ಮಡಿಕೇರಿ ಅ.27 NEWS DESK : ಮುಂಬರುವ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಲೋಕೇಶ್ ಸಾಗರ್ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ, ಅವಿರೋಧವಾಗಿ ಆಯ್ಕೆ ಮಾಡಲು ಪ್ರಯತ್ನಿಸಲಾಗುವುದು ಎಂದು ಕನ್ನಡಸಿರಿ ಸ್ನೇಹ ಬಳಗದ ಪದಾಧಿಕಾರಿಗಳು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ಪದಾಧಿಕಾರಿಗಳು, ಲೋಕೇಶ್ ಸಾಗರ್ ಅವರು ಈ ಹಿಂದೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಜಿಲ್ಲೆಯಾದ್ಯಂತ ವಿವಿಧ ಸಾಹಿತ್ಯ ಸಮ್ಮೇಳನಗಳು, ಮಕ್ಕಳ ಸಾಹಿತ್ಯ ಸಮ್ಮೇಳನ, ಮಹಿಳಾ ಸಾಹಿತ್ಯ ಸಮ್ಮೇಳನ, ಯುವ ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವು ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸಿ ಸಾಹಿತಿಗಳು, ಕಲಾವಿದರು ಹಾಗೂ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸಿದ್ದಾರೆ ಎಂದು ಸ್ಮರಿಸಿದರು. ಕೋವಿಡ್ ಹಾಗೂ ಅತಿವೃಷ್ಟಿಯಂತಹ ಸವಾಲುಗಳ ನಡುವೆಯೂ ಕನ್ನಡದ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿದ ಅವರ ಸೇವೆಯನ್ನು ಪರಿಗಣಿಸಿ, ಮತ್ತೊಮ್ಮೆ ಕನ್ನಡದ ಸೇವೆ ಮಾಡಲು ಅವಕಾಶ ಕಲ್ಪಿಸಬೇಕೆಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಬಳಗದ ಪದಾಧಿಕಾರಿ ಎಂ.ಡಿ. ರಂಗಸ್ವಾಮಿ ಮಾತನಾಡಿ, ಮುಂಬರುವ ಜಿಲ್ಲಾ ಕಸಾಪ ಚುನಾವಣೆಯಲ್ಲಿ ಲೋಕೇಶ್ ಸಾಗರ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಉದ್ದೇಶವಿದ್ದು, ಅವಿರೋಧ ಆಯ್ಕೆಯ ಮೂಲಕ ಕನ್ನಡದ ರಥವನ್ನು ಒಗ್ಗಟ್ಟಿನಿಂದ ಎಳೆಯುವಂತಾಗಬೇಕು ಎಂದರು. ಕೆ.ಎಸ್. ರಮೇಶ್ ಮಾತನಾಡಿ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸುಮಾರು 3,650 ಸದಸ್ಯರಿದ್ದು, ಚುನಾವಣಾ ಪ್ರಕ್ರಿಯೆ ಘೋಷಣೆಯಾದ ಬಳಿಕ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಟಿ.ಪಿ. ರಮೇಶ್ ಅವರನ್ನು ಭೇಟಿ ಮಾಡಿ, ಲೋಕೇಶ್ ಸಾಗರ್ ಅವರ ಅವಿರೋಧ ಆಯ್ಕೆಗೆ ಸಹಕರಿಸುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು. ಪದಾಧಿಕಾರಿ ಕುಡೆಕಲ್ ಸಂತೋಷ್ ಮಾತನಾಡಿ, ಲೋಕೇಶ್ ಸಾಗರ್ ಅವರು, ಈ ಹಿಂದೆ ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಅತ್ಯುತ್ತಮ ರಿತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಆ ಅವಧಿಯಲ್ಲಿ ಸಾಧ್ಯಾಗದ ಕನ್ನಡಪರವಾದ ಹಲವಷ್ಟು ಕರ್ಯಕ್ರಮಗಳನ್ನು ನಡೆಸುವ ಕನಸುಗಳನ್ನು ನನಸು ಮಾಡುವ ಸಲುವಾಗಿ ಲೋಕೇಶ್ ಸಾಗರ್ ಅವರನನ್ನು ಕಣಕ್ಕಿಳಿಸುತ್ತಿದ್ದು, ಇವರನ್ನು ಬೆಂಬಲಿಸುವಂತ ಮನವಿ ಮಾಡಿದರು . ಬಳಗದ ಮತ್ತೋರ್ವ ಪದಾಧಿಕಾರಿ ಹೆಚ್.ಜೆ. ಜವರಪ್ಪ, ಎಂ.ಡಿ. ರಂಗಸ್ವಾಮಿ ಮಾತನಾಡಿ, ಸಿ.ಕೆ. ಮಲ್ಲಪ್ಪ ಮಾತನಾಡಿ, ಲೋಕೇಶ್ ಸಾಗರ್ ಅವರ ಕನ್ನಡಪರ ಸೇವೆಯನ್ನು ಮುಂದುವರಿಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಚುನಾವಣಾ ಆಕಾಂಕ್ಷಿಗಳೊಂದಿಗೆ ಚರ್ಚಿಸಿ ಒಮ್ಮತದ ಆಯ್ಕೆಗೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.








