣ್ಯಾಧಿಕಾರಿ ಮತ್ತು ಪ್ರೊಬೇಷನರಿ ಅಧಿಕಾರಿ ಕುಮಾರಿ ಆಯೀಷಾ ಫಾತಿಮಾ ಎಂ.ಸಿ.ಎಫ್. ಅವರ ಮಾರ್ಗದರ್ಶನದಲ್ಲಿ, ಚೆನ್ನಂಗಿ ಶಾಖೆಯ ಉಪವಲಯ ಅರಣ್ಯಾಧಿಕಾರಿ ಶಶಿ ಪಿ.ಟಿ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಕಾರ್ಯಾಚರಣೆಯಲ್ಲಿ ಇಟಿಎಫ್ ಉಪವಲಯ ಅರಣ್ಯಾಧಿಕಾರಿ ದೇವರಾಜ್, ಚೆನ್ನಂಗಿ ಆರ್‌ಆರ್‌ಟಿ ಸಿಬ್ಬಂದಿ, ಅಮ್ಮತ್ತಿ ಆರ್‌ಆರ್‌ಟಿ ಸಿಬ್ಬಂದಿ ಹಾಗೂ ಇಟಿಎಫ್ ಸಿಬ್ಬಂದಿ ಪಾಲ್ಗೊಂಡಿದ್ದರು.
ರಾತ್ರಿ ವೇಳೆ ಕಾಡುಪ್ರಾಣಿಗಳು ರಸ್ತೆ ಹಾಗೂ ತೋಟದ ಪ್ರದೇಶಗಳಿಗೆ ಬರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಹುಲಿ ಕಾಣಿಸಿಕೊಂಡಲ್ಲಿ ಅದರ ಸಮೀಪಕ್ಕೆ ತೆರಳದೆ, ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

















