ಕೂಡಿಗೆ, NEWS DESK ನ.2: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಸ್ತ ವೀರಶೈವ ಲಿಂಗಾಯತ ಸಮಾಜವನ್ನು ಸಂಘಟಿಸಿ, ಸಮಾಜದ ಐಕ್ಯತೆ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಶ್ರಮಿಸುವ ಉದ್ದೇಶದಿಂದ ನೂತನವಾಗಿ ಬಸವ ಸಮಿತಿಯನ್ನು ರಚಿಸಲಾಯಿತು.
ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕಣಿವೆ, ಮರೂರು, ಹುಲುಸೆ, ಹೆಬ್ಬಾಲೆ ಸೇರಿದಂತೆ ವಿವಿಧ ಗ್ರಾಮಗಳ ಸಮಾಜದ ಮುಖಂಡರು ಹಾಗೂ ಬಂಧುಗಳು ಭಾಗವಹಿಸಿದ್ದರು. ಸಭೆಯಲ್ಲಿ ಸಮಾಜದ ಪ್ರಸ್ತುತ ಸ್ಥಿತಿಗತಿ, ಸಂಘಟನೆಯ ಅಗತ್ಯತೆ, ಮುಂದಿನ ಪೀಳಿಗೆಯ ಭವಿಷ್ಯ ಹಾಗೂ ಸಮಾಜದ ಪ್ರಾತಿನಿಧ್ಯದ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಸಭೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಕಾರ್ಯದರ್ಶಿ ಹಾಗೂ ಕೊಡಗು ಶ್ರೀ ಬಸವೇಶ್ವರ ಸೌಹಾರ್ದ ಸಹಕಾರ ಬ್ಯಾಂಕ್ ಅಧ್ಯಕ್ಷ ಶಾಂಭ ಶಿವಯ್ಯ, ಬ್ಯಾಂಕಿನ ಉಪಾಧ್ಯಕ್ಷ ಉದಯಕುಮಾರ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಕೆ.ಎಸ್. ಮೂರ್ತಿ, ಸಮಾಜದ ಪ್ರಮುಖರಾದ ಗಾಡಿ ಲೋಕೇಶ್, ಬಿ. ನಟರಾಜ್, ಕೆ.ಪಿ. ಪರಮೇಶ್ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.
ಸಮಾಜದ ಐಕ್ಯತೆ ಮತ್ತು ಸಂಘಟನೆಯ ಮಹತ್ವವನ್ನು ಮನಗಂಡು, ಎಲ್ಲರ ಒಮ್ಮತದ ಅಭಿಪ್ರಾಯದಂತೆ ಬಸವ ಸಮಿತಿಯನ್ನು ರಚಿಸಿ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನೂತನ ಬಸವ ಸಮಿತಿಯ ಪದಾಧಿಕಾರಿಗಳು
ಅಧ್ಯಕ್ಷರಾಗಿ ಮೋಹನ್ ಹಕ್ಕೆ ನಂಜಪ್ಪ, ಉಪಾಧ್ಯಕ್ಷರಾಗಿ ಸದಾಶಿವ, ಕಾರ್ಯದರ್ಶಿಯಾಗಿ ಸಂಪತ್ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಹೆಬ್ಬಾಲೆಯ ಅಜಿತ್ ಕುಮಾರ್ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಕಣಿವೆಯ ಮಾಧವ, ಹುಲುಸೆಯ ನಾಗಣ್ಣ, ಶಿವಪ್ಪ, ಮಲ್ಲಿಕಾ ಹಾಗೂ ಮರೂರಿನ ಭಿಕ್ಷೇಶ್, ಮಹೇಶ್, ಮಹಾದೇವ ಅವರನ್ನು ಆಯ್ಕೆ ಮಾಡಲಾಗಿದೆ.
ನಿರ್ದೇಶಕರಾಗಿ ಕಣಿವೆಯ ಸಂಭ್ರಮ, ಹುಲುಸೆಯ ನಂಜುಂಡ, ದರ್ಶನ್ (ರಾಕಿ), ಸುರೇಶ್ (ಚೇತು), ಹರೀಶ್ ಹೆಚ್.ಬಿ., ದಿನೇಶ್ ಹೆಚ್.ಬಿ. ಹಾಗೂ ಮರೂರಿನ ಭರತ್, ಮನು, ಲೋಕೇಶ್, ಪ್ರಕಾಶ್ ಆಯ್ಕೆಯಾಗಿದ್ದಾರೆ.
ಸಮಾಜದ ಅಭಿವೃದ್ಧಿಗೆ ಆದ್ಯತೆ
ನೂತನ ಬಸವ ಸಮಿತಿಯು ಕೇವಲ ಕಾರ್ಯಕ್ರಮಗಳ ಆಯೋಜನೆಗೆ ಸೀಮಿತವಾಗದೆ, ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಸ್ತ ವೀರಶೈವ ಲಿಂಗಾಯತ ಸಮಾಜದ ಪ್ರತಿನಿಧಿ ಸಂಘಟನೆಯಾಗಿ ಕಾರ್ಯನಿರ್ವಹಿಸಲಿದೆ. ಸಮಾಜದ ಎಲ್ಲ ಗ್ರಾಮಗಳ ಬಂಧುಗಳನ್ನು ಒಗ್ಗೂಡಿಸುವುದು, ಸಮಾಜದ ಹಿತಾಸಕ್ತಿಗಳನ್ನು ಕಾಪಾಡುವುದು, ಸಾರ್ವಜನಿಕ ಹಾಗೂ ಆಡಳಿತಾತ್ಮಕ ವಿಚಾರಗಳಲ್ಲಿ ಸಮಾಜದ ಪರವಾಗಿ ಧ್ವನಿಯಾಗುವುದು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸುವುದು ಸಮಿತಿಯ ಪ್ರಮುಖ ಉದ್ದೇಶವಾಗಿದೆ.
ಸಮಾಜದ ಬಡ ಕುಟುಂಬಗಳಿಗೆ ನೆರವು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ, ಯುವಜನರಿಗೆ ನಾಯಕತ್ವದ ಅವಕಾಶ, ಮಹಿಳೆಯರ ಸಕ್ರಿಯ ಭಾಗವಹಿಸುವಿಕೆ ಹಾಗೂ ಸಮಾಜದ ಹಿರಿಯರು ಮತ್ತು ಸಾಧಕರಿಗೆ ಗೌರವ ಸಲ್ಲಿಸುವಂತಹ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಮಾಜದ ಬಹುದಿನಗಳ ಆಶಯವಾದ ಬಸವ ಸಾಂಸ್ಕೃತಿಕ ಭವನ ನಿರ್ಮಾಣಕ್ಕೂ ಆದ್ಯತೆ ನೀಡಲು ಉದ್ದೇಶಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಮೋಹನ್ ಹಕ್ಕೆ ನಂಜಪ್ಪ ಅವರು, ಸಮಿತಿಯ ರಚನೆಯು ಯಾವುದೇ ವ್ಯಕ್ತಿಯ ವೈಯಕ್ತಿಕ ಹಿತಾಸಕ್ತಿ ಅಥವಾ ಗುಂಪಿನ ಪ್ರಾಬಲ್ಯಕ್ಕಾಗಿ ನಡೆದಿಲ್ಲ. ಸಮಾಜದ ಒಗ್ಗಟ್ಟು, ಗೌರವ, ಹಕ್ಕುಗಳು, ಪ್ರಾತಿನಿಧ್ಯ ಮತ್ತು ಮುಂದಿನ ಪೀಳಿಗೆಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಎಲ್ಲರ ಸಹಕಾರದೊಂದಿಗೆ ಸಂಘಟನೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಸಮಿತಿಯ ಪ್ರತಿಯೊಬ್ಬ ಪದಾಧಿಕಾರಿಯೂ ಇಡೀ ಸಮಾಜದ ಜವಾಬ್ದಾರಿಯುತ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಬೇಕು. ಸಮಾಜದ ಯಾವುದೇ ಸಮಸ್ಯೆ ಎದುರಾದರೂ ಪಕ್ಷ ಹಾಗೂ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಸ್ಪಂದಿಸುವುದು ನಮ್ಮ ಸಂಕಲ್ಪವಾಗಿದೆ. ಹಿರಿಯರ ಮಾರ್ಗದರ್ಶನ ಮತ್ತು ಎಲ್ಲರ ಸಹಕಾರದೊಂದಿಗೆ ಬಸವ ಸಮಿತಿಯನ್ನು ಮಾದರಿ ಸಂಘಟನೆಯಾಗಿ ಬೆಳೆಸಲಾಗುವುದು ಎಂದು ಅವರು ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ನೂತನ ಸಮಿತಿಗೆ ಶುಭ ಹಾರೈಸಿ, ಸಮಾಜದ ಅಭಿವೃದ್ಧಿ ಮತ್ತು ಐಕ್ಯತೆಯ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
“ವ್ಯಕ್ತಿಗಿಂತ ಸಮಾಜ ದೊಡ್ಡದು, ಹುದ್ದೆಗಿಂತ ಜವಾಬ್ದಾರಿ ದೊಡ್ಡದು, ಒಗ್ಗಟ್ಟಿಗಿಂತ ದೊಡ್ಡ ಶಕ್ತಿ ಮತ್ತೊಂದಿಲ್ಲ” ಎಂಬ ಆಶಯದೊಂದಿಗೆ ಹೆಬ್ಬಾಲೆ ವ್ಯಾಪ್ತಿಯ ವೀರಶೈವ ಲಿಂಗಾಯತ ಸಮಾಜದಲ್ಲಿ ಹೊಸ ಸಂಘಟನಾ ಅಧ್ಯಾಯ ಆರಂಭವಾಗಿದೆ.

















