ನಾಪೋಕ್ಲು ಜ.6 : ಯವಕಪಾಡಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕಾಡಾನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳುವಂತೆ ಯವಕಪಾಡಿ ಗ್ರಾಮಸ್ಥರು ಆಗ್ರಹಿಸಿದ್ದರು.
ಕೊಡಗು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಯನ್ನು ಕಚೇರಿಯಲ್ಲಿ ಭೇಟಿ ಮಾಡಿದ ಗ್ರಾಮಸ್ಥರು ಬೇಡಿಕೆಯ ಈಡೇರಿಕೆಗಾಗಿ ಗ್ರಾಮಸ್ಥರ ಸಹಿ ಇರುವ ಮನವಿ ಪತ್ರವನ್ನು ಸಲ್ಲಿಸಿದರು.
ಕಕ್ಕಬೆ ಕುಂಜಿಲ ಗ್ರಾ.ಪಂ ವ್ಯಾಪ್ತಿಯ ಯವಕಪಾಡಿ ಗ್ರಾಮವು ಬ್ರಹ್ಮಗಿರಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿದ್ದು, ಅರಣ್ಯ ಹಕ್ಕು, ಸಮುದಾಯ ಅರಣ್ಯ ಹಕ್ಕು ಪ್ರದೇಶಗಳನ್ನು ಹೊಂದಿರುತ್ತಾರೆ. ಅರಣ್ಯದಂಚಿನಲ್ಲಿ ವಾಸವಾಗಿರುವ ಗಿರಿಜನರು ಕಾಡಾನೆಗಳ ಉಪಟಳಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ.
ತಡಿಯ೦ಡಮೊಳ್ ಬೆಟ್ಟ ಶ್ರೇಣಿಯು ಈ ವ್ಯಾಪ್ತಿಯಲ್ಲಿದ್ದು, ಪ್ರವಾಸಿಗರು ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಆದರೆ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು, ಕೃಷಿ ಪಸಲು ನಾಶವಾಗುತ್ತಿದೆ. ಈಗಾಗಲೇ ಮೂವರು ಗ್ರಾಮಸ್ಥರು ಕಾಡಾನೆಗಳ ತುಳಿತಕ್ಕೆ ಬಲಿಯಾಗಿದ್ದು, ಕೃಷಿಕರು, ಕೂಲಿಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು, ವಾಹನ ಚಾಲಕರು ಈ ವ್ಯಾಪ್ತಿಯಲ್ಲಿ ಭಯದಿಂದ ಸಂಚರಿಸುವಂತಾಗಿದೆ. ಹಾಡು ಹಗಲೇ ಕಾಡಾನೆಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದು ಜನರು ಪ್ರತಿದಿನ ಆತಂಕದಲ್ಲೇ ಜೀವನ ನಡೆಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾಡಾನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ ಗ್ರಾಮಸ್ಥರು, ಅರಣ್ಯ ಸಂರಕ್ಷಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕೃಷಿಕರು ಬೆಳೆದ ಏಲಕ್ಕಿ, ಕಾಫಿ, ಬಾಳೆ, ಅಡಿಕೆ ನಾಶವಾಗಿದ್ದು, ಸೂಕ್ತ ಪರಿಹಾರವನ್ನು ಒದಗಿಸಬೇಕು. ಅರಣ್ಯದಂಚಿನಲ್ಲಿರುವ ಗಿರಿಜನರ ಹಾಡಿಗೆ ತೆರಳುವ ರಸ್ತೆಯಲ್ಲಿ ಬೀದಿ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ, ಲ್ಯಾಂಪ್ ಸೊಸೈಟಿ ನಿರ್ದೇಶಕರಾದ ಕೆ.ಕೆ.ಪೊನ್ನಪ್ಪ, ಕೆ.ಎಮ್ ಕಾವೇರಪ್ಪ, ಬೆಳೆಗಾರ ಅರೆಯಡ ರತ್ತು ಹಾಜರಿದ್ದರು.
ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ ಮನವಿಯನ್ನು ಸ್ವೀಕರಿಸಿ ಉಪಟಲ ನೀಡುವ ಕಾಡಾನೆಯನ್ನು ಹಿಡಿಯುವುದಲ್ಲದೆ ನಷ್ಟ ಪರಿಹಾರ ಹಾಗೂ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.
ವರದಿ : ದುಗ್ಗಳ ಸದಾನಂದ