ನಾಪೋಕ್ಲು, NEWS DESK ಅ. 18: ಕಾವೇರಿ ನದಿಯ ತೀರದಲ್ಲಿರುವ ಪವಿತ್ರ ಯಾತ್ರಾಸ್ಥಳ ಬಲಮುರಿಯಲ್ಲಿ ವಾರ್ಷಿಕ ಕಾವೇರಿ ಸಂಕ್ರಮಣ ಜಾತ್ರಾ ಮಹೋತ್ಸವವು ಇಂದು (ಭಾನುವಾರ) ಸಂಭ್ರಮದಿಂದ ನಡೆಯಲಿದ್ದು, ಭಕ್ತರ ಆಗಮನಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ತುಲಾ ಸಂಕ್ರಮಣದ ಸಂದರ್ಭದಲ್ಲಿ ಕಾವೇರಿ ನದಿಯ ಉಗಮಸ್ಥಾನವಾದ ತಲಕಾವೇರಿಗೆ ತೆರಳಲು ಸಾಧ್ಯವಾಗದ ಅಸಂಖ್ಯಾತ ಭಕ್ತರು ಬಲಮುರಿಗೆ ಆಗಮಿಸಿ, ಕಾವೇರಿ ತೀರ್ಥಸ್ನಾನ ಮಾಡಿ ಪುನೀತರಾಗಲಿದ್ದಾರೆ. ಪ್ರತಿವರ್ಷ ಕಾವೇರಿ ತೀರ್ಥೋದ್ಭವದ ಮರುದಿನ ಇಲ್ಲಿ ಜಾತ್ರಾ ಮಹೋತ್ಸವ ನಡೆಯುವುದು ವಾಡಿಕೆಯಾಗಿದೆ.
ಜಾತ್ರೆಯ ಅಂಗವಾಗಿ ಬೆಳಗ್ಗಿನಿಂದಲೇ ಬಲಮುರಿಯ ಪ್ರಸಿದ್ಧ ಅಗಸ್ತ್ಯೇಶ್ವರ (ಮಾಧುರಪ್ಪ) ದೇವಾಲಯ ಹಾಗೂ ಕಣ್ವ ಮುನೀಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಲಿವೆ.
ಧಾರ್ಮಿಕ ಕಾರ್ಯಕ್ರಮಗಳು: ಪ್ರಾತಃಕಾಲದಲ್ಲಿ ಕಾವೇರಿ ತೀರ್ಥಸ್ನಾನ ಹಾಗೂ ಪಿಂಡಪ್ರದಾನ ಸೇರಿದಂತೆ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಅಗಸ್ತ್ಯೇಶ್ವರ ದೇವಾಲಯದಲ್ಲಿ ಹಣ್ಣು-ಕಾಯಿ ಪೂಜೆ ಮತ್ತು ತೀರ್ಥಪ್ರಸಾದ ವಿತರಣೆ ನಡೆಯಲಿದೆ. ಬೆಳಿಗ್ಗೆ 11.30ಕ್ಕೆ ಕಾವೇರಿ ಪುರಾಣ ಬಾಳೋಪಾಟ್, ಮಧ್ಯಾಹ್ನ 12 ಗಂಟೆಗೆ ಕಾವೇರಿ ಮಹಾ ಆರತಿ ಹಾಗೂ 12.30ಕ್ಕೆ ಅಗಸ್ತ್ಯೇಶ್ವರ ದೇವಾಲಯದಲ್ಲಿ ಮಹಾಪೂಜೆ ನೆರವೇರಲಿದೆ. ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ.
ತಲಕಾವೇರಿಯಷ್ಟೇ ಬಲಮುರಿಯೂ ಪವಿತ್ರ ಪುಣ್ಯಕ್ಷೇತ್ರವೆಂಬ ನಂಬಿಕೆ ಭಕ್ತರಲ್ಲಿದೆ. ಇಲ್ಲಿರುವ ಕಣ್ವೇಶ್ವರ ಹಾಗೂ ಅಗಸ್ತ್ಯೇಶ್ವರ ದೇವಾಲಯಗಳು ಪ್ರಮುಖ ಆಕರ್ಷಣೆಗಳಾಗಿವೆ. ವಿಶೇಷವಾಗಿ, ಇಲ್ಲಿ ಪಿಂಡಪ್ರದಾನ ಮಾಡಿದರೆ ತಲಕಾವೇರಿಯಲ್ಲಿ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ ಎಂಬುದು ಭಕ್ತರ ದೃಢ ನಂಬಿಕೆಯಾಗಿದೆ.
ಕಾವೇರಿ ನದಿಯ ಇನ್ನೊಂದು ತೀರದಲ್ಲಿರುವ ಐತಿಹಾಸಿಕ ಕಣ್ವ ಮುನೀಶ್ವರ ದೇವಾಲಯವು ಗ್ರಾಮಸ್ಥರ ಸಕ್ರಿಯ ಸಹಕಾರದೊಂದಿಗೆ ಅಭಿವೃದ್ಧಿ ಹೊಂದುತ್ತಿದೆ. ದೇವಾಲಯದ ಗರ್ಭಗುಡಿ, ಮುಖಮಂಟಪ ಹಾಗೂ ಪೌಳಿಗಳನ್ನು ನವೀಕರಿಸಿ ಜೀರ್ಣೋದ್ಧಾರ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ ಜಾತ್ರೆಯ ಅಂಗವಾಗಿ ಗ್ರಾಮಸ್ಥರು ದೇವಾಲಯದ ಸುತ್ತಮುತ್ತ ಸ್ವಚ್ಛತಾ ಕಾರ್ಯಗಳನ್ನು ಶ್ರದ್ಧೆಯಿಂದ ನಡೆಸಿದ್ದಾರೆ.





































