ಮಡಿಕೇರಿ, NEWS DESK ನ. 28: ಕಸ್ತೂರಿ ರಂಗನ್ ವರದಿ ಜಾರಿಯಿಂದ ಪರಿಸರ ಸಂರಕ್ಷಣೆಯ ಜೊತೆಗೆ ಸ್ಥಳೀಯರ ಬದುಕಿಗೂ ಯಾವುದೇ ತೊಂದರೆಯಾಗಬಾರದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕೊಡಗು-ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಭರವಸೆ ನೀಡಿದರು.
ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ನ 147ನೇ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರನ್ನುದ್ದೇಶಿಸಿ ಆನ್ಲೈನ್ ಮೂಲಕ ಮಾತನಾಡಿದ ಅವರು, ಪಶ್ಚಿಮಘಟ್ಟಗಳಿಗೆ ಅಪಾಯವಾಗದ ರೀತಿಯಲ್ಲಿ ಹಾಗೂ ಸ್ಥಳೀಯರಿಗೆ ಸಂಕಷ್ಟ ಎದುರಾಗದಂತೆ ಸಮತೋಲನ ಕಾಯ್ದುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ಚೌಕಟ್ಟು ರೂಪಿಸುವ ವಿಶ್ವಾಸವಿದೆ ಎಂದರು.
ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಸ್ಥಳೀಯರ ಭಾವನೆಗಳಿಗೆ ಮಹತ್ವ ನೀಡಬೇಕಾಗಿದೆ. ಜನರ ಅಭಿಪ್ರಾಯ ಸಂಗ್ರಹಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಂಡ ಬಳಿಕವಷ್ಟೇ ವರದಿ ಜಾರಿಗೊಳಿಸಬೇಕೆಂದು ಕೇಂದ್ರದ ಗಮನ ಸೆಳೆಯಲಾಗಿದೆ ಎಂದು ತಿಳಿಸಿದರು.
ಸರ್ಫೇಸಿ ಕಾಯಿದೆಯಿಂದಾಗಿ ಅನೇಕ ಕಾಫಿ ತೋಟ ಮಾಲೀಕರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕುರಿತು ಮುಂಬರುವ ಲೋಕಸಭೆಯ ಚಳಿಗಾಲದ ವಿಶೇಷ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು. ಅನೇಕ ಕಾರ್ಮಿಕರಿಗೆ ಹಾಗೂ ಉದ್ಯಮಿಗಳಿಗೆ ಜೀವನಾಧಾರವಾಗಿರುವ ಕಾಫಿ ತೋಟ ಮಾಲೀಕರೇ ಕಾಯಿದೆಯಿಂದ ಸಂಕಷ್ಟಕ್ಕೆ ಸಿಲುಕಬಾರದು. ಕಾಫಿ ಬೆಳೆಗಾರರ ಬದುಕನ್ನೂ ಮಾನವೀಯ ನೆಲೆಯಲ್ಲಿ ಪರಿಗಣಿಸಬೇಕಾಗಿದೆ. ಕೇವಲ ವಾಣಿಜ್ಯ ದೃಷ್ಟಿಯಿಂದ ಬೆಳೆಗಾರರ ಸಾಲದ ಪ್ರಕರಣಗಳನ್ನು ಪರಿಗಣಿಸದೆ, ಅವರ ಜೀವನದ ಬಗ್ಗೆಯೂ ಮಾನವೀಯ ದೃಷ್ಟಿಕೋನ ಹೊಂದಬೇಕೆಂದು ಹೇಳಿದರು.
ಗುಡ್ಡೆಹೊಸೂರು-ಸುಳ್ಯ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಮೂಲಸೌಕರ್ಯ ಅಭಿವೃದ್ಧಿ ಅತ್ಯಗತ್ಯವಾದರೂ ಪರಿಸರಕ್ಕೆ ಹಾನಿಯಾಗದಂತೆ ಯೋಜನೆಗಳನ್ನು ಜಾರಿಗೊಳಿಸುವುದು ಅಷ್ಟೇ ಮುಖ್ಯ. ಪರಿಸರವಾದಿಗಳ ಬೇಡಿಕೆ ಹಾಗೂ ಕಾಳಜಿಯನ್ನೂ ಈ ನಿಟ್ಟಿನಲ್ಲಿ ಪರಿಗಣಿಸಬೇಕಾಗಿದೆ ಎಂದರು.
ಕೊಡಗಿನಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ಸಮತೋಲನದೊಂದಿಗೆ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕಿದೆ. ಈ ಕುರಿತು ಕೂರ್ಗ್ ಹೋಟೆಲ್ ಅಸೋಸಿಯೇಷನ್ ಪ್ರಮುಖರೊಂದಿಗೂ ಚರ್ಚೆ ನಡೆಸಿರುವುದಾಗಿ ತಿಳಿಸಿದರು. ಕೊಡಗಿನ ಸರ್ವಾಂಗೀಣ ಪ್ರಗತಿಗಾಗಿ ಸ್ಥಳೀಯ ಶಾಸಕರ ಸಹಕಾರದೊಂದಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಡುವೆ ಸಮನ್ವಯ ಸಾಧಿಸಿಕೊಂಡು ಮುನ್ನಡೆಯುವುದಾಗಿ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಾರತೀಯ ಕಾಫಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯದರ್ಶಿ ಎಂ. ಕೂರ್ಮಾರಾವ್, ಕಾರ್ಮಿಕರ ಕೊರತೆಯ ಹಿನ್ನೆಲೆಯಲ್ಲಿ ಕಾಫಿ ಮಂಡಳಿಯು ದೇಶಾದ್ಯಂತ ಯಾಂತ್ರೀಕರಣಕ್ಕೆ ಆದ್ಯತೆ ನೀಡುವ ಯೋಜನೆ ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಪ್ರತ್ಯೇಕ ಯಾಂತ್ರೀಕರಣ ಘಟಕ ಸ್ಥಾಪಿಸುವ ಚಿಂತನೆಯೂ ಇದೆ ಎಂದರು.
ಜಾಗತಿಕ ಮಟ್ಟದಲ್ಲಿ ಭಾರತೀಯ ಕಾಫಿ ಅತ್ಯುತ್ತಮ ಕಾಫಿ ಎಂಬ ಹೆಗ್ಗಳಿಕೆ ಹೊಂದಿದೆ. ಈ ಸ್ಥಾನಮಾನವನ್ನು ಮುಂದುವರಿಸಲು ಕಾಫಿಯ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಕಾಫಿ ಮಂಡಳಿ ಹಲವು ಯೋಜನೆಗಳನ್ನು ರೂಪಿಸಿದೆ ಎಂದು ತಿಳಿಸಿದರು.
ಕೊಡಗಿನ ಬಹುಕಾಲದ ಬೇಡಿಕೆಯಾದ ಕಾಫಿ ಮ್ಯೂಸಿಯಂ ಸ್ಥಾಪನೆಗೆ ಕಾಫಿ ಮಂಡಳಿ ಆಸಕ್ತಿ ಹೊಂದಿದೆ. ಕೊಡಗಿನ ಪ್ರವಾಸೋದ್ಯಮ ಮತ್ತು ಕಾಫಿ ಕ್ಷೇತ್ರವನ್ನು ಸಮನ್ವಯಗೊಳಿಸಿ ಮ್ಯೂಸಿಯಂ ಯೋಜನೆ ರೂಪಿಸಬೇಕಾಗಿದೆ. ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರದಲ್ಲಿ ಹೊಸದಾಗಿ 40 ತಳಿಗಳ 1.60 ಲಕ್ಷ ಸಸಿಗಳನ್ನು ಅಭಿವೃದ್ಧಿಪಡಿಸಲು ಕಾಫಿ ಮಂಡಳಿ ಮುಂದಾಗಿದೆ. ಇದು ಮಂಡಳಿಯ ಮಹತ್ವದ ಪ್ರಯೋಗವಾಗಲಿದೆ ಎಂದರು.
147 ವರ್ಷಗಳ ಸುದೀರ್ಘ ಅವಧಿಯಲ್ಲಿ ಕಾಫಿ ಕೃಷಿಗೆ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ನೀಡಿರುವ ಕೊಡುಗೆಯನ್ನು ಶ್ಲಾಘಿಸಿದ ಅವರು, ಕರ್ನಾಟಕ ರಾಜ್ಯವೊಂದರಲ್ಲೇ 1.60 ಲಕ್ಷ ಮೆಟ್ರಿಕ್ ಟನ್ ಕಾಫಿ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ ಕೊಡಗಿನ ಕಾಫಿ ಬೆಳೆಗಾರರ ಕೊಡುಗೆ ಅನನ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂಡಿಯನ್ ಆಯಿಲ್ ಕಾರ್ಪೊರೇಷನ್ನ ಮೈಸೂರು ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಡಿ. ಮಧುನೇಶ್ವರನ್ ಮಾತನಾಡಿ, ಕಾಫಿ ಮ್ಯೂಸಿಯಂ ಸ್ಥಾಪನೆಗೆ ತಮ್ಮ ಸಂಸ್ಥೆಯಿಂದ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ನ ನೂತನ ಅಧ್ಯಕ್ಷ ಮಾತಂಡ ಸಿ. ಕಾರ್ಯಪ್ಪ ಮಾತನಾಡಿ, ಮಾನವ-ವನ್ಯಜೀವಿ ಸಂಘರ್ಷ, ಕಾರ್ಮಿಕರ ಕೊರತೆ ಹಾಗೂ ಹೆಚ್ಚುತ್ತಿರುವ ಕಾಫಿ ತೋಟಗಳ ನಿರ್ವಹಣಾ ವೆಚ್ಚದಂತಹ ಗಂಭೀರ ಸಮಸ್ಯೆಗಳಿಗೆ ಬೆಳೆಗಾರರೆಲ್ಲರೂ ಒಗ್ಗೂಡಿ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.
69 ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್, ಧಾರವಾಡದ ಐಐಟಿ ಸಹಯೋಗದಲ್ಲಿ ಕಾರ್ಮಿಕ ಸ್ನೇಹಿ ನವೀಕೃತ ಯಂತ್ರೋಪಕರಣಗಳನ್ನು ಪರಿಚಯಿಸಲು ಮುಂದಾಗಿದೆ. ಕಾಫಿ ಬೆಳೆಗಾರರ ಪಾಲಿಗೆ ಯಂತ್ರಗಳೇ ಭವಿಷ್ಯದ ಕೃಷಿಯ ಆಶಾಕಿರಣವಾಗಿವೆ ಎಂದು ಅಭಿಪ್ರಾಯಪಟ್ಟರು.
ಟಾಟಾ ಕಾಫಿ ಸಂಸ್ಥೆಯ ಹಿರಿಯ ಪ್ರಧಾನ ವ್ಯವಸ್ಥಾಪಕ ಕೆ. ರಾಜೀವ್ ಮಾತನಾಡಿ, ಕಾಫಿಗಿಂತ ಹೆಚ್ಚಿನ ಆದಾಯ ನೀಡುವ ಹೈನುಗಾರಿಕೆ, ಬೆಣ್ಣೆಹಣ್ಣು ಸೇರಿದಂತೆ ಪರ್ಯಾಯ ಕೃಷಿಯತ್ತಲೂ ಬೆಳೆಗಾರರು ಆಸಕ್ತಿ ತೋರಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
ಭವಿಷ್ಯದಲ್ಲಿ ಪ್ರತಿಯೊಬ್ಬ ಬೆಳೆಗಾರರೂ ಪರಿಸರ ಸ್ನೇಹಿ ಕೃಷಿಗೆ ಆದ್ಯತೆ ನೀಡಬೇಕು. ಕಾಫಿಯನ್ನೇ ಸಂಪೂರ್ಣವಾಗಿ ಅವಲಂಬಿಸಿ ಹಿಂದಿನಂತೆ ಮುಂದುವರಿಯುವ ದಿನಗಳು ಬದಲಾಗುತ್ತಿವೆ ಎಂದು ಎಚ್ಚರಿಸಿದರು.
ಯಂತ್ರಗಳ ಬಳಕೆ ಸ್ವಾಗತಾರ್ಹವಾದರೂ ಕಾರ್ಮಿಕರ ಕಾರ್ಯಕೌಶಲ್ಯವನ್ನು ಯಂತ್ರಗಳಿಂದ ಸರಿಗಟ್ಟಲು ಸಾಧ್ಯವಿಲ್ಲ. ಮನುಷ್ಯನ ಕಾರ್ಯಕ್ಷಮತೆಗೆ ಯಂತ್ರಗಳು ಸರಿಸಾಟಿಯಾಗಲಾರವು ಎಂದೂ ಅವರು ಅಭಿಪ್ರಾಯಪಟ್ಟರು.
ಹವಾಮಾನ ಆಧಾರಿತ ವಿಮಾ ಸಂಸ್ಥೆಯಾದ ರೀಸೆಕ್ಯೂರ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆನ್ ಮಾಡ್ಲಾ ಮಳೆ ವಿಮೆಯ ಕುರಿತು ಮಾಹಿತಿ ನೀಡಿದರು.
ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ನಂದಾ ಬೆಳ್ಯಪ್ಪ ಮಾತನಾಡಿ, ಸರ್ಫೇಸಿ ಕಾಯಿದೆಯಿಂದ ಕಾಫಿ ತೋಟ ಮಾಲೀಕರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದು, ಕೇಂದ್ರ ಸರ್ಕಾರ ಬೆಳೆಗಾರರ ನೆರವಿಗೆ ಬರಬೇಕೆಂದು ಮನವಿ ಮಾಡಿದರು.
ವನ್ಯಜೀವಿಗಳ ಹಾವಳಿಯಿಂದ ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರು ಜೀವಭಯದಲ್ಲೇ ದಿನ ಕಳೆಯುವಂತಾಗಿದೆ. ವನ್ಯಜೀವಿಗಳ ದಾಳಿಯಿಂದ ಕೃಷಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರಗಳು ಗಂಭೀರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಕೃಷಿಕರಿಗೆ ಸಂಬಂಧಿಸಿದ ಹಲವು ಸಮಸ್ಯೆಗಳ ಕುರಿತು ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಮೂಲಕ ಸರ್ಕಾರದ ಗಮನವನ್ನು ಸಮರ್ಥವಾಗಿ ಸೆಳೆಯಲಾಗಿದೆ ಎಂದರು.
ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ನ ನೂತನ ಅಧ್ಯಕ್ಷ ಪುಲಿಯಂಡ ಪವನ್ ಮೊಣ್ಣಪ್ಪ ವಂದಿಸಿದರು. ಸಂಘದ ನೂತನ ಕಾರ್ಯದರ್ಶಿ ಮನೆಯಪಂಡ ಡಾ. ಎಂ. ಚಂಗಪ್ಪ, ನಿರ್ದೇಶಕರು ವೇದಿಕೆಯಲ್ಲಿದ್ದರು. ಸಂಘದ ಕಾರ್ಯದರ್ಶಿ ಚೊಟ್ಟೇರ ಬೆಳ್ಳಿಯಪ್ಪ ಹಾಗೂ ಸಿಬ್ಬಂದಿ ಮೂವೇರ ಸರಸ್ವತಿ ಉಪಸ್ಥಿತರಿದ್ದರು.
ಸಾಧಕ ಕಾಫಿ ಬೆಳೆಗಾರರಿಗೆ ಸನ್ಮಾನ
ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ವತಿಯಿಂದ ಕೊಡಗಿನ ಕಾಫಿ ಕೃಷಿಗೆ ಗಣನೀಯ ಕೊಡುಗೆ ನೀಡಿದ ಸಾಧಕ ಬೆಳೆಗಾರರನ್ನು ಕಾಫಿ ಮಂಡಳಿ ಕಾರ್ಯದರ್ಶಿ ಎಂ. ಕೂರ್ಮಾರಾವ್ ಸನ್ಮಾನಿಸಿ ಗೌರವಿಸಿದರು.
ಸುಂಟಿಕೊಪ್ಪದ ನಡಿಕೇರಿಯಂಡ ಬೋಸ್ ಮಂದಣ್ಣ, ಚೆಯ್ಯಂಡಾಣೆಯ ನಡಿಕೇರಿಯಂಡ ಕೆ. ಚಿಣ್ಣಪ್ಪ, ಮುತ್ತಾರ್ಮುಡಿಯ ಕೆಂಬತ್ತಂಡ ಎಂ. ಮಂದಣ್ಣ, ಬಾಡಗರಕೇರಿಯ ಕಾಯಪಂಡ ಮೋಹನ್ ಕಾಳಯ್ಯ ಹಾಗೂ ಮೂನಾರ್ನಾಡಿನ ಅರುಣ್ ಅಪ್ಪಚ್ಚು ಅವರನ್ನು ಸನ್ಮಾನಿಸಲಾಯಿತು.


































