ನಾಪೋಕ್ಲು ಜ.7 : ಎಮ್ಮೆಮಾಡು ಗ್ರಾ.ಪಂ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆ ಉದ್ಘಾಟನೆ ಮತ್ತು ವಿವಿಧ ಕಾಮಗಾರಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಚಾಲನೆ ನೀಡಿದರು.
ಗ್ರಾಮದಲ್ಲಿ 51 ಲಕ್ಷ ರೂಗಳಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿದರು. ಬಳಿಕ ಎಮ್ಮೆಮಾಡು ಪ್ರೌಢ ಶಾಲೆಗೆ 17 ಲಕ್ಷದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಸಭಾಂಗಣ ಮತ್ತು ಪಾಡಿಯಾಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 27 ಲಕ್ಷ ರೂಗಳಲ್ಲಿ ನಿರ್ಮಾಣ ಮಾಡಲಿರುವ ಶಾಲಾ ಕೊಠಡಿಗಳಿಗೆ ಗುದ್ದಲಿ ಪೂಜೆಯನ್ನು ನೆರೆವೇರಿಸಿದರು.
ಬಳಿಕ ಮಾತನಾಡಿದ ಶಾಸಕ ಬೋಪಯ್ಯ ಜನರಿಂದ ಒಮ್ಮೆ ಚುನಾಯಿತರಾಗಿ ಆಯ್ಕೆಯಾದರೆ ಎಲ್ಲಾ ಸಮಾಜದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕಾಗಿರುವುದು ನಮ್ಮ ಜವಾಬ್ದಾರಿ, ಅದನ್ನು ಅರಿತು ಎಲ್ಲಾ ಸಮಾಜದ ಜನರಿಗಾಗಿ ಕೆಲಸಗಳನ್ನು ನಾನು ಮಾಡಿದ್ದೇನೆ ಎಂದರು. ಎಮ್ಮೆಮಾಡು ಗ್ರಾಮದ ಮುಖ್ಯ ರಸ್ತೆಯಲ್ಲಿ ಸ್ವಲ್ಪ ಕಾಮಗಾರಿ ಬಾಕಿ ಉಳಿದಿದ್ದು, ಮುಂದಿನ ತಿಂಗಳ ಉರೂಸ್ ಕಾರ್ಯಕ್ರಮದ ಮುಂಚಿತವಾಗಿ ಕಾಮಗಾರಿ ಪೂರ್ಣ ಗೊಳಿಸುವಂತೆ ಸಂಬಂಧಪಟ್ಟ ಅಭಿಯಂತರರಿಗೆ ಸೂಚಿಸಲಾಗಿದೆ ಎಂದರು.
ಈ ಸಂದರ್ಭ ಗ್ರಾ.ಪಂ ಸದಸ್ಯ ಚಕ್ಕೇರ ಇಸ್ಮಾಯಿಲ್, ಗಫೂರ್ ಪಡಿಯಾಣಿ, ಟಿ.ಕೆ.ಯೂಸುಫ್, ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ, ಕೆಡಿಪಿ ಸದಸ್ಯ ಶಿವಚಾಳಿಯಂಡ ಅಂಬಿ ಕಾರ್ಯಪ್ಪ , ಬಿಜೆಪಿ ತಾಲ್ಲೂಕು ಕಾರ್ಯದರ್ಶಿ ಪಾಡಿಯಮ್ಮಂಡ ಮನು ಮಹೇಶ್, ಮಾಯಿನ್ ಸಿ.ಎಂ ಕಾಳೆರ ಉಮ್ಮರ್, ಬಿ. ಯು.ಅಶ್ರಫ್, ಗುತ್ತಿಗೆದಾರ ಬಾಬು, ವಿನಾಯಕ ಹಾಗೂ ಗ್ರಾಮಸ್ಥರು ಹಾಜರಿದ್ದರು.
ಪೂಜಾ ಕಾರ್ಯಗಳನ್ನು ಅರ್ಚಕ ಮಕ್ಕಿ ದಿವಾಕರ್ ನೆರವೇರಿಸಿದರು.
ವರದಿ :ಝಕರಿಯ ನಾಪೋಕ್ಲು