ಮಡಿಕೇರಿ ಜ.2 : ನಾವು ನಮ್ಮ ಗ್ರಾಮದ ಸ್ವಚ್ಛತೆ ಕಾಪಾಡುವುದರ ಜೊತೆಗೆ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಕೊಡಗಿನ ಪರಿಸರ ಮತ್ತು ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಕೊಡಗು ಜಿಲ್ಲಾ ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ಗಿರೀಶ್ ಮಲ್ಲಪ್ಪ ಕರೆ ನೀಡಿದ್ದಾರೆ.
ಕೆ.ನಿಡುಗಣೆ ಗ್ರಾ.ಪಂ ವ್ಯಾಪ್ತಿಯ ಪ್ರಮುಖ ಪ್ರವಾಸಿತಾಣ ಅಬ್ಬಿಪಾಲ್ಸ್ ನಲ್ಲಿ ವೇದಿಕೆ ವತಿಯಿಂದ ಕುವೆಂಪು ಜನ್ಮ ದಿನದ ಅಂಗವಾಗಿ ನಡೆದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊಡಗು ಜಿಲ್ಲೆ ಪ್ರವಾಸಿಗರ ಅಚ್ಚುಮೆಚ್ಚಿನ ಪ್ರವಾಸಿತಾಣವಾಗಿದ್ದು, ದಿನದಿಂದ ದಿನಕ್ಕೆ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರವಾಸಿತಾಣಗಳನ್ನು ಹೊಂದಿರುವ ಪ್ರತಿ ಗ್ರಾ.ಪಂ ಗಳು ಪ್ರವಾಸಿಗರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು ಮತ್ತು ಜಾಗೃತಿ ಫಲಕಗಳನ್ನು ಅಳವಡಿಸಬೇಕು ಎಂದರು.
ವೇದಿಕೆಯ ಕಾರ್ಯದರ್ಶಿ ನವೀನ್ ಅಜ್ಜಳಿ ಮಾತನಾಡಿ ಗ್ರಾಮ ಗ್ರಾಮಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕು, ಎಲ್ಲಾ ಪ್ರದೇಶಗಳು ಕಸವಿಲ್ಲದೆ ಸುಂದರವಾಗಿ ಕಂಡಾಗ ಪ್ರವಾಸಿಗರು ಕೂಡ ಕಸ ಹಾಕದೆ ಸ್ವಚ್ಛತೆ ಕಾಪಾಡುತ್ತಾರೆ. ರಸ್ತೆಯ ಇಕ್ಕೆಲಗಳು ಸದಾ ಸ್ವಚ್ಛತೆಯಿಂದ ಕೂಡಿರಬೇಕು ಎಂದು ಹೇಳಿದರು.
ವೇದಿಕೆಯ ಕೋಶಾಧಿಕಾರಿ ಸಂದೀಪ್ ಮಾತನಾಡಿ ವೇದಿಕೆ ವತಿಯಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ವಚ್ಛತಾ ಅಭಿಯಾನ ಮತ್ತು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಮಡಿಕೇರಿ ನಗರದಿಂದ ಅಬ್ಬಿಪಾಲ್ಸ್ ರಸ್ತೆ ಮತ್ತು ಅಬ್ಬಿಪಾಲ್ಸ್ ನ ಪಾರ್ಕಿಂಗ್ ಪ್ರದೇಶದಲ್ಲಿ ಸ್ವಚ್ಚತಾ ಶ್ರಮದಾನ ನಡೆಸಲಾಯಿತು. ಸುಮಾರು 35 ಕ್ಕೂ ಹೆಚ್ಚು ಚೀಲಗಳಲ್ಲಿ ಸಂಗ್ರಹವಾದ ತ್ಯಾಜ್ಯಗಳನ್ನು 2 ವಾಹನಗಳಲ್ಲಿ ವಿಲೇವಾರಿ ಮಾಡಲಾಯಿತು.
ವೇದಿಕೆಯ ಉಪಾಧ್ಯಕ್ಷ ಕಿರಣ್, ಪೃಥ್ವಿ ಗೌಡಳ್ಳಿ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.












