ನಾಪೋಕ್ಲು ಜ.4 : ಉತ್ತಮ ಪರಿಸರದಲ್ಲಿ ಸರಳತೆ ಹಾಗೂ ಮೌಲ್ಯಯುತ ಶಿಕ್ಷಣ ದೊರೆಯುವುದರಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಗುರಿ ಸಾಧಿಸಬಹುದು ಎಂದು ವಿರಾಜಪೇಟೆಯ ಡಾ. ರೇಖಾ ಚಿಣ್ಣಪ್ಪ ಹೇಳಿದರು.
ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಗುರಿಯನ್ನು ಇರಿಸಿಕೊಳ್ಳಬೇಕು. ಉತ್ತಮ ಗುಣ ನಡತೆಗಳನ್ನು ರೂಡಿಸಿಕೊಂಡರೆ ಯಶಸ್ಸು ಗಳಿಸಲು ಸಾಧ್ಯ ಎಂದರು.
ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂಧವ್ಯವಿದ್ದಲ್ಲಿ ಉತ್ತಮ ಶಿಕ್ಷಣವನ್ನು ಪಡೆಯಲು ಸಾಧ್ಯ. ಮೌಲ್ಯಾಧಾರಿತ ಶಿಕ್ಷಣ ಪಡೆಯುವುದು ವಿದ್ಯಾರ್ಥಿಗಳ ಗುರಿಯಾಗಿರಬೇಕು ಎಂದರು.
ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ. ಬೊಪ್ಪಂಡ.ಎಂ.ಬೋಪಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಸ್ಥೆಯ ದ್ಯೇಯೋದ್ದೇಶ ಹಾಗೂ ಕಾರ್ಯ ಚಟುವಟಿಕೆಯ ಬಗ್ಗೆ ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ನಿರ್ದೇಶಕರಾದ ಮಕ್ಕಿ ಸುಬ್ರಹ್ಮಣ್ಯ, ಬೊಪ್ಪಂಡ ಕುಶಾಲಪ್ಪ, ಅಪ್ಪಾರಂಡ ಅಪ್ಪಯ್ಯ, ಬಿದ್ದಾಟಂಡ ಮುತ್ತಣ್ಣ, ಬಿದ್ದಾಟಂಡ ಪಾಪ ಮುದ್ದಯ್ಯ, ಪ್ರೊ.ಕಲ್ಯಾಟಂಡ ಪೂಣಚ್ಚ, ಕೊಂಬಂಡ ಗಣೇಶ್, ನೆರವಂಡ ಸುನಿಲ್, ಬೊಳ್ಳಚೆಟ್ಟಿರ ಸುರೇಶ್, ನಾಯಕಂಡ ದೀಪು ಚಂಗಪ್ಪ, ಪ್ರಾಂಶುಪಾಲರಾದ ಶಾರದಾ ಅಪ್ಪಣ್ಣ ಸೇರಿದಂತೆ ಇತರರು ಹಾಜರಿದ್ದರು.
ಪರಿಧಿ ಪೊನ್ನಮ್ಮ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಶಿಕ್ಷಕಿ ಮುಂಡಂಡ ಕವಿತ ಸ್ವಾಗತಿಸಿ. ವಿದ್ಯಾರ್ಥಿ ನಾಯಕ ಪರಂ ಪೂವಣ್ಣ ವಿದ್ಯಾರ್ಥಿ ಸಂಘದ ವರದಿ ವಾಚಿಸಿದರೆ, ಪ್ರಾಂಶುಪಾಲರಾದ ಶಾರದ ಅಪ್ಪಣ್ಣ ಶಾಲಾ ವರದಿ ವಾಚಿಸಿದರು. ಸಂದೇಶವಾಚನವನ್ನು ಶಿಕ್ಷಕಿ ತನುಜಾ, ಕ್ರೀಡಾ ವರದಿಯನ್ನು ಸರಿತಾ ವಾಚಿಸಿ, ಶೋಭ ಅತಿಥಿಗಳನ್ನು ಪರಿಚಯಿಸಿದರು. ಪಾಲಚಂಡ ಲೀಲಾವತಿ ಮತ್ತು ಪಾಡಿಯಮ್ಮಂಡ ಚಂದ್ರಕಲಾ ಕಾರ್ಯಕ್ರಮ ನಿರೂಪಿಸಿ, ಕಂಗಂಡ ಸ್ಮಿತ ವಂದಿಸಿದರು.
ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಬಹುಮಾನ ನೀಡಿ ಪುರಸ್ಕರಿಸಿದರು. ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ರಂಜಿಸಿತು.
ವರದಿ– ದುಗ್ಗಳ ಸದಾನಂದ