ವಿರಾಜಪೇಟೆ ಜ.7 ಮಧ್ಯಾಹ್ನದ ಬಿಸಿಯೂಟ ಸಜ್ಜುಗೊಳಿಸುವ ಹಂತದಲ್ಲಿ ಕಾಲಿಗೆ ಬಿಸಿ ನೀರು ಬಿದ್ದು ಗಂಭೀರ ಸ್ವರೂಪದ ಸುಟ್ಟಗಾಯಗಳಾದ ಮಹಿಳೆಯೊಬ್ಬರು ಇಲಾಖೆಯ ಯಾವುದೇ ನೆರವು ಇಲ್ಲದೆ ಸಂಕಷ್ಟಕ್ಕೆ ಒಳಗಾಗಿರುವ ಘಟನೆ ಪರಾಣೆಯಲ್ಲಿ ನಡೆದಿದೆ.
ಮಡಿಕೇರಿ ತಾಲೂಕಿನ ಕೊಣಂಜಗೇರಿ ಗ್ರಾ.ಪಂ ವ್ಯಾಪ್ತಿಯ ಪಾರಾಣೆ ಗ್ರಾಮದ ನಿವಾಸಿ ಎ.ಕೆ. ಸೋಮಯ್ಯ ಅವರ ಪತ್ನಿ ಮತ್ತು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಸೇವೆಯಲ್ಲಿರುವ ಎ.ಎಸ್. ಶಾಂತಿ 9( 58) ಗಾಯಳಾಗಿ ತೊಂದರೆಗೆ ಸಿಲುಕಿರುವ ಮಹಿಳೆ .
ಪತ್ರಿಕೆಯೊಂದಿಗೆ ತನ್ನ ಸಂಕಷ್ಟ ತೋಡಿಕೊಂಡಿರುವ ಅವರು, ಸುಮಾರು ಎರಡುವ ವರ್ಷಗಳಿಂದ ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಅಡುಗೆ ಸಹಾಯಕಿಯಾಗಿ ದುಡಿಯುತ್ತಿದ್ದೇನೆ. ಜ.2 ರಂದು ಕುದಿಯುವ ಬಿಸಿ ನೀರಿನ ಪಾತ್ರೆಯನ್ನು ಇಳಿಸುವ ವೇಳೆಯಲ್ಲಿ ಆಕಸ್ಮಿಕವಾಗಿ ಕುದಿಯುವ ನೀರು ಎಡಕಾಲಿನ ಮೇಲೆ ಬಿದ್ದು ಗಂಭೀರ ಗಾಯಗಳಾಗಿದೆ. ನಾಪೋಕ್ಲು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಹೆಚ್ಚಿನ ಚಿಕಿತ್ಸೆ ಪಡೆದಿದ್ದೇನೆ. ಮನೆಯಲ್ಲಿ ಪತಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಜೀವನ ನಡೆಸಲು ಶಾಲೆಯ ಅಡುಗೆ ಕೆಲಸದ ಸಂಭಳವೇ ಆಧಾರವಾಗಿದ್ದು, ಸುಟ್ಟ ಗಾಯಗಳಿಂದ ಇದೀಗ ನಡೆಯಲು, ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಇಲಾಖೆ ವತಿಯಿಂದ ಸಹಾಯಹಸ್ತದ ನಿರೀಕ್ಷೆಯಲ್ಲಿದ್ದೇನೆ ಎಂದರು.
ಶಾಲೆಯ ಮುಖ್ಯೋಪದ್ಯಾಯಿನಿ ಹೆಚ್.ಎನ್.ಶಾಂತಿ ಪ್ರತಿಕ್ರಿಯಿಸಿ, ಇಲಾಖೆ ವತಿಯಿಂದ ದೊರಕುವ ಸೌಲಭ್ಯವನ್ನು ದೊರಕಿಸಿಕೊಡಲು ಪ್ರಯತ್ನಿಸುವ ಭರವಸೆ ನೀಡಿದರು.