ಮಡಿಕೇರಿ NEWS DESK ಅ.21 : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕೆರೆಗೆ ಬಿದ್ದ ಪರಿಣಾಮ ಮಗು ಸೇರಿದಂತೆ ಮೂವರು ದುರ್ಮರಣಕ್ಕೀಡಾದ ಘಟನೆ ಸಿದ್ದಾಪುರ ಸಮೀಪದ ಬಾಣಂಗಾಲದಲ್ಲಿ ನಡೆದಿದೆ. ಸಿದ್ದಾಪುರ ಹೈಸ್ಕೂಲ್ ಪೈಸಾರಿ ನಿವಾಸಿ ವಿಜೇಶ್(36), ಪತ್ನಿ ಪಮಿತ(34) ಹಾಗೂ ಪುತ್ರಿ ಲಿಯಾ(4) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಮಂಗಳವಾರ ರಾತ್ರಿ ವಿಜೇಶ್ ಕುಟುಂಬ ಸಿದ್ದಾಪುರದಿಂದ ಬಾಣಂಗಾಲ ಗ್ರಾಮಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಶಿಲ್ಪಿ ಎಸ್ಟೇಟ್ನ ಕೆರೆಗೆ ಬಿದ್ದಿದೆ ಎಂದು ಹೇಳಲಾಗಿದೆ. ಬುಧವಾರ ತೋಟದ ಕಾರ್ಮಿಕರು ಕೆಲಸಕ್ಕೆ ಆಗಮಿಸಿದ ಸಂದರ್ಭ ಕೆರೆಯಲ್ಲಿ ಕಾರು ಬಿದ್ದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹಗಳನ್ನು ಹೊರತೆಗೆದು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಿದರು. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.





































