ಕುಶಾಲನಗರ ಜ.4 : ಕೂಡುಮಂಗಳೂರು ಗ್ರಾ.ಪಂ ನ ಸುಂದರನಗರದ ಸಮುದಾಯ ಭವನದಲ್ಲಿ ಇ-ಶ್ರಮ್ ಯೋಜನೆಯ ಅರಿವು ಕಾರ್ಯಕ್ರಮ ಹಾಗೂ ನೋಂದಣಿ ಅಭಿಯಾನ ನಡೆಯಿತು.
ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಇವರ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಿ ಬಗಡಿ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಅಸಂಘಟಿತ ಕಾರ್ಮಿಕರ ದತ್ತಾಂಶ ಅಲಭ್ಯತೆಯ ಕಾರಣ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಅಸಂಘಟಿತ ಕಾರ್ಮಿಕರಿಗೆ ಇ ಶ್ರಮ್ ಕಾರ್ಡನ್ನು ನೀಡಲಾಗುತ್ತಿದೆ. ಪ್ರತಿಯೊಬ್ಬ ಕಾರ್ಮಿಕರ ಇ ಶ್ರಮ್ ಕಾರ್ಡ್ ಗೆ ನೋಂದಾಯಿಸಿಕೊಂಡು, ಅದರ ಉಪಯೋಗವನ್ನು ಸದುಒಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಮಾತನಾಡಿ, ಅಸಂಘಟಿಕ ವಲಯದ ಕಾರ್ಮಿಕರು ಕಡ್ಡಾಯವಾಗಿ ಇ ಶ್ರಮ್ ಕಾರ್ಡನ್ನು ಪಡೆದುಕೊಳ್ಳಬೇಕು. ಇ ಶ್ರಮ್ ಕಾರ್ಡ್ ಪಡೆದವರು, ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಮರಣ ಹೊಂದಿದ್ದಲ್ಲಿ ಅಥವಾ ಶಾಶ್ವತ ದುರ್ಬಲತೆ ಹೊಂದಿದ್ದಲ್ಲಿ ಎರಡು ಲಕ್ಷ ಹಣ ಪರಿಹಾರ ಹಣ ದೊರೆಯಲಿದೆ. ಅಂಗವೈಪಲ್ಯತೆಗೆ ಒಂದು ಲಕ್ಷ ಪರಿಹಾರ ಹಣ ದೊರೆಯುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಮಿಕ ಸಂಘಟನೆ ಪ್ರಮುಖರಾದ ಗೋವಿಂದರಾಜ್ ದಾಸ್ ಮಾತನಾಡಿ, ಕಾರ್ಮಿಕರ ಒಳಿತಿಗಾಗಿ ಕಾರ್ಮಿಕ ಇಲಾಖೆಯಿಂದ ಇ ಶ್ರಮ್ ನೋಂದಣಿ ಅಭಿಯಾನವನ್ನು ನಡೆಸಲಾಗುತ್ತಿದೆ. ಇದನ್ನು ಎಲ್ಲಾ ಕಾರ್ಮಿಕ ವರ್ಗದವರು ಸದ್ಬಳಕೆ ಮಾಡಿಕೊಳ್ಳಬೇಕು. ಅಭಿಯಾನಕ್ಕೆ ಎಲ್ಲಾ ರೀತಿ ಸಹಕಾರವನ್ನು ನೀಡಿದ ಸ್ಥಳೀಯ ಪಂಚಾಯಿತಿ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಇ ಶ್ರಮ್ ನೋಂದಣಿ ಅಭಿಯಾನದಂದು ಸುಂದರನಗರ, ಬಸವೇಶ್ವರ ಬಡಾವಣೆ, ವಿನಾಯಕ ಬಡಾವಣೆ ಹಾಗೂ ನವಗ್ರಾಮದ ಸುಮಾರು 100ಕ್ಕೂ ಹೆಚ್ಚು ಕಾರ್ಮಿಕರು ಇಶ್ರಮ್ ಕಾರ್ಡನ್ನು ನೋಂದಾಯಿಸಿಕೊಂಡರು.
ಈ ಸಂದರ್ಭ ಕಾರ್ಮಿಕ ಇಲಾಖೆಯ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.