ಮಡಿಕೇರಿ, NEWS DESK ಅ.25: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ 2026-27ನೇ ಸಾಲಿನ 24ನೇ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಅ.27ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ. ವೇಣುಗೋಪಾಲ್ ಉದ್ಘಾಟಿಸಲಿದ್ದಾರೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ವಿಶ್ರಾಂತ ಪ್ರಾಂಶುಪಾಲ ಹಾಗೂ ಪತ್ರಕರ್ತ ಡಾ. ಜೆ. ಸೋಮಣ್ಣ ಅವರು ಕೊಡಗಿನ ಗೌರಮ್ಮ ಅವರ ಸಾಹಿತ್ಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯೆ ಪಿ. ರೇವತಿ ರಮೇಶ್ ಹಾಗೂ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಡಾ. ಲಲಿತ ಕೆ.ಪಿ. ಅವರಿಗೆ ಪ್ರಶಸ್ತಿ
ಕೊಡಗಿನ ಮಹಿಳಾ ಲೇಖಕಿಯರು ರಚಿಸಿದ ಉತ್ತಮ ಕೃತಿಯನ್ನು ಗೌರವಿಸುವ ಉದ್ದೇಶದಿಂದ ಕೊಡಗಿನ ಗೌರಮ್ಮ ಅವರ ಪುತ್ರ ಬಿ.ಜಿ. ವಸಂತ ಅವರು ಈ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. ಇದುವರೆಗೆ ಜಿಲ್ಲೆಯ 23 ಮಹಿಳಾ ಸಾಹಿತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಈ ಸಾಲಿನ ಪ್ರಶಸ್ತಿಗಾಗಿ ಒಂಬತ್ತು ಲೇಖಕಿಯರು ಕೃತಿಗಳನ್ನು ಸಲ್ಲಿಸಿದ್ದು, ಹಿರಿಯ ಸಾಹಿತಿಗಳನ್ನೊಳಗೊಂಡ ತೀರ್ಪುಗಾರರ ಸಮಿತಿಯು ಡಾ. ಲಲಿತ ಕೆ.ಪಿ. (ರಶ್ಮಿ ನಂಜಪ್ಪ ಕಳ್ಳಿಚಂಡ) ಅವರ ‘ಕೊಡಗಿನ ಜಾನಪದ ಕಥೆಗಳು’ ಕೃತಿಯನ್ನು ಆಯ್ಕೆ ಮಾಡಿದೆ.
ಡಾ. ಲಲಿತ ಕೆ.ಪಿ. ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕೊಡಗಿನ ಸ್ಥಳನಾಮಗಳ ಕುರಿತ ಸಂಶೋಧನೆಗೆ ಡಾಕ್ಟರೇಟ್ ಪಡೆದಿರುವ ಅವರು, ಸಂಶೋಧನೆ, ಭಾಷಾಂತರ ಹಾಗೂ ಜಾನಪದ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ. ಅವರ ‘ಪೊಮ್ಮೋದೀರ ಪೊನ್ನಪ್ಪ’ ನಾಟಕವು ಬೆಂಗಳೂರಿನ ರಂಗಶಂಕರದಲ್ಲಿ ಪ್ರದರ್ಶನಗೊಂಡಿದ್ದು, ಇಂಗ್ಲಿಷ್‌ಗೆ ಭಾಷಾಂತರಗೊಂಡು ನ್ಯೂಯಾರ್ಕ್ ಮತ್ತು ಸಿಡ್ನಿಯಲ್ಲಿಯೂ ಪ್ರದರ್ಶನ ಕಂಡಿದೆ.
ಸಣ್ಣ ಕಥಾ ಸ್ಪರ್ಧೆಯ ವಿಜೇತರು
ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ಉದ್ದೇಶದಿಂದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಗೌರಮ್ಮ ಸಣ್ಣ ಕಥಾ ಸ್ಪರ್ಧೆಯಲ್ಲಿ ಜಿಲ್ಲೆಯ 18 ಪ್ರೌಢಶಾಲೆಗಳ 60 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಡಿಕೇರಿಯ ಸಂತ ಜೋಸೆಫ್ ಕಾನ್ವೆಂಟ್ ಮತ್ತು ಸಂಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ಆಕಾಂಕ್ಷ ಎಂ.ಎಸ್. ಪ್ರಥಮ ಬಹುಮಾನ ಗಳಿಸಿದ್ದಾರೆ. ಮಡಿಕೇರಿಯ ಎ.ಎಲ್.ಜಿ. ಕ್ರೆಸೆಂಟ್ ಶಾಲೆಯ ಕುಮಾರಿ ಗುರುಪ್ರಿಯ ದ್ವಿತೀಯ ಹಾಗೂ ಹಾಕತ್ತೂರಿನ ಸರ್ಕಾರಿ ಪ್ರೌಢಶಾಲೆಯ ಕುಮಾರಿ ಯಶಸ್ವಿ ಪಿ.ಎಸ್. ತೃತೀಯ ಬಹುಮಾನ ಪಡೆದಿದ್ದಾರೆ.
ವಿಜೇತರಿಗೆ ಕಾರ್ಯಕ್ರಮದಲ್ಲಿ ಪಾರಿತೋಷಕ, ಪ್ರಶಂಸಾಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
















