ಮಡಿಕೇರಿ, NEWS DESK ಅ. 25: ಸದಾ ಸುದ್ದಿ ಬೆನ್ನತ್ತಿ ಓಡುವ, ದಿನವಿಡೀ ಅಕ್ಷರಗಳೊಂದಿಗೆ ಸೆಣಸಾಡುವ ಪತ್ರಕರ್ತರು ಇದೀಗ ತಮ್ಮ ಕೆಲಸ-ಕಾರ್ಯಗಳನ್ನು ಕೆಲಕಾಲ ಬದಿಗೊತ್ತಿ ಬ್ಯಾಟ್–ಬಾಲ್ ಹಿಡಿದು ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ಕ್ರೀಡಾ ತವರು ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಹಬ್ಬಕ್ಕೆ ಸಿದ್ಧವಾಗಿದ್ದು, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಈ ಪ್ರತಿಷ್ಠಿತ ಪಂದ್ಯಾವಳಿಯ ಆತಿಥ್ಯ ವಹಿಸಿದೆ.
ನವೆಂಬರ್ 2 ಮತ್ತು 3ರಂದು ನಡೆಯಲಿರುವ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪತ್ರಕರ್ತರ ತಂಡಗಳು ಪಾಲ್ಗೊಳ್ಳಲಿದ್ದು, ಎರಡು ದಿನಗಳ ಕಾಲ ಮಡಿಕೇರಿ ಕ್ರಿಕೆಟ್ ಸಂಭ್ರಮದಲ್ಲಿ ಮಿಂದೇಳಲಿದೆ.
ಸುದ್ದಿಗಾಗಿ ಓಡುವ ಹೆಜ್ಜೆಗಳು ಮೈದಾನದಲ್ಲಿ ರನ್ಗಳಿಗಾಗಿ ಓಡಲಿದ್ದು, ಪ್ರತಿದಿನ ಸುದ್ದಿ ಬರೆಯುವ ಕೈಗಳು ಬ್ಯಾಟ್ ಹಿಡಿಯಲಿವೆ. ವೃತ್ತಿಯ ಒತ್ತಡದ ನಡುವೆ ಸಹೋದ್ಯೋಗಿಗಳೊಂದಿಗೆ ಸ್ನೇಹ, ಕ್ರೀಡಾಸ್ಫೂರ್ತಿ ಹಾಗೂ ಸಂಘಟನಾ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಕೊಡಗಿನ ಆತಿಥ್ಯ, ಪ್ರಕೃತಿಯ ಸೊಬಗು ಹಾಗೂ ಕ್ರೀಡಾಸ್ಫೂರ್ತಿಯ ನಡುವೆ ನಡೆಯಲಿರುವ ಈ ಕ್ರಿಕೆಟ್ ಹಬ್ಬ ಪತ್ರಕರ್ತರ ಪಾಲಿಗೆ ವಿಶಿಷ್ಟ ಅನುಭವವಾಗಲಿದೆ.
24 ತಂಡಗಳ ಸೆಣಸಾಟ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾಗುತ್ತಿರುವ ಈ ಪಂದ್ಯಾವಳಿಯಲ್ಲಿ ಹೊರಜಿಲ್ಲೆಗಳ 22 ತಂಡಗಳು ಹಾಗೂ ಆತಿಥೇಯ ಕೊಡಗಿನ ಎರಡು ತಂಡಗಳು ಸೇರಿದಂತೆ ಒಟ್ಟು 24 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.
ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಲು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕಳೆದ ಎರಡು ತಿಂಗಳಿಂದ ನಿರಂತರವಾಗಿ ಸಿದ್ಧತೆ ನಡೆಸುತ್ತಿದೆ. ಇದೀಗ ಕ್ರಿಕೆಟ್ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ಮೈದಾನ, ಪಿಚ್, ವಸತಿ, ಆಹಾರ ಸೇರಿದಂತೆ ವಿವಿಧ ವ್ಯವಸ್ಥೆಗಳ ಸಿದ್ಧತೆಗಳು ಭರದಿಂದ ಸಾಗಿವೆ.
ಕೊಡಗಿಗೆ ಮತ್ತೊಮ್ಮೆ ರಾಜ್ಯಮಟ್ಟದ ಕ್ರೀಡಾಕೂಟದ ಆತಿಥ್ಯ
ಕೊಡಗು ಜಿಲ್ಲೆಯಲ್ಲಿ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟಕ್ಕೆ ವಿಶೇಷ ಇತಿಹಾಸವಿದೆ. 2013ರಲ್ಲಿ ಅಂದಿನ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿದ್ದ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರ ನೇತೃತ್ವದಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಇದೀಗ 13 ವರ್ಷಗಳ ಬಳಿಕ ಮತ್ತೊಮ್ಮೆ ಮಡಿಕೇರಿ ಈ ಕ್ರೀಡಾ ಸಂಭ್ರಮಕ್ಕೆ ಆತಿಥ್ಯ ವಹಿಸುತ್ತಿರುವುದು ವಿಶೇಷ.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಅವರ ಮುಂದಾಳತ್ವದಲ್ಲಿ ಈ ಬಾರಿ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದು, ಕೊಡಗಿನಲ್ಲಿ ಎರಡನೇ ಬಾರಿಗೆ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ ಆಯೋಜನೆಯಾಗುತ್ತಿದೆ.
ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಪ್ರತಿ ತಂಡದಿಂದ 16 ಮಂದಿ ಆಟಗಾರರು ಆಗಮಿಸಲಿದ್ದು, 24 ತಂಡಗಳಿಂದ ಒಟ್ಟು 384 ಮಂದಿ ಪತ್ರಕರ್ತರು ಮೈದಾನಕ್ಕಿಳಿಯಲಿದ್ದಾರೆ. ಇವರೊಂದಿಗೆ ಆತಿಥೇಯ ಕೊಡಗಿನ ಪತ್ರಕರ್ತರು ಪಂದ್ಯಾವಳಿಯ ವಿವಿಧ ಜವಾಬ್ದಾರಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಮೂರು ಮೈದಾನ, ಐದು ಪಿಚ್ಗಳು
ಲೀಗ್ ಮಾದರಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಗಾಗಿ ಮಡಿಕೇರಿಯ ಮೂರು ಪ್ರಮುಖ ಮೈದಾನಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಒಟ್ಟು ಐದು ಪಿಚ್ಗಳಲ್ಲಿ ಪಂದ್ಯಗಳು ನಡೆಯಲಿದ್ದು, ಪಂದ್ಯಾವಳಿಯ ಸುಗಮ ನಿರ್ವಹಣೆಗೆ ಮೈದಾನ ಸಮಿತಿ ಸಿದ್ಧತೆಗಳನ್ನು ಭರದಿಂದ ಕೈಗೊಂಡಿದೆ.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನವನ್ನು ಪ್ರಮುಖ ಕ್ರೀಡಾಂಗಣವಾಗಿ ಬಳಸಿಕೊಳ್ಳಲಾಗುತ್ತಿದ್ದು, ಇಲ್ಲಿ ಎರಡು ಪಿಚ್ಗಳಲ್ಲಿ ಪಂದ್ಯಗಳು ನಡೆಯಲಿವೆ. ಜ. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ಪಿಚ್ಗಳು ಹಾಗೂ ಪೊಲೀಸ್ ಕವಾಯತು ಮೈದಾನದಲ್ಲಿ ಒಂದು ಪಿಚ್ ಸಿದ್ಧಪಡಿಸಲಾಗುತ್ತಿದೆ.
ಪಂದ್ಯಾವಳಿಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಮೈದಾನ ಸಮಿತಿಯು ಪಿಚ್ ನಿರ್ಮಾಣ, ಮೈದಾನವನ್ನು ಸಮತಟ್ಟು ಮಾಡುವುದು ಹಾಗೂ ಅಗತ್ಯ ಮೂಲಸೌಕರ್ಯಗಳ ಸಿದ್ಧತೆ ಸೇರಿದಂತೆ ವಿವಿಧ ಕಾರ್ಯಗಳಲ್ಲಿ ನಿರತವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ 24 ತಂಡಗಳ ಆಟಗಾರರಿಗೆ ಉತ್ತಮ ಕ್ರೀಡಾ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ.
ಆಕರ್ಷಕ ನಗದು ಬಹುಮಾನ
ವಿಜೇತ ತಂಡಕ್ಕೆ ₹1 ಲಕ್ಷ, ರನ್ನರ್ಅಪ್ ತಂಡಕ್ಕೆ ₹50 ಸಾವಿರ, ತೃತೀಯ ಸ್ಥಾನ ಪಡೆಯುವ ತಂಡಕ್ಕೆ ₹25 ಸಾವಿರ ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ₹25 ಸಾವಿರ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿಗಳನ್ನು ವಿತರಿಸಲಾಗುವುದು.
ಇದರೊಂದಿಗೆ ಪ್ರತಿ ಪಂದ್ಯಕ್ಕೂ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಗುವುದು. ಪಂದ್ಯಾವಳಿಯಲ್ಲಿ ಶಿಸ್ತುಬದ್ಧ ತಂಡ, ಸರಣಿಶ್ರೇಷ್ಠ ಆಟಗಾರ, ಅತ್ಯುತ್ತಮ ಕ್ಯಾಚ್, ಅತ್ಯುತ್ತಮ ಬ್ಯಾಟ್ಸ್ಮನ್ ಹಾಗೂ ಅತ್ಯುತ್ತಮ ಬೌಲರ್ ಸೇರಿದಂತೆ ವಿವಿಧ ವೈಯಕ್ತಿಕ ಬಹುಮಾನಗಳೂ ಇರಲಿವೆ.
ಭಾಗವಹಿಸುವ ತಂಡಗಳು
ಶಿವಮೊಗ್ಗ, ಬಾಗಲಕೋಟೆ, ಹಾವೇರಿ, ಮಂಡ್ಯ, ಚಾಮರಾಜನಗರ, ತುಮಕೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಕೋಲಾರ, ಚಿತ್ರದುರ್ಗ, ಹಾಸನ, ರಾಮನಗರ, ಉಡುಪಿ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಮೈಸೂರು, ಕೊಪ್ಪಳ, ಬೀದರ್, ದಾವಣಗೆರೆ, ಗದಗ, ಬಳ್ಳಾರಿ ಹಾಗೂ ಕೊಡಗು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.
ಕೊಡಗು ಅರೇಬಿಕಾ, ಕೊಡಗು ರೋಬಸ್ಟಾ
ವಿಶ್ವದ ಪ್ರಮುಖ ಕಾಫಿ ಉತ್ಪಾದನಾ ಪ್ರದೇಶಗಳಲ್ಲಿ ಒಂದಾಗಿರುವ ಕೊಡಗು ಜಿಲ್ಲೆಯ ವೈಶಿಷ್ಟ್ಯವನ್ನು ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲೂ ಪ್ರತಿಬಿಂಬಿಸಲಾಗಿದೆ. ಆತಿಥೇಯ ಕೊಡಗಿನ ಎರಡು ತಂಡಗಳಿಗೆ ಇಲ್ಲಿನ ಪ್ರಮುಖ ಕಾಫಿ ತಳಿಗಳಾದ ಅರೇಬಿಕಾ ಮತ್ತು ರೋಬಸ್ಟಾ ಹೆಸರುಗಳನ್ನು ಇಟ್ಟಿರುವುದು ವಿಶೇಷವಾಗಿದೆ.
ಮಂಜು ಸುವರ್ಣ ನಾಯಕತ್ವದ ಕೊಡಗು ಅರೇಬಿಕಾ ಹಾಗೂ ರೆಜಿತ್ ಕುಮಾರ್ ಗುಹ್ಯ ನಾಯಕತ್ವದ ಕೊಡಗು ರೋಬಸ್ಟಾ ತಂಡಗಳು ಆತಿಥೇಯ ಜಿಲ್ಲೆಯ ಪ್ರತಿನಿಧಿಗಳಾಗಿ ಪ್ರಶಸ್ತಿಗಾಗಿ ಸೆಣಸಾಡಲಿವೆ. ಕೊಡಗಿನ ಕಾಫಿ ಪರಂಪರೆಯನ್ನು ಪರಿಚಯಿಸುವುದರೊಂದಿಗೆ ಜಿಲ್ಲೆಯ ಗುರುತನ್ನು ಕ್ರೀಡಾ ವೇದಿಕೆಯಲ್ಲೂ ಎತ್ತಿಹಿಡಿಯುವ ಪ್ರಯತ್ನ ಇದಾಗಿದೆ.
ವ್ಯವಸ್ಥಿತ ಆಯೋಜನೆಗೆ ಸಿದ್ಧತೆ
“ನವೆಂಬರ್ 2 ಮತ್ತು 3ರಂದು ನಡೆಯಲಿರುವ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಉಪಸಮಿತಿಗಳನ್ನು ರಚಿಸಿ ಕಾರ್ಯಯೋಜನೆ ರೂಪಿಸಲಾಗಿದೆ. ಪಂದ್ಯಾವಳಿಯನ್ನು ವ್ಯವಸ್ಥಿತವಾಗಿ ನಡೆಸಲು ಶ್ರಮಿಸಲಾಗುತ್ತಿದೆ. ಆಗಮಿಸುವ ಎಲ್ಲ ತಂಡಗಳಿಗೂ ಎರಡು ದಿನಗಳ ಕಾಲ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಇದೊಂದು ಮಾದರಿ ಪಂದ್ಯಾವಳಿಯಾಗಿ ರೂಪುಗೊಳ್ಳುವ ವಿಶ್ವಾಸವಿದೆ.”
— ಬಾಚರಣಿಯಂಡ ಅನು ಕಾರ್ಯಪ್ಪ
ಅಧ್ಯಕ್ಷರು, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ
“ಪಂದ್ಯಾವಳಿಯನ್ನು ವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸಲಾಗುತ್ತಿದೆ. ಪತ್ರಕರ್ತರ ಕ್ರೀಡಾ ಹಬ್ಬದಂತೆ ಈ ಪಂದ್ಯಾವಳಿ ನಡೆಯುತ್ತಿರುವುದು ವಿಶೇಷ. 22 ಜಿಲ್ಲೆಗಳ ಆಟಗಾರರು ಕೊಡಗಿಗೆ ಆಗಮಿಸಲು ಉತ್ಸಾಹ ತೋರುತ್ತಿದ್ದಾರೆ. ಸಂಘಟನಾತ್ಮಕ ಬಲವರ್ಧನೆಗೆ ಕ್ರೀಡೆ ಸಹಕಾರಿಯಾಗಿದ್ದು, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.”
— ಹೆಚ್.ಜೆ. ರಾಕೇಶ್
ಪ್ರಧಾನ ಕಾರ್ಯದರ್ಶಿ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ

















