ಮಡಿಕೇರಿ ಜ.4 : ಸೋಮವಾರಪೇಟೆ ತಾಲೂಕಿನ ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವಾಲಯ ಧರ್ಮದರ್ಶಿ ಮಂಡಳಿ ಆಶ್ರಯದಲ್ಲಿ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರೆ ಹಾಗೂ 64ನೇ ಮಹಾರಥೋತ್ಸವ ಜ.13 ರಿಂದ ಜ.17 ರವರೆಗೆ ನಡೆಯಲಿದೆ.
ಜ.13 ರಂದು ‘ಬೆಳ್ಳಿ ಬಂಗಾರ ದಿನ’ದಂದು ಜಾತ್ರೆ ಆರಂಭವಾಗಲಿದ್ದು, ಸಂಜೆ 6.30 ರಿಂದ 7.30 ರವರೆಗೆ ಜಾತ್ರಾ ಪ್ರಾರಂಭೋತ್ಸವ ಪೂಜೆ ಮತ್ತು ಪಾರ್ಥನೆ ನೆರವೇರಲಿದೆ. ಜ.14 ರಂದು ‘ಮಕರ ಸಂಕ್ರಮಣ ಕರುವಿನ ಹಬ್ಬ’ ಆಚರಿಸಲಿದ್ದು, ರಾತ್ರಿ 7 ಗಂಟೆಗೆ ಗರುಡ ಗಂಬದ ಅಗ್ರ ಪೀಠದಲ್ಲಿ ತುಪ್ಪದ ನಂದಾದೀಪ ಬೆಳಗಿಸುವುದು, ಅಂಕುರಾರ್ಪಣಾ ಪೂಜೆ, ಮಹಾ ಮಂಗಳಾರತಿ, ಪ್ರಾರ್ಥನೆ ನೆರವೇರಲಿದೆ.
ಜ.15 ರಂದು ‘ಅರಸು ಬಲ ಸೇವೆ’ ಆಚರಿಸಲಿದ್ದು, ಪೂರ್ವಾಹ್ನ 11 ರಿಂದ 1 ರವರೆಗೆ ಉತ್ತರಾಯಣ, ಮಣ್ಯಕಾಲ ಪೂಜೆ ನಡೆಯಲಿದೆ. ರಾತ್ರಿ 7.30 ರಿಂದ ಗಣಹೋಮ, ರಂಗಪೂಜೆ, ಬೀದಿ ಉತ್ಸವ, ಮಹಾಮಂಗಳಾರತಿ ಜರುಗಲಿದೆ.
ಮಹಾರಥೋತ್ಸವ: ಜ.16 ರಂದು ಮಧ್ಯಾಹ್ನ 12.5 ಗಂಟೆಗೆ ಶುಭ ಮುಹೂರ್ತದಲ್ಲಿ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ 64ನೇ ಮಹಾರಥೋತ್ಸವ ನಡೆಯಲಿದೆ. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 7 ಗಂಟೆಗೆ ಹಿಂದಿನಿಂದ ನಡೆದುಬಂದ ಸಾಂಪ್ರದಾಯಿಕ ‘ಪಲ್ಲಕ್ಕಿ ಉತ್ಸವ’ ನಡೆಯಲಿದೆ.
ಜ.17 ರಂದು ವೇದಮೂರ್ತಿ ಶಿಬರೂರು ಶ್ರೀ ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಮಹಾ ಸಂಪ್ರೋತ್ಸಣಾ ವಿಧಿ ವಿಧಾನ, ಆರ್ಚನೆಗಳು, ಪೂಜಾ ವಿಧಿಗಳು, ಪಂಚಾಮೃತಾಭಿಷೇಕ, ಕ್ಷೀರಾಭಿಷೇಕ, ನಾರಿಕೇಳ ಜಲಾಭಿಷೇಕ, ಮಹಾಮಂಗಳಾರತಿ, ಮಂಗಳ, ಪ್ರಾರ್ಥನೆಗಳು ಜರುಗಲಿವೆ.
ವಸ್ತು ಪ್ರದರ್ಶನ : ಜಾತ್ರೆಯ ಪ್ರಯುಕ್ತ ಜ.15 ರಂದು ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ.
ಗ್ರಾಮಾಂತರ ಪ್ರದೇಶದ ರೈತರು ಬೆಳೆದ ತರಕಾರಿ, ಇತರ ಬೆಳೆಗಳು, ಕಸೂತಿ ಮಾಡಿದ ಸುಂದರವಾದ ವಸ್ತುಗಳು, ಪರಿಶುದ್ಧ ಜೇನು, ಯಾವದೇ ವಿಶೇಷ ವಸ್ತುಗಳನ್ನು ಜ.15 ರಂದು ಬೆಳಿಗ್ಗೆ 11 ಗಂಟೆಯ ಒಳಗಡೆ ವಸ್ತು ಪ್ರದರ್ಶನ ಘಟಕದಲ್ಲಿರಿಸಿ ಹೆಸರು ನೋಂದಾಯಿಸಿಕೊಳ್ಳಬೇಕಿದೆ. ವಿಶೇಷ ವಸ್ತುಗಳಿಗೆ ಜ.17 ರಂದು ಮಧ್ಯಾಹ್ನ 3 ಗಂಟೆಗೆ ಬಹುಮಾನ ವಿತರಣೆ ಮಾಡಲಾಗುತ್ತದೆ.
ಸಮಾರೋಪ ಸಮಾರಂಭ: ಜಾತ್ರಾ ಸಮಾರೋಪ ಸಮಾರಂಭ ಜ.17 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ.ಎಂ.ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕೊಡ್ಲಿಪೇಟೆ ಕಿರಿಕೊಟ್ಟ. ಮಠದ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡುವರು. ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ, ಮಾಜಿ ಸಚಿವ ಬಿ.ಎ.ಜೀವಿಜಯ, ವಿಧಾನ ಪರಿಷತ್ ಮಾಜಿ ಸದಸ್ಯರುಗಳಾದ ಎಸ್.ಜಿ. ಮೇದಪ್ಪ, ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಶಕ್ತಿ ಪತ್ರಿಕೆ ಪ್ರಧಾನ ಸಂಪಾದಕ ಜಿ.ರಾಜೇಂದ್ರ, ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ರವೀಂದ ಹರಪಳ್ಳಿ, ಹಿರಿಯ ವಕೀಲ ಚಂದ್ರಮೌಳಿ, ಉಚ್ಚ ನ್ಯಾಯಾಲಯದ ವಕೀಲ ಎ.ಎಸ್.ಪೊನ್ನಣ್ಣ ಉದ್ಯಮಿ ಬಿ.ಎಂ.ರಾಮಚಂದ್ರ, ಒಳಚರಂಡಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಪಿ. ಚಂದ್ರಕಲಾ, ಜೆಡಿಎಸ್ ಮುಖಂಡ ಎನ್.ಎಂ.ಮುತ್ತಪ್ಪ, ಕಾಂಗ್ರೆಸ್ ಮುಖಂಡ ಮಂಥರ್ ಗೌಡ, ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಹೆಚ್.ಎಸ್, ಚೇತನ್ ಇನ್ನಿತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
ಕ್ರೀಡಾಕೂಟ: ರಥೋತ್ಸವ ಪ್ರಯುಕ್ತ ಶ್ರೀ ಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ಅಂತರ ಜಿಲ್ಲಾ ಮಟ್ಟದ ಪುರುಷರ ಮ್ಯಾಟ್ ಕಬಡ್ಡಿ, ವಾಲಿಬಾಲ್ ಮತ್ತು ಹಗ್ಗ ಜಗ್ಗಾಟ, ಮಹಿಳೆಯರಿಗೆ ಥೋಬಾಲ್ ಮತ್ತು ಹಗ್ಗ ಜಗ್ಗಾಟ ಪಂದ್ಯಾವಳಿ ಏರ್ಪಡಿಸಲಾಗಿದೆ. ಜ.15 ಹಾಗೂ 16 ರಂದು ಕ್ರೀಡಾಕೂಟ ನಡೆಯಲಿದೆ.