ವಿರಾಜಪೇಟೆ ಅ.19 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರಾಜಪೇಟೆ ಕಚೇರಿಯಲ್ಲಿ ನವರಾತ್ರಿ ಅಂಗವಾಗಿ ಕಚೇರಿ ಪೂಜೆ ಹಾಗೂ ಶಾರದಾ, ಲಕ್ಷ್ಮಿ ಪೂಜಾ ಮಹೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ವಿವಿಧ ಬಗೆಯ ಹೂವುಗಳಿಂದ ಹಾಗೂ ಬಣ್ಣಬಣ್ಣದ ರಂಗೋಲಿಯಿಂದ ಕಚೇರಿಯನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಶ್ರೀ ಲಕ್ಷ್ಮಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಯೋಜನಾ ನಿರ್ದೇಶಕ ವಿಠಲ್ ಸಾಲ್ಯಾನ್ ಮಾತನಾಡಿ, ನವರಾತ್ರಿಯ ಸಂದರ್ಭದಲ್ಲಿ ಶಕ್ತಿ ದೇವತೆಗಳನ್ನು ಆರಾಧಿಸುವ ಮೂಲಕ ಒಂಬತ್ತು ದಿನಗಳ ಕಾಲ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ. ಇದರ ಅಂಗವಾಗಿ ಕಚೇರಿಯಲ್ಲಿ ದೇವಿಯ ಆರಾಧನೆ ನಡೆಸಲಾಗಿದೆ. ಶ್ರೀ ಕ್ಷೇತ್ರದ ಮಂಜುನಾಥ ಸ್ವಾಮಿ ಹಾಗೂ ದೇವತೆಗಳ ಅನುಗ್ರಹದಿಂದ ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಿ ಕರುನಾಡು ಸಮೃದ್ಧವಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಹರೀಶ್, ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಉಷಾರಾಣಿ, ಕೃಷಿ ಅಧಿಕಾರಿ ವಸಂತ್, ಮೇಲ್ವಿಚಾರಕರಾದ ಶಿವಕುಮಾರ್, ತೀರ್ಥಕುಮಾರ್, ಧನೇಶ್ ಸೇರಿದಂತೆ ವಿವಿಧ ವಲಯಗಳ ಮೇಲ್ವಿಚಾರಕರು, ಯೋಜನೆಯ ಸದಸ್ಯರು, ಕಚೇರಿ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.

















