ಮಡಿಕೇರಿ, NEWS DESK ಅ.24: ನಗರದಲ್ಲಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವ ಹಸಿ ಮತ್ತು ಘನ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಡಿಕೇರಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು. ನಗರದ ನೂತನ ಖಾಸಗಿ ಬಸ್ ನಿಲ್ದಾಣದ ಬಳಿ ಹಸಿ ಕಸ ಸಂಸ್ಕರಣಾ ಘಟಕ ಹಾಗೂ ಐಟಿಐ ಜಂಕ್ಷನ್ ಬಳಿಯ ಜಾಗದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವ ಕುರಿತು ಚರ್ಚಿಸಿ, ಗುರುತಿಸಿರುವ ಸ್ಥಳಗಳನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲು ಸಭೆ ತೀರ್ಮಾನಿಸಿತು.
ನಗರಸಭಾ ಸಭಾಂಗಣದಲ್ಲಿ ಅಧ್ಯಕ್ಷೆ ಪಿ. ಕಲಾವತಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಶಾಸಕ ಡಾ. ಮಂತರ್ ಗೌಡ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ವಿವಿಧ ತ್ಯಾಜ್ಯ ನಿರ್ವಹಣಾ ಸಂಸ್ಥೆಗಳ ಪ್ರತಿನಿಧಿಗಳಿಂದ ಯೋಜನೆಗಳ ಕುರಿತು ಮಾಹಿತಿ ಪಡೆಯಲಾಯಿತು.
ಖಾಸಗಿ ಬಸ್ ನಿಲ್ದಾಣದ ಬಳಿ ಹಸಿ ಕಸ ಸಂಸ್ಕರಣಾ ಘಟಕ
ಹಸಿ ಕಸ ನಿರ್ವಹಣೆಗೆ ಸಂಬಂಧಿಸಿದಂತೆ ರಿ ಕ್ಯಾಪ್ ಸೊಲ್ಯೂಷನ್ ಸಂಸ್ಥೆಯ ಪ್ರತಿನಿಧಿ ಪ್ರಶಾಂತ್ ಮಾತನಾಡಿ, ಘಟಕ ಸ್ಥಾಪನೆಗೆ ಒಂದು ಎಕರೆ ಜಾಗ ಲಭ್ಯವಿದ್ದರೆ ಅನುಕೂಲವಾಗಲಿದ್ದು, ಅರ್ಧ ಎಕರೆ ಜಾಗದಲ್ಲಿಯೂ ಘಟಕ ಸ್ಥಾಪಿಸಬಹುದು ಎಂದು ತಿಳಿಸಿದರು.
ಸಂಸ್ಥೆಯು ಹಸಿ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಜೈವಿಕ ಅನಿಲ ಉತ್ಪಾದಿಸುವುದರ ಜೊತೆಗೆ ಉಳಿಕೆ ಪದಾರ್ಥಗಳನ್ನು ಗೊಬ್ಬರವಾಗಿ ಪರಿವರ್ತಿಸಿ ವಿಲೇವಾರಿ ಮಾಡಲಿದೆ. ಉತ್ಪಾದನೆಯಾಗುವ ಅನಿಲವನ್ನು ಸ್ಥಳೀಯವಾಗಿಯೇ ಬಳಸಿಕೊಳ್ಳಲು ಅವಕಾಶವಿದೆ ಎಂದು ವಿವರಿಸಿದರು.
ಘಟಕದಲ್ಲಿ ಕಸ ಸಂಗ್ರಹಣೆ, ಅದನ್ನು ಸಣ್ಣ ಗಾತ್ರಕ್ಕೆ ಸಂಸ್ಕರಿಸುವುದು, ಜೈವಿಕ ಅನಿಲ ಉತ್ಪಾದನೆ ಹಾಗೂ ಗೊಬ್ಬರದ ಸಂಸ್ಕರಣೆ ಮತ್ತು ವಿಲೇವಾರಿ ಸೇರಿದಂತೆ ಐದು ಪ್ರಮುಖ ವಿಭಾಗಗಳು ಇರಲಿವೆ. ಈ ಯೋಜನೆಯನ್ನು ‘ಡಿಸೈನ್, ಬಿಲ್ಡ್, ಆಪರೇಟ್ ಅಂಡ್ ಟ್ರಾನ್ಸ್‌ಫರ್’ (ಡಿಬಿಒಟಿ) ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುವುದು. ಸುಮಾರು 25 ವರ್ಷಗಳ ನಂತರ ಘಟಕವನ್ನು ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಸದಸ್ಯ ಅಮಿನ್ ಮೊಹಿಸಿನ್ ಮಾತನಾಡಿ, ಹಸಿ ಕಸ ನಿರ್ವಹಣೆಗಾಗಿ ಈಗಾಗಲೇ ಖಾಸಗಿ ಬಸ್ ನಿಲ್ದಾಣದ ಬಳಿಯ ಜಾಗ ಮತ್ತು ಎರಡನೇ ಮೊಣ್ಣಂಗೇರಿ ಪ್ರದೇಶವನ್ನು ಗುರುತಿಸಲಾಗಿದೆ. ಜೈವಿಕ ಅನಿಲ ಉತ್ಪಾದನೆ ಹಾಗೂ ಅದರ ಬಳಕೆಗೆ ಅನುಕೂಲವಾಗುವ ದೃಷ್ಟಿಯಿಂದ ನೂತನ ಖಾಸಗಿ ಬಸ್ ನಿಲ್ದಾಣದ ಬಳಿ ಘಟಕ ಸ್ಥಾಪಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಶಾಸಕ ಡಾ. ಮಂತರ್ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಪ್ರಶಾಂತ್, ಯೋಜನೆ ಅನುಷ್ಠಾನಕ್ಕೆ ಸುಮಾರು 9 ಕೋಟಿ ರೂ. ವೆಚ್ಚವಾಗಲಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಶಾಸಕರು, ನಗರದ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಸಮರ್ಪಕವಾಗಿ ನಡೆಯುವುದರೊಂದಿಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು. ನಗರದಲ್ಲಿ ವಾರಕ್ಕೆ ಎರಡು ಬಾರಿ ಹಸಿ ಕಸ ಸಂಗ್ರಹಿಸಲಾಗುತ್ತಿದ್ದು, ಕಸವನ್ನು ಘಟಕಕ್ಕೆ ತಲುಪಿಸುವ ಜವಾಬ್ದಾರಿಯನ್ನು ನಗರಸಭೆ ವಹಿಸಿಕೊಳ್ಳಲಿದೆ. ಉಳಿದಂತೆ ಸಂಸ್ಕರಣೆ ಮತ್ತು ವಿಲೇವಾರಿಯ ಸಂಪೂರ್ಣ ಜವಾಬ್ದಾರಿಯನ್ನು ಸಂಸ್ಥೆಯೇ ನಿರ್ವಹಿಸಬೇಕು ಎಂದು ಸ್ಪಷ್ಟಪಡಿಸಿದರು.
ಸದಸ್ಯ ರಾಜೇಶ್ ಯಲ್ಲಪ್ಪ ಅವರು ಪ್ರಸ್ತುತ ಸ್ಟೋನ್ ಹಿಲ್ ಪ್ರದೇಶದಲ್ಲಿಯೇ ಘಟಕ ಸ್ಥಾಪಿಸುವ ಕುರಿತು ಸಲಹೆ ನೀಡಿದರು. ಆದರೆ, ಅಲ್ಲಿ ಘಟಕ ಸ್ಥಾಪನೆಗೆ ಅವಕಾಶವಿಲ್ಲ ಎಂದು ಸದಸ್ಯ ಅಪ್ಪಣ್ಣ ತಿಳಿಸಿದರು.
ಅಗತ್ಯ ಜಾಗ ಒದಗಿಸಿದರೆ ಮೂರು ತಿಂಗಳೊಳಗೆ ಘಟಕ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಸಂಸ್ಥೆಯ ಪ್ರತಿನಿಧಿ ತಿಳಿಸಿದರು.
ಐಟಿಐ ಜಂಕ್ಷನ್ ಬಳಿ ಘನ ತ್ಯಾಜ್ಯ ಘಟಕ
ನಗರದ ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಐಟಿಐ ಜಂಕ್ಷನ್ ಬಳಿಯ ಜಾಗದಲ್ಲಿ ಘಟಕ ಸ್ಥಾಪಿಸುವ ಸಾಧ್ಯತೆಯ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆಯ ಪ್ರತಿನಿಧಿ ಅನಿಲ್ ಮಾತನಾಡಿ, ತಮ್ಮ ಸಂಸ್ಥೆಯು ಪ್ರತಿದಿನ ಐದು ಟನ್ ಕಸವನ್ನು ಸಂಸ್ಕರಿಸಿ ವಿಲೇವಾರಿ ಮಾಡುವ ಸಾಮರ್ಥ್ಯದ ಘಟಕ ಸ್ಥಾಪಿಸಲಿದೆ. ಭವಿಷ್ಯದಲ್ಲಿ ಹೆಚ್ಚಾಗಬಹುದಾದ ತ್ಯಾಜ್ಯದ ಪ್ರಮಾಣವನ್ನೂ ಗಮನದಲ್ಲಿಟ್ಟುಕೊಂಡು ಘಟಕದ ವಿನ್ಯಾಸ ರೂಪಿಸಲಾಗುವುದು ಎಂದು ತಿಳಿಸಿದರು.
ರೈತರ ಸಹಭಾಗಿತ್ವದಲ್ಲಿ ಹಸಿ ಕಸ ನಿರ್ವಹಣೆ
ಸಿಟಿ ಫಾರ್ಮರ್ಸ್ ಪಾರ್ಟಿಸಿಪೇಷನ್ ಸಂಸ್ಥೆಯ ಪ್ರತಿನಿಧಿ ಪುಷ್ಕರ್ ಅವರು ರೈತರ ಸಹಭಾಗಿತ್ವದ ಮೂಲಕ ಹಸಿ ಕಸವನ್ನು ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುವ ಯೋಜನೆಯ ಕುರಿತು ಮಾಹಿತಿ ನೀಡಿದರು.
ನಗರದಲ್ಲಿ ಸಂಗ್ರಹವಾಗುವ ಹಸಿ ಕಸವನ್ನು ಯೋಜನೆಗೆ ಒಪ್ಪಿಗೆ ನೀಡಿದ ಸುತ್ತಮುತ್ತಲಿನ ರೈತರ ಜಮೀನಿನಲ್ಲಿ ಸಂಸ್ಥೆ ಸಿದ್ಧಪಡಿಸುವ ಗುಂಡಿಗಳಲ್ಲಿ ಹಾಕಿ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತದೆ. ಈ ಮಾದರಿಯನ್ನು ಈಗಾಗಲೇ ಚಿಕ್ಕಬಳ್ಳಾಪುರ ವಿಭಾಗದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ವಿವರಿಸಿದರು.
ಯೋಜನೆಗೆ ಸಹಕರಿಸುವ ರೈತರನ್ನು ಗುರುತಿಸುವುದು, ಅಗತ್ಯ ವ್ಯವಸ್ಥೆ ಕಲ್ಪಿಸುವುದು, ತರಬೇತಿ ನೀಡುವುದು ಹಾಗೂ ತಾಂತ್ರಿಕ ನೆರವು ಒದಗಿಸುವ ಜವಾಬ್ದಾರಿಯನ್ನು ಸಂಸ್ಥೆಯೇ ವಹಿಸಿಕೊಳ್ಳಲಿದೆ. ಪ್ರತಿದಿನ ವಿವಿಧ ರೈತರ ಜಮೀನುಗಳಲ್ಲಿ ಹಸಿ ಕಸವನ್ನು ಸಂಸ್ಕರಿಸಿ ಗೊಬ್ಬರವನ್ನಾಗಿ ಪರಿವರ್ತಿಸುವ ವ್ಯವಸ್ಥೆ ರೂಪಿಸಲಾಗುವುದು ಎಂದು ತಿಳಿಸಿದರು.
ಈ ಯೋಜನೆ ಅನುಷ್ಠಾನಕ್ಕೆ ನಗರಸಭೆಯು ವಾರ್ಷಿಕವಾಗಿ 35 ಲಕ್ಷ ರೂ. ಒದಗಿಸಬೇಕಾಗುತ್ತದೆ ಎಂದು ಪುಷ್ಕರ್ ಮಾಹಿತಿ ನೀಡಿದರು. ಈ ಮೊತ್ತದಲ್ಲಿ ಸಂಸ್ಥೆ ನಿರ್ವಹಿಸಲಿರುವ ಕಾರ್ಯಗಳ ಕುರಿತು ಶಾಸಕರು ವಿವರಗಳನ್ನು ಪಡೆದುಕೊಂಡರು.
ನಗರದ ಹಸಿ ಮತ್ತು ಘನ ತ್ಯಾಜ್ಯ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿವಿಧ ಮಾದರಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಗುರುತಿಸಿರುವ ಸ್ಥಳಗಳ ಪರಿಶೀಲನೆ ನಡೆಸಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ, ಪೌರಾಯುಕ್ತ ಎಚ್.ಆರ್. ರಮೇಶ್ ಸೇರಿದಂತೆ ನಗರಸಭೆಯ ಸದಸ್ಯರು ಹಾಗೂ ಸಂಬಂಧಪಟ್ಟ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
















