ವಿರಾಜಪೇಟೆ ಜ.2 : ಆಕ್ಸ್‌ಫರ್ಡ್ ಎಫ್.ಸಿ. ವಿರಾಜಪೇಟೆ ಕೊಡಗು ವತಿಯಿಂದ ನಗರದ ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ ನಾಲ್ಕು ದಿನಗಳ ಕಾಲ ನಡೆದ 3ವರ್ಷದ ಅಖಿಲ ಭಾರತ ಪುರುಷರ ಮುಕ್ತ ನೈನ್ಸ್ (09) ರಾಷ್ಟ್ರ ಮಟ್ಟದ ಕಾಲ್ಚೆಂಡು ಪಂದ್ಯಾವಳಿ ನಡೆಯಿತು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಕಾಲ್ಚೆಂಡು ಒದೆಯುವ ಮೂಲಕ ಫೈನಲ್ ಪಂದ್ಯಾವಳಿಗೆ ಚಾಲನೆ ನೀಡಿ, ಶುಭಹಾರೈಸಿದರು.
ಭಾರತೀಯ ಸೇನೆಯ ಸೇನಾಧಿಕಾರಿ ಜೆ.ಸಿ.ಓ ಎಂ.ಎಲ್.ಲೋಹಿತ್ ಮಾತನಾಡಿ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಕಾಣಬಹುದು. ಕ್ರೀಡೆಯಲ್ಲಿ ಸಾಧನೆ ಮಾಡಿದ ಯುವ ತರುಣರಿಗೆ ಸೇನೆಯಲ್ಲಿ ವಿಫಲ ಅವಕಾಶಗಳಿವೆ, ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಶಾರೀರಿಕ ವ್ಯಾಯಾಮ ಮತ್ತು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೃಡಕಾಯ ದೇಹ ಸಿರಿಯನ್ನು ಗಳಿಸಬಹುದಾಗಿದೆ. ಆರೋಗ್ಯವು ಉತ್ತಮವಾಗಿರುತ್ತದೆ ಎಂದು ಹೇಳಿದರು.
ವಿರಾಜಪೇಟೆ ಆಕ್ಸ್‍ಫರ್ಡ್ ಎಫ್.ಸಿ.ಅಧ್ಯಕ್ಷ ರೆನ್ಸಾನ್ ಚಾಕೋ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಇಗಲ್ಸ್ ಸ್ವೀಚ್‍ಗೆರ್ಸ್‍ನ ಪ್ರಧಾನ ನಿರ್ದೇಶಕರಾದ ಮಧು ನಾಣಯ್ಯ, ಕೊಡಗು ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಪಟ್ರಪಂಡ ರಘು ನಾಣಯ್ಯ, ಕೆ.ಡಿ.ಎಫ್.ಎ ಅಧ್ಯಕ್ಷ ಜಗದೀಶ್, ಕಾರ್ಯದರ್ಶಿಗಳಾದ ಈಶ್ವರ್, ಅಂತರ್ ರಾಷ್ಟ್ರೀಯ ರಗ್ಬಿ ಪಟು ಮಾದಂಡ ತಿಮ್ಮಯ್ಯ, ಹಿಂದೂ ಮಲಯಾಳಿ ಅಸೋಸಿಯೇಷನ್ ಅಧ್ಯಕ್ಷ ವಿನೂಪ್ ಕುಮಾರ್ ಎ., ಪುರಸಭೆಯ ಸದಸ್ಯರಾದ ಅಗಸ್ಟೀನ್ ಬೆನ್ನಿ, ಜೂನಾ ಸುನೀತಾ, ಡಿ.ಪಿ.ರಾಜೇಶ್ ಪದ್ಮನಾಭ, ಯೂನಿಯನ್ ಬ್ಯಾಂಕ್ ವಿರಾಜಪೇಟೆ ಶಾಖೆಯ ಹಿರಿಯ ವ್ಯವಸ್ಥಾಪಕ ಜಿಜೋ ಪಿ.ಜೆ. ಮತ್ತು ಶ್ರೀ ನಂದಿ ಜ್ಯುಲ್ಲರಿ ಮಾಲೀಕ ಅನಿಲ್ ಚೌದರಿ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಪ್ರಧಾನಿಗಳ ತಾಯಿ, ಪೀಲೆ ಸೇರಿದಂತೆ ಮೃತಪಟ್ಟ ಕ್ರೀಡಾ ಕಲಿಗಳಿಗೆ ಮೌನಾಚರಣೆಯ ಮೂಲಕ ಸಂತಾಪ ಸೂಚಿಸಲಾಯಿತು.
ಕ್ರೀಡಾ ವರದಿ: ಪಂದ್ಯಾವಳಿಯಲ್ಲಿ ಒಟ್ಟು 20 ತಂಡಗಳು ಭಾಗವಹಿದ್ದವು, ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ಕೇರಳ ರಾಜ್ಯದ ವೈನಾಡ್ ಮತ್ತು ಮಲಪುರಂ, ತಮಿಳುನಾಡಿನ ಚೆನೈ ತಂಡಗಳು ಪಂದ್ಯಾಟದಲ್ಲಿ ಭಾಗಿಗಳಾದವು. ದೇಶೀಯ, ವಿಭಾಗಿಯ ಮಟ್ಟದಲ್ಲಿ ಮತ್ತು ದೇಶದ ತಂಡವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳು ಭಾಗಿಗಳಾಗಿರುವುದು ವಿಶೇಷವಾಗಿತ್ತು.
ಮಹಿಳಾ ಪುಟ್ಬಾಲ್ ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇದೆ ಪ್ರಥಮ ಬಾರಿಗೆ ಮಹಿಳಾ ಫುಟ್ಬಾಲ್ ಪ್ರದರ್ಶನ ಪಂದ್ಯಾವಳಿ ನಡೆಯಿತು.
ಪಂದ್ಯಾವಳಿಯಲ್ಲಿ ಆಕ್ಸ್‍ಫರ್ಡ್ ಎಫ್.ಸಿ. ವಿರಾಜಪೇಟೆ ಮತ್ತು ವೈಷ್ಣವಿ ಎಫ್.ಸಿ. ಮರಗೋಡು ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ಆಕ್ಸ್‍ಫರ್ಡ್ ಎಫ್.ಸಿ. ವಿರಾಜಪೇಟೆ ತಂಡವು 1-0 ಗೋಲುಗಳಿಂದ ವಿಜೇತವಾಯಿತು.
ಪುರುಷರ ವಿಭಾಗದಲ್ಲಿ ಪ್ರಥಮ ಸೆಮಿಫೈನಲ್ ಪಂದ್ಯಾವಳಿಯು ಸರ್ಕಾರಿ ಪದವಿ ಪೂರ್ವ ಕಾಲೇಜು ವಿರಾಜಪೇಟೆ ತಂಡ ಮತ್ತು ಸ್ನೇಹಿತರ ಬಳಗ ಎಫ್.ಸಿ ವಿರಾಜಪೇಟೆ ತಂಡಗಳ ಮದ್ಯೆ ನಡೆದು ಸ್ನೇಹಿತರ ಬಳಗ ತಂಡವು 3-0 ಗೋಲುಗಳಿಂದ ಫೈನಲ್ ಪ್ರವೇಶ ಪಡೆಯಿತು. ದ್ವೀತಿಯ ಸೆಮಿಫೈನಲ್ ಪಂದ್ಯದಲ್ಲಿ ಪ್ರಗತಿ ಎಫ್.ಸಿ ವಿರಾಜಪೇಟೆ ಮತ್ತು ವಿಜಯನಗರ ಎಫ್.ಸಿ. ಮೈಸೂರು ತಂಡಗಳ ನಡುವೆ ನಡೆದು 1-0 ಗೋಲುಗಳಿಂದ ಮೈಸೂರು ತಂಡವನ್ನು ಮಣಿಸಿ ಫೈನಲ್‍ಗೆ ಆರ್ಹತೆ ಪಡೆಯಿತು.
ಪ್ರಗತಿ ಎಫ್.ಸಿ ವಿರಾಜಪೇಟೆ ಮತ್ತು ಸ್ನೇಹಿತರ ಬಳಗ ಎಫ್.ಸಿ ನಡುವೆ ನಡೆದ ಫೈನಲ್ ಪಂದ್ಯಾವಳಿಯು ರೋಚಕತೆಯಿಂದ ಕೂಡಿದ್ದು, ಪ್ರಥಮಾರ್ಧದವರೆಗೆ ಯಾವುದೇ ಗೋಲುಗಳಿಸಲು ಉಬಯ ತಂಡಗಳು ವಿಫಲವಾಯಿತು. ದ್ವಿತೀಯಾರ್ಧದಲ್ಲಿ ಬಲಿಷ್ಟವಾದ ಪ್ರಗತಿ ಎಫ್.ಸಿ ತಂಡ, ಸ್ನೇಹಿತರ ಬಳಗ ಉದನ್ಮೂಕ ಮುನ್ನಡೆ ಆಟಗಾರ ಪ್ರಥಮ ಗೋಲುಗಳಿಸಲು ಶಕ್ತರಾದರು. ಕೆಲವು ನಿಮಿಷಗಳ ನಂತರ ಮತ್ತೊಂದು ಗೋಲು ದಾಖಲಾಯಿತು. ಪ್ರಗತಿ ಎಫ್.ಸಿ ತಂಡವನ್ನು 2-0 ಗೋಲುಗಳಿಂದ ಮಣಿಸಿದ ಸ್ನೇಹಿತರ ಬಳಗ ತಂಡವು ಅಖಿಲ ಭಾರತ ಕಾಲ್ಚೆಂಡು ಪಂದ್ಯಾವಳಿಯ ಚಾಂಪಿಯನ್ ಪಟ್ಟ ಅಲಂಕರಿಸಿತು.
ವಿಜೇತ ತಂಡಕ್ಕೆ 1 ಲಕ್ಷ ನಗದು ಮತ್ತು ಆಕರ್ಷಕ ಟ್ರೋಫಿ, ಪರಾಜಿತ ತಂಡಕ್ಕೆ 75 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಯಿತು.
ಪಂದ್ಯಾವಳಿಯ ಅತ್ಯುತ್ತಮ ತಂಡ ವಿಜಯನಗರ ಮೈಸೂರು, ಉತ್ತಮ ಆಟಗಾರ, ಉತ್ತಮ ಮುನ್ನಡೆ ಆಟಗಾರ, ಉತ್ತಮ ಗೋಲು, ಭರವಸೆಯ ಆಟಗಾರ, ಅತ್ಯಧಿಕ ಗೋಲು, ಉತ್ತಮ ಮಹಿಳಾ ಆಟಗಾರ್ಥಿ ಪ್ರಶಸ್ತಿ, ಪಂದ್ಯ ಪುರುಶೋತ್ತಮ ವ್ಯಯುಕ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರರಾದ ದರ್ಶನ್, ಧೀರಜ್, ಸಂತೋಷ್ ಮತ್ತು ಇಮ್ರಾನ್ ಖಾನ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಆಕ್ಸ್‍ಫರ್ಡ್ ಎಫ್.ಸಿ. ವಿರಾಜಪೇಟೆ ಕೊಡಗು ಸಂಸ್ಥೆಯ ಸರ್ವ ಸದಸ್ಯರು ಸೇರಿದಂತೆ ವಿವಿಧ ತಂಡಗಳ ಆಟಗಾರರು, ಮಾಲೀಕರು, ನಗರ ಮತ್ತು ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ