ಮಡಿಕೇರಿ, ಜ.4 : ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕಲಿಕೆಯ ಮೂಲಕ ಸಂಶೋಧನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಜಿಲ್ಲಾ ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ( ಎನ್.ಸಿ.ಎಸ್.ಟಿ.ಸಿ.), ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆ- ಸ್ಟೆಪ್ಸ್ ), ಜಿಲ್ಲಾಡಳಿತ, ಕೊಡಗು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ಜಿ.ಪಂ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಕರ್ನಾಟಕ ರಾಜ್ಯ
ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಹಾಗೂ ನಗರದ ಎ.ಎಲ್.ಜಿ.ಕ್ರೆಸೆಂಟ್ ಶಾಲೆಯ ಸಂಯುಕ್ತಾಶ್ರಯದಲ್ಲಿ “ಯೋಗಕ್ಷೇಮಕ್ಕಾಗಿ ಜೀವಿ ಪರಿಸರ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳೋಣ” ಎಂಬ ಕೇಂದ್ರ ವಿಷಯದಡಿ ಮಡಿಕೇರಿ ನಗರದ ಎ.ಎಲ್.ಜಿ.ಕ್ರೆಸೆಂಟ್ ಶಾಲೆಯಲ್ಲಿ ಏರ್ಪಡಿಸಲಾಗಿದ್ದ
ಕೊಡಗು ಜಿಲ್ಲಾಮಟ್ಟದ 30ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಕಿರಿಯ ವಿಜ್ಞಾನಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ವಿಜ್ಞಾನ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡರೆ ವಿಜ್ಞಾನ ಕ್ಷೇತ್ರದಲ್ಲಿ ಯಾವುದೇ ಸವಾಲುಗಳನ್ನು ಎದುರಿಸಲು ಸಹಕಾರಿಯಾಗುತ್ತದೆ. ಇಂತಹ ವಿಜ್ಞಾನ ಸಮಾವೇಶವು ಮಕ್ಕಳಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಹಕಾರಿಯಾಗಿದೆ ಎಂದರು.
ವಿದ್ಯಾರ್ಥಿಗಳು ಜಿಲ್ಲೆಯಲ್ಲಿರುವ ಪ್ರಾಕೃತಿಕ ಹಾಗೂ ಪರಿಸರ ಪೂರಕ ಸಮಸ್ಯೆಗಳನ್ನು ಗುರುತಿಸಿ ಸಮೀಕ್ಷೆ ಕೈಗೊಂಡು ಅವುಗಳನ್ನು ವಿಶ್ಲೇಷಿಸಿ, ಸಂಶೋಧಿಸುವ ಮೂಲಕ ಅವುಗಳಿಗೆ ವೈಜ್ಞಾನಿಕ ಕಾರಣಗಳನ್ನು ಕಂಡುಕೊಳ್ಳುವ ಮೂಲಕ ಉತ್ತಮ ವೈಜ್ಞಾನಿಕ ಯೋಜನಾ ಪ್ರಬಂಧಗಳನ್ನು ತಯಾರಿಸಬೇಕು ಎಂದು ಡಾ.ಯತೀಶ್ ಉಳ್ಳಾಲ್ ಸಲಹೆ ನೀಡಿದರು.
‘ಕಾಡಾನೆ ಮತ್ತು ಮಾನವ ಸಂಘರ್ಷಕ್ಕೆ ಕೊನೆ ಎಂದು ? ‘ ಎಂಬ ವೈಜ್ಞಾನಿಕ ಯೋಜನಾ ಪ್ರಬಂಧವನ್ನು ಮಂಡಿಸಿ
ಜಿಲ್ಲಾಮಟ್ಟದ ಕಿರಿಯ ವಿಜ್ಞಾನಿ ಪ್ರಶಸ್ತಿಗೆ ಭಾಜನರಾದ ಏಳನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ಎಂಬ ವಿದ್ಯಾರ್ಥಿಗೆ ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ ಸೀನಪ್ಪ ಜಿಲ್ಲಾಮಟ್ಟದ
ಕಿರಿಯ ವಿಜ್ಞಾನಿ ಪ್ರಶಸ್ತಿ ನೀಡಿ ಗೌರವಿಸಿದರು.
ಡಾ.ಸೀನಪ್ಪ ಮಾತನಾಡಿ, ವಿದ್ಯಾರ್ಥಿಗಳು ಇಂತಹ ವಿಜ್ಞಾನ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ವಿಜ್ಞಾನ ಕ್ಷೇತ್ರದಲ್ಲಿ ಡಾ.ಅಬ್ದುಲ್ ಕಲಾಂ, ಸರ್ ಎಂ.ವಿಶ್ವೇಶ್ವರಯ್ಯ, ಸರ್ ಸಿ.ವಿ.ರಾಮನ್ ಅವರ ಮಾದರಿಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷ ಹಾಗೂ ಸಮಾವೇಶದ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಭವಿಷ್ಯದಲ್ಲಿ ವಿಜ್ಞಾನಿಗಳಾಗಿ ರೂಪುಗೊಳ್ಳಲು ಮಕ್ಕಳ ವಿಜ್ಞಾನ ಸಮಾವೇಶವು ಸೂಕ್ತ ವೇದಿಕೆ ಕಲ್ಪಿಸುತ್ತದೆ ಎಂದರು.
ಸಂಸ್ಥೆಯ ಕರೆಸ್ಪಾಡೆಂಟ್ ಎಸ್.ಐ.ಮುನೀರ್ ಅಹ್ಮದ್ ಮಾತನಾಡಿ, ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಜಿಲ್ಲೆಯಲ್ಲಿ ಪರಿಷತ್ತಿನ ಜಿಲ್ಲಾಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಮತ್ತು ಅವರ ತಂಡದ ವತಿಯಿಂದ ಶಿಕ್ಷಣ ಇಲಾಖೆ ಯ ಮೂಲಕ ಮಕ್ಕಳಿಗೆ ವಿಜ್ಞಾನ ಹಾಗೂ ಪರಿಸರ ಪೂರಕ ಚಟುವಟಿಕೆಗಳನ್ನು ಉತ್ತಮವಾಗಿ ಸಂಘಟಿಸುವ ಮೂಲಕ
ವಿಜ್ಞಾನ ಕಲಿಕೆಗೆ ಆಸಕ್ತಿ ಮೂಡಿಸುತ್ತಿರುವುದು ಶ್ಲಾಘನೀಯವಾದುದು ಎಂದರು.
ವಿಜ್ಞಾನ ಸಮಾವೇಶಕ್ಕೆ ಮಕ್ಕಳಿಂದ ಉತ್ತಮ ಯೋಜನಾ ಪ್ರಬಂಧಗಳನ್ನು ಮಂಡಿಸಲು ಮಾರ್ಗದರ್ಶಿ ಶಿಕ್ಷಕರ ವಿಶೇಷ ಪರಿಶ್ರಮ ಮತ್ತು ಅವರ ಕಾರ್ಯತತ್ಪರತೆಯು ಶ್ಲಾಘನೀಯವಾದುದು ಎಂದರು.
ತೀರ್ಪುಗಾರರ ಪರವಾಗಿ ಮಾತನಾಡಿದ ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಂಪನ್ಮೂಲ ವ್ಯಕ್ತಿ ಜಿ.ಶ್ರೀನಾಥ್, ವಿದ್ಯಾರ್ಥಿಗಳು ಸಮಾವೇಶದ ಕೇಂದ್ರ ವಿಷಯದಡಿ ವಿವಿಧ ಉಪ ವಿಷಯಗಳಡಿ ಶಿಕ್ಷಕರ ಮಾರ್ಗದರ್ಶನದಲ್ಲಿ ತಮ್ಮ ಸುತ್ತಲಿನ ಸಮಸ್ಯೆಯನ್ನು ಗುರುತಿಸಿ ಸಮೀಕ್ಷೆ ಕೈಗೊಂಡು ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ಉತ್ತಮ ವೈಜ್ಞಾನಿಕ ಯೋಜನಾ ಪ್ರಬಂಧಗಳನ್ನು ಮಂಡಿಸಬೇಕು ಎಂದರು.
ಸಮಾವೇಶದ ಜಿಲ್ಲಾ ಸಂಯೋಜಕ ಜಿ.ಶ್ರೀಹರ್ಷ, ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಪದಾಧಿಕಾರಿ ಎಂ.ಎನ್.ವೆಂಕಟನಾಯಕ್, ಸಂಸ್ಥೆಯ ಉಪಾಧ್ಯಕ್ಷ ಸಿ.ಎ.ಅನೀಸ್, ಖಜಾಂಚಿ ಫಯಾಜ್ ಅಹ್ಮದ್, ನಿರ್ದೇಶಕ ಲಿಯಾಖತ್ ಆಲಿ, ಪ್ರಿನ್ಸಿಪಾಲ್ ಜಾಯ್ಸ್ ವಿನಯ, ವಿಜ್ಞಾನ ವಿಭಾಗದ ಮುಖ್ಯಸ್ಥೆ ಎಂ.ಎಚ್. ಮುಬೀನಾ ಇತರರು ಇದ್ದರು.
ಶಿಕ್ಷಕಿ ಸುಲ್ ಹತ್ ನಿರ್ವಹಿಸಿದರು. ಶಿಕ್ಷಕಿ ಕೆ.ಎಂ.ನೀಲಮ್ಮ ವಂದಿಸಿದರು.