ಸೋಮವಾರಪೇಟೆ ಜ.4 : ತಾಲ್ಲೂಕಿನ ಮಾದಾಪುರ, ಬೇಳೂರು ಮತ್ತು ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೈಸಾರಿ ಜಾಗವನ್ನು ಗುರುತಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನಿವೇಶನ ರಹಿತರಿಗೆ ವಿತರಿಸುವಂತೆ ಆಗ್ರಹಿಸಿ ಎಐಟಿಯುಸಿ ವತಿಯಿಂದ ತಹಸೀಲ್ದಾರ್ ಎಸ್.ಎನ್.ನರಗುಂದ ಅವರಿಗೆ ಮನವಿ ಸಲ್ಲಿಸಲಾಯಿತು.
ಅನೇಕ ವರ್ಷಗಳಿಂದ ಕೃಷಿ ಕಾರ್ಮಿಕರು ಸ್ವಂತ ನಿವೇಶನ ಮತ್ತು ಮನೆ ಇಲ್ಲದೆ. ಲೈನ್ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಸಂಕಷ್ಟದಲ್ಲಿ ಜೀವನ ನಡೆಸುತ್ತಿರುವ ಕಾರ್ಮಿಕರಿಗೆ ಸರ್ಕಾರದ ವತಿಯಿಂದ ಮನೆ ನಿಡುವಂತೆ ಸ್ಥಳೀಯ ಪಂಚಾಯಿತಿ ಮೂಲಕ ಮನವಿ ಸಲ್ಲಿಸಿದರೂ, ಇಲ್ಲಿಯವರೆಗೆ ಕಾರ್ಯಗತವಾಗಿಲ್ಲ. ತಕ್ಷಣವೇ ಪಂಚಾಯಿತಿ ವ್ಯಾಪ್ತಿಯಲ್ಲಿ ಪೈಸಾರಿ ಜಾಗವನ್ನು ಗುರುತಿಸಿ ನಿವೇಶನ ನೀಡುವಂತೆ ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಂ. ಸೋಮಪ್ಪ ಮನವಿ ಮಾಡಿದರು.
ಗರಗಂದೂರು ಗ್ರಾಮದ ಸರ್ವೆ ನಂ.231/1ರಲ್ಲಿ 50.22 ಏಕರೆ ಜಾಗ ಮತ್ತು 22/1ರಲ್ಲಿ 1.83 ಏಕರೆ ಪೈಸಾರಿ ಜಾಗ ಇದ್ದು, ಈ ಜಾಗದಲ್ಲಿ ನಿವೇಶನ ರಹಿತರಾದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡುವಂತೆ ಹಲವಾರು ಭಾರಿ ಸಂಬಂಧಿಸಿದ ಇಲಾಖೆಯವರಿಗೆ ಮನವಿ ಮಾಡಿ ಹೋರಾಟ ನಡೆಸಲಾಗುತ್ತಿದೆ.
ಆದುದ್ದರಿಂದ ಸಂಬಂಧಿಸಿದ ಸ್ಥಳವನ್ನು ನಿವೇಶನ ರಹಿತರಿಗೆ ನೀಡುವಂತೆ ಹಾಗೂ ಮಾದಾಪುರ ಮತ್ತು ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೈಸಾರಿ ಜಾಗ ಗುರುತಿಸಿ ನಿವೇಶನ ರಹಿತರಿಗೆ ನೀಡುವಂತೆ ಹೇಳಿದರು.
ಈ ಸಂದರ್ಭ ಪ್ರಮುಖರಾದ ಶಬನಾ, ಸೋಮ, ಸರೋಜ, ಕುಸುಮ, ರಮೇಶ, ಸತೀಶ ಮತ್ತಿತರರು ಇದ್ದರು.