ಸೋಮವಾರಪೇಟೆ, NEWS DESK ಅ. 25: ಯುವಜನರು ಮಾದಕ ದ್ರವ್ಯಗಳ ಬಳಕೆಯಿಂದ ದೂರವಿರುವುದು ತಮ್ಮ ಜೀವನವನ್ನು ಮರಳಿ ಪಡೆದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಇಡುವ ಪ್ರಮುಖ ಹೆಜ್ಜೆಯಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆಯ ವಿಶೇಷ ಬಾಲಾಪರಾಧಿ ಪೊಲೀಸ್ ಘಟಕದ ಮಕ್ಕಳ ಕಲ್ಯಾಣ ವಿಭಾಗದ ಸಹಾಯಕ ಪೊಲೀಸ್ ಅಧಿಕಾರಿ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಹಿಳಾ ಪೊಲೀಸ್ ಅಧಿಕಾರಿ ಎಂ.ಬಿ. ಸುಮತಿ ಹೇಳಿದರು.
ತಾಲ್ಲೂಕಿನ ಮಾದಾಪುರದ ಶ್ರೀಮತಿ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್) ವತಿಯಿಂದ ಮಾದಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿರುವ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರದಲ್ಲಿ ‘ಮಾದಕ ದ್ರವ್ಯಗಳ ದುಷ್ಪರಿಣಾಮಗಳು ಮತ್ತು ರಸ್ತೆ ಸುರಕ್ಷತೆ’ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಯುವಜನರು ದುಶ್ಚಟಗಳಿಂದ ದೂರವಿದ್ದು, ಉತ್ತಮ ಆರೋಗ್ಯ ಮತ್ತು ಉಜ್ವಲ ಭವಿಷ್ಯವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಹದಿಹರೆಯದವರು ಮತ್ತು ಯುವಕರಲ್ಲಿ ಮಾದಕ ವಸ್ತುಗಳ ಬಳಕೆಯು ಅವರ ಶಿಕ್ಷಣ ಹಾಗೂ ವೃತ್ತಿಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಾದಕ ವ್ಯಸನವು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹಾನಿಗೊಳಿಸುವ ಗಂಭೀರ ಸಮಸ್ಯೆಯಾಗಿದೆ. ಆದ್ದರಿಂದ ಯುವಜನರು ವ್ಯಸನಮುಕ್ತ ಭಾರತ ನಿರ್ಮಾಣಕ್ಕೆ ಪಣ ತೊಡಬೇಕು ಎಂದು ಕರೆ ನೀಡಿದರು.
ಮಾದಕ ದ್ರವ್ಯಗಳಿಂದ ದೂರವಿರುವುದು ಹಾಗೂ ಜವಾಬ್ದಾರಿಯುತವಾಗಿ ವಾಹನ ಚಾಲನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಸಣ್ಣ ನಿರ್ಲಕ್ಷ್ಯವೂ ಅಮೂಲ್ಯ ಜೀವವನ್ನು ಬಲಿ ಪಡೆಯಬಹುದು. ಹೀಗಾಗಿ ಯುವಜನರು ಮಾದಕ ದ್ರವ್ಯಗಳಿಂದ ದೂರವಿದ್ದು, ರಸ್ತೆ ನಿಯಮಗಳನ್ನು ಪಾಲಿಸುವ ಮೂಲಕ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದರು.
ರಸ್ತೆ ಸುರಕ್ಷತೆಯ ಸಾಮಾನ್ಯ ನಿಯಮಗಳನ್ನು ವಿವರಿಸಿದ ಸುಮತಿ, ಯಾವುದೇ ಕಾರಣಕ್ಕೂ ಮದ್ಯ ಅಥವಾ ಮಾದಕ ದ್ರವ್ಯಗಳನ್ನು ಸೇವಿಸಿ ವಾಹನ ಚಾಲನೆ ಮಾಡಬಾರದು. ವಾಹನಗಳನ್ನು ನಿಗದಿತ ವೇಗದ ಮಿತಿಯಲ್ಲೇ ಚಲಾಯಿಸಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಿಂದಲೇ ಉತ್ತಮ ನಡತೆ, ಶಿಸ್ತು, ಸಂಯಮ, ನಾಯಕತ್ವ ಗುಣ ಹಾಗೂ ಸಮಯಪ್ರಜ್ಞೆಯನ್ನು ರೂಢಿಸಿಕೊಳ್ಳುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಎಂ.ಎ. ನಾಚಪ್ಪ ಮಾತನಾಡಿ, ವಿದ್ಯಾರ್ಥಿಗಳು ಮಾದಕ ದ್ರವ್ಯಗಳ ಸೇವನೆಯಿಂದ ದೂರವಿರುವುದರ ಜೊತೆಗೆ ಈ ಕುರಿತು ಜನಜಾಗೃತಿ ಮೂಡಿಸಬೇಕು ಎಂದರು.
ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎ.ಎಂ. ಭರತ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಶಿಬಿರದಲ್ಲಿ ಕಲಿತ ಉತ್ತಮ ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಶಿಬಿರಾಧಿಕಾರಿ ಎನ್.ಎನ್. ಮನೋಹರ್, ಉಪನ್ಯಾಸಕಿ ಕು. ಪ್ರಫುಲ್ಲ, ಶಾಲಾ ಶಿಕ್ಷಕರಾದ ಪಿ.ಜೆ. ಗ್ರೇಸಿ, ಬಿ.ಎಸ್. ಅನಿತ, ಕೆ. ಭವಾನಿ, ಅನ್ವರ್ ಪಾಷಾ, ಸಬೀನ, ನೇತ್ರಾವತಿ ಹಾಗೂ ಸಿಬ್ಬಂದಿ ಬಿ.ಎ. ಕಮಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

















