ಮಡಿಕೇರಿ, NEWS DESK ಅ.24: ರಾಜ್ಯ ಸರ್ಕಾರದಿಂದ ಈ ಬಾರಿ ದೊಡ್ಡ ಮೊತ್ತದ ಅನುದಾನ ದೊರೆತಿದ್ದರೂ, ಮಡಿಕೇರಿ ದಸರಾ ಜನೋತ್ಸವ ಜನಾಕರ್ಷಣೆ ಕಳೆದುಕೊಂಡಿದೆ ಎಂದು ದಸರಾ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಕೆ.ಎಂ. ಗಣೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಮಡಿಕೇರಿ ದಸರಾ ಜನೋತ್ಸವಕ್ಕೆ ಸರ್ಕಾರದಿಂದ ₹2 ಕೋಟಿ ಅನುದಾನ ದೊರೆತಿದೆ. ಇದಕ್ಕೆ ಕಾರಣರಾದ ಶಾಸಕರನ್ನು ಅಭಿನಂದಿಸುತ್ತೇವೆ. ಆದರೆ, ಈ ಬಾರಿ ದಸರಾ ಉತ್ಸವಕ್ಕೆ ಬಳಕೆಯಾದ ಅನುದಾನದ ಸಂಪೂರ್ಣ ಲೆಕ್ಕಪತ್ರವನ್ನು ದಸರಾ ಸಮಿತಿ ಶೀಘ್ರದಲ್ಲೇ ಸಾರ್ವಜನಿಕರ ಮುಂದಿಡಬೇಕು ಎಂದು ಒತ್ತಾಯಿಸಿದರು.
ಮಂಕಾದ ದಸರಾ ವಾತಾವರಣ
ಪ್ರಸಕ್ತ ಸಾಲಿನ ದಸರಾ ಸಂದರ್ಭದಲ್ಲಿ ನಗರದಲ್ಲಿ ಉತ್ಸವದ ವಾತಾವರಣವೇ ಕಂಡುಬರಲಿಲ್ಲ. ಇದಕ್ಕೆ ಆಯೋಜನೆಯ ಅನುಭವದ ಕೊರತೆ ಕಾರಣವಿರಬಹುದು ಎಂದು ಅಭಿಪ್ರಾಯಪಟ್ಟ ಅವರು, ನಗರದಾದ್ಯಂತ ಜನರನ್ನು ಆಕರ್ಷಿಸುವ ವಿದ್ಯುತ್ ದೀಪಾಲಂಕಾರ ಇರಲಿಲ್ಲ. ಅಳವಡಿಸಲಾಗಿದ್ದ ದೀಪಗಳು ಅಲ್ಲಲ್ಲಿ ನಂದಿಹೋಗಿದ್ದವು. ಜನರಲ್ ಕಾರ್ಯಪ್ಪ ವೃತ್ತದ ಬಳಿ ನವರಾತ್ರಿಯ ಆರಂಭದಿಂದ ಕೊನೆಯವರೆಗೂ ವಿದ್ಯುತ್ ದೀಪಗಳೇ ಇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿ ವರ್ಷ ನಗರದ ವಿದ್ಯುತ್ ದೀಪಾಲಂಕಾರಕ್ಕೆ ಸಂಬಂಧಿಸಿದ ಗುತ್ತಿಗೆದಾರರು ಜನರೇಟರ್ಗಳನ್ನು ಬಳಸುತ್ತಿದ್ದರು. ಆದರೆ, ಈ ಬಾರಿ ಕೆಲವೆಡೆ ನೇರವಾಗಿ ಕೆಇಬಿ ವಿದ್ಯುತ್ ಬಳಸಿರುವುದು ಆಶ್ಚರ್ಯ ಮೂಡಿಸಿದೆ. ಈ ರೀತಿ ಬಳಸಿದ ವಿದ್ಯುತ್ಗೆ ನಗರಸಭೆ ಬಿಲ್ ಪಾವತಿಸಬೇಕಾಗುತ್ತದೆ. ಅಲಂಕಾರಕ್ಕಾಗಿ ವಿದ್ಯುತ್ ಲೈನ್ಗಳಿಂದ ವಿದ್ಯುತ್ ಪಡೆಯುತ್ತಿದ್ದರೂ, ಈ ಬಗ್ಗೆ ಕೆಇಬಿಯಿಂದ ಅಗತ್ಯ ನಿಗಾ ವಹಿಸಿರುವುದು ಕಂಡುಬರಲಿಲ್ಲ. ಇಂತಹ ಹಲವು ಲೋಪಗಳಿದ್ದರೂ ದಸರಾ ಸಮಿತಿ ಮೌನವಾಗಿತ್ತು ಎಂದು ಅವರು ಟೀಕಿಸಿದರು.
ದಸರಾ ಉತ್ಸವದ ಕೆಲಸಕಾರ್ಯಗಳಲ್ಲಿ ಸಮಿತಿಯ ಅಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರಿಗೆ ಜವಾಬ್ದಾರಿ ಇದೆ ಎಂದು ಸ್ಪಷ್ಟಪಡಿಸಿದ ಗಣೇಶ್, ಈ ಹಿಂದೆ ಉಪಸಮಿತಿಗಳ ಪ್ರಮುಖರೊಂದಿಗೆ ಚರ್ಚಿಸಿ, ಅಗತ್ಯ ಕೆಲಸಗಳಿಗೆ ಮುಂಚಿತವಾಗಿಯೇ ಹಣಕಾಸಿನ ನೆರವು ನೀಡಲಾಗುತ್ತಿತ್ತು ಎಂದು ತಿಳಿಸಿದರು.
ಈ ಬಾರಿ ದಸರಾ ಅಲಂಕಾರಕ್ಕೆ ಸಂಬಂಧಿಸಿದಂತೆ, ಈಗಾಗಲೇ ಕೆಡವಲಾಗಿರುವ ಕಾವೇರಿ ಕಲಾಕ್ಷೇತ್ರಕ್ಕೆ ವಿದ್ಯುತ್ ದೀಪಾಲಂಕಾರ ಅಳವಡಿಸುವ ಪ್ರಸ್ತಾಪವೂ ಮಾಡಲಾಗಿತ್ತು ಎಂದು ಹೇಳಿದರು. ಈ ಎಲ್ಲ ವಿಚಾರಗಳಿಗೆ ಸಂಬಂಧಿಸಿದ ಅಗತ್ಯ ಲೆಕ್ಕಪತ್ರಗಳನ್ನು ದಸರಾ ಸಮಿತಿ ಜನರ ಮುಂದಿಡಬೇಕು. ಈ ಬಾರಿಯಂತೆ ದಸರಾ ಉತ್ಸವ ಎಂದಿಗೂ ನಡೆಯಬಾರದು ಎಂದು ಅವರು ಅಭಿಪ್ರಾಯಪಟ್ಟರು.
ವೇದಿಕೆ ಮತ್ತು ಧ್ವನಿವರ್ಧಕ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ
ದಸರಾ ಕಾರ್ಯಕ್ರಮಗಳು ನಡೆಯುವ ಗಾಂಧಿ ಮೈದಾನದ ವೇದಿಕೆ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಧ್ವನಿವರ್ಧಕ ವ್ಯವಸ್ಥೆಯೂ ಸಮರ್ಪಕವಾಗಿರಲಿಲ್ಲ ಎಂದು ಗಣೇಶ್ ಟೀಕಿಸಿದರು.
ತೀರ್ಪುಗಾರರಿಗೆ ಸೀಮಿತವಾಗದಿರಲಿ ದಶಮಂಟಪಗಳ ಶೋಭಾಯಾತ್ರೆ
ವಿಜಯದಶಮಿಯಂದು ನಡೆಯುವ ದಶಮಂಟಪಗಳ ಶೋಭಾಯಾತ್ರೆಯು ಕೇವಲ ತೀರ್ಪುಗಾರರಿಗೆ ಸೀಮಿತವಾದ ಉತ್ಸವವಾಗಬಾರದು ಎಂದು ಗಣೇಶ್ ಅಭಿಪ್ರಾಯಪಟ್ಟರು.
ಹಿಂದಿನ ಸಂಪ್ರದಾಯದಂತೆ ನಗರದ ರಸ್ತೆ ವ್ಯವಸ್ಥೆ ಹಾಗೂ ಇತರ ಸೌಕರ್ಯಗಳಿಗೆ ಅನುಗುಣವಾಗಿ ದಶಮಂಟಪಗಳನ್ನು ಮೆರವಣಿಗೆಗೆ ಹೊರಡಿಸಬೇಕು. ಶೋಭಾಯಾತ್ರೆಯ ಹೆಸರಿಗೆ ತಕ್ಕಂತೆ ಮೆರವಣಿಗೆಯಲ್ಲಿ ಸಾಗುತ್ತಾ ಬನ್ನಿ ಕಡಿಯುವ ಸಂಪ್ರದಾಯವನ್ನು ಪಾಲಿಸಬೇಕು. ಆದರೆ, ಪ್ರಸ್ತುತ ಮಂಟಪಗಳು ಅಲ್ಲಲ್ಲಿ ನಿಂತುಕೊಳ್ಳುತ್ತಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.
ದಸರಾ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಎಂ.ಪಿ. ಕೃಷ್ಣರಾಜು ಮಾತನಾಡಿ, ದಸರಾ ಉತ್ಸವವನ್ನು ಸಂಪ್ರದಾಯದಂತೆ ಅಚ್ಚುಕಟ್ಟಾಗಿ ಮತ್ತು ಕ್ರಮಬದ್ಧವಾಗಿ ನಡೆಸಲು ಸಮಿತಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದಸರಾ ಸಮಿತಿಯ ಅಲಂಕಾರ ಸಮಿತಿಯ ಮಾಜಿ ಅಧ್ಯಕ್ಷರಾದ ಜಗದೀಶ್ ಮತ್ತು ಮೋಹನ್ ಉಪಸ್ಥಿತರಿದ್ದರು.

















