ಮಡಿಕೇರಿ NEWS DESK ಅ.21 : ಕೊಡವ ಜನಾಂಗದ ಅಸ್ತಿತ್ವ, ಗುರುತು, ಭೂಮಿ, ಭಾಷೆ ಹಾಗೂ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಅ.26ರಂದು ಬೆಳಿಗ್ಗೆ 10.30 ಗಂಟೆಗೆ ನೂರಂಬಡನಾಡಿನ ನಾಪೋಕ್ ನಲ್ಲಿ 7ನೇ ಶಾಂತಿಯುತ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ತಿಳಿಸಿದ್ದಾರೆ. ಕೊಡವಲ್ಯಾಂಡ್ಗೆ ಸಂವಿಧಾನದ 244 ಮತ್ತು 371ನೇ ವಿಧಿಗಳು ಹಾಗೂ ಐದನೇ ಮತ್ತು ಆರನೇ ಶೆಡ್ಯೂಲ್ಗಳ ಅಡಿಯಲ್ಲಿ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು. ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಸಂವಿಧಾನದ ಅಡಿಯಲ್ಲಿ ಕೊಡವ ಜನಾಂಗಕ್ಕೆ ಆದಿಮಸಂಜಾತ ಸಮುದಾಯವಾಗಿ ವಿಶೇಷ ಸಾಂವಿಧಾನಿಕ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಕೊಡವರ ಪವಿತ್ರ ಗನ್-ತೋಕ್ ಆಚರಣೆಯನ್ನು ಸಂವಿಧಾನದ 25, 26 ಮತ್ತು 28ನೇ ವಿಧಿಗಳ ಅಡಿಯಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿ ಮುಂದುವರಿಸಲು ಮಾನ್ಯತೆ ನೀಡಬೇಕು. ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯದ ಸಂಘ ಮಾದರಿಯಲ್ಲಿ ಕೊಡವ ಜನಾಂಗಕ್ಕೆ ಪ್ರತ್ಯೇಕ ಅಮೂರ್ತ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳನ್ನು ಕಲ್ಪಿಸಬೇಕು. ಕೊಡವ ಜನಾಂಗದ ಮಾತೃಭಾಷೆಯಾದ ಶಾಸ್ತ್ರೀಯ ಕೊಡವತಕ್ಕ್ ಭಾಷೆಯನ್ನು ಸಂವಿಧಾನದ ಎಂಟನೇ ಶೆಡ್ಯೂಲ್ಗೆ ಸೇರಿಸಬೇಕು. ಕೆಳದಿ ಮತ್ತು ಪಾಲೇರಿ ರಾಜರು ಹಾಗೂ ನಂತರ ಬ್ರಿಟಿಷರ ವಶಕ್ಕೆ ಹೋದ ಕೊಡವರ ವಂಶಪಾರAಪರಿಕ ಆಸ್ತಿಗಳನ್ನು ಮರಳಿ ಕೊಡವರಿಗೆ ಹಸ್ತಾಂತರಿಸಬೇಕು. 2027ರ ರಾಷ್ಟ್ರೀಯ ಜನಗಣತಿ ಹಾಗೂ ಜಾತಿ ಗಣತಿಯಲ್ಲಿ ಆದಿಮಸಂಜಾತ, ಏಕ-ಜನಾಂಗೀಯ ಪ್ರಕೃತಿ ಆರಾಧಕ ಕೊಡವರನ್ನು ಪ್ರತ್ಯೇಕವಾಗಿ ದಾಖಲಿಸಿ, ಪ್ರತ್ಯೇಕ ಕೋಡ್ ಮತ್ತು ಕಾಲಮ್ ಕಲ್ಪಿಸಬೇಕು ಎಂದು ಮಾನವ ಸರಪಳಿ ಕಾರ್ಯಕ್ರಮದಲ್ಲಿ ಒತ್ತಾಯಿಸಲಾಗುವುದು. ಕರ್ನಾಟಕ ಭೂ ಕಂದಾಯ ಕಾಯ್ದೆ ಮತ್ತು ಭೂ ಸುಧಾರಣಾ ಕಾಯ್ದೆಗಳಿಗೆ ತಿದ್ದುಪಡಿ ತಂದು ವಾಣಿಜ್ಯ ಉದ್ದೇಶದ ಭೂ ಪರಿವರ್ತನೆ ಹಾಗೂ ದೊಡ್ಡ ಪ್ರಮಾಣದ ಭೂ ಖರೀದಿಗೆ ಅವಕಾಶ ಕಲ್ಪಿಸಿರುವುದರಿಂದ ಕೊಡಗಿನ ಕೃಷಿ ಪ್ರದೇಶಗಳು, ಕಾಫಿ ತೋಟಗಳು ಮತ್ತು ಕಾವೇರಿ ನದಿಯ ಜಲಮೂಲಗಳಿಗೆ ಅಪಾಯ ಎದುರಾಗುತ್ತಿದೆ. ದೊಡ್ಡ ಪ್ರಮಾಣದ ಭೂಮಿಯಲ್ಲಿ ಮೆಗಾ ಟೌನ್ಶಿಪ್ಗಳು, ಬೃಹತ್ ರೆಸಾರ್ಟ್ಗಳು ಮತ್ತು ಬಡಾವಣೆಗಳ ನಿರ್ಮಾಣದಿಂದ ಜನಸಂಖ್ಯಾ ಸ್ವರೂಪ, ಭೂ ಬಳಕೆ ಹಾಗೂ ನಿತ್ಯಹರಿದ್ವರ್ಣ ಅರಣ್ಯ ಪ್ರದೇಶಗಳಲ್ಲಿ ಬದಲಾವಣೆ ಉಂಟಾಗುತ್ತಿದೆ ಎಂದು ಸಂಘಟನೆ ಆರೋಪಿಸಿದೆ. ಈ ಬೆಳವಣಿಗೆಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಕೊಡವರ ಭೂಮಿ, ಪರಿಸರ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಬೇಕು ಎಂದು ಎನ್.ಯು.ನಾಚಪ್ಪ ಆಗ್ರಹಿಸಿದ್ದಾರೆ. ಕೊಡವ ಜನಾಂಗದ ಅಸ್ತಿತ್ವ, ಸ್ವಾಭಿಮಾನ, ಭಾಷೆ, ಭೂಮಿ, ಸಾಂಸ್ಕೃತಿಕ ಪರಂಪರೆ ಮತ್ತು ರಾಜಕೀಯ ಹಕ್ಕುಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಮಾನವ ಸರಪಳಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





































