ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನವು ಸುಮಾರು 550 ವರ್ಷಗಳ ಇತಿಹಾಸವುಳ್ಳದ್ದಾಗಿದೆ. ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಈ ದೇವಳವು ಕರ್ನಾಟಕದ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಇದೆ. ಜಿಲ್ಲಾ ಕೇಂದ್ರದಿಂದ ೩೮ ಕಿಲೋಮೀಟರ್ ಆಗ್ನೇಯದಲ್ಲಿದೆ. ತಿರುಪತಿಯ ತಿರುಮಲ ದೇವಸ್ಥಾನದ ಪಶ್ಚಿಮ ದಿಕ್ಕಿನಲ್ಲಿ ಇರುವುದರಿಂದ ಕಾರ್ಕಳದ ವೆಂಕಟರಮಣ ದೇವಸ್ಥಾನವನ್ನು ಪಡುತಿರುಪತಿ ಎಂದೂ ಕರೆಯಲಾಗುತ್ತದೆ.
:: ಐತಿಹ್ಯ ಹಾಗೂ ಇತಿಹಾಸ ::
ಗೌಡ ಸಾರಸ್ವತ ಬ್ರಾಹ್ಮಣ ಸಮಯದಾಯ ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಉತ್ತರದಿಂದ ಗೋವಾ ಪ್ರದೇಶಕ್ಕೆ ವಲಸೆ ಬಂದು ಕೃಷಿ ಹಾಗೂ ವ್ಯಾಪಾರದಂತಹ ಜೀವನೋಪಾಯ ವೃತ್ತಿಗಳಲ್ಲಿ ನೆಲೆಗೊಂಡಿತು. ಹೀಗೆ ವಲಸೆ ಬಂದವರಲ್ಲಿ ಕೆಲವು ಕುಟುಂಬಗಳು ಉದ್ಯೋಗ ಅರಸಿ ಗೋವಾದಿಂದ ದಕ್ಷಿಣಕ್ಕೆ ಸಾಗಿದರು. ಈ ರೀತಿ ವಲಸೆ ಬಂದವರಲ್ಲಿ ಕಾರ್ಕಳದಲ್ಲಿ ನೆಲೆಗೊಂಡ ಸೋಹಿರೇ ಪ್ರಭು ಅವರ ಕುಟುಂಬವೂ ಒಂದು. ಕಾರ್ಕಳದಲ್ಲಿ ಅವರು ಯಾವ ವೃತ್ತಿ ಮಾಡಿಕೊಂಡಿದ್ದರು ಎಂಬ ಮಾಹಿತಿ ತಿಳಿಯದಿದ್ದರೂ, ಅವರ ಮುಂದಿನ ಪೀಳಿಗೆಯವರು ನಿರ್ವಹಿಸುತ್ತಿದ್ದ ಆಯುರ್ವೇದ ವೈದ್ಯಕೀಯದ ವೃತ್ತಿಯನ್ನು ಗಮನಿಸಿ ಸೋಹಿರೇ ಪ್ರಭುಗಳೂ ಕೂಡ ಅಯುರ್ವೇದ ಪಂಡಿತರಾಗಿದ್ದರು ಎಂಬ ಊಹೆ ಇದೆ. ಇನ್ನೊಂದು ಐತಿಹ್ಯದ ಪ್ರಕಾರ, ಸೋಹಿರೆ ಪ್ರಭು ಭಟ್ಕಳದವರಾಗಿದ್ದು, ಭಟ್ಕಳಕ್ಕೆ ಭೇಟಿ ನೀಡಿದ್ದ ಆಗ ಕಾರ್ಕಳವನ್ನು ಆಳುತ್ತಿದ್ದ ಜೈನ ಮತಾವಲಂಬಿ ಬೈರವರಸರು, ಅಲ್ಲಿನ ಗೌಡ ಸಾರಸ್ವತ ಬ್ರಾಹ್ಮಣರ ಪಾಂಡಿತ್ಯಕ್ಕೆ ಮುದಗೊಂಡು, ಸೋಹಿರೇ ಪ್ರಭು ಹಾಗೂ ಇತರ ಮೂರು ಕುಟುಂಬಗಳನ್ನು ಕಾರ್ಕಳಕ್ಕೆ ಕರೆತಂದು ಅವರಿಗೆ ರಾಜಾಶ್ರಯ ನೀಡಿದರು ಎನ್ನಲಾಗುತ್ತದೆ. ಹೀಗೆ ಸೋಹಿರೆ ಪ್ರಭು ಹಾಗೂ ಇತರ ಮೂರು ಕುಟುಂಬದವರು ಕಾರ್ಕಳದಲ್ಲಿ ನೆಲೆಗೊಂಡರು. ಒಮ್ಮೆ ಗೋವಾದಿಂದ ತಿರುಪತಿಗೆ ತೆರಳಿದ್ದ ಸೋಮ ಶರ್ಮ ಎಂಬ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಗೃಹಸ್ಥರು ಮರಳಿ ಗೋವಾದತ್ತ ಹೋಗುತ್ತಿರುವಾಗ, ತನ್ನ ಪತ್ನಿ ಗರ್ಭಿಣಿಯಾದುದರಿಂದ ಕಾರ್ಕಳದಲ್ಲಿ ಸೋಹಿರೆ ಪ್ರಭು ಅವರ ಆಶ್ರಯದದಲ್ಲಿ ಉಳಿಯಬೇಕಾಗುತ್ತದೆ. ಮುಂದೆ ಸೋಹಿರೆ ಪ್ರಭುರವರ ಸಲಹೆಯಂತೆ ಕಾರ್ಕಳದಲ್ಲೇ ನೆಲೆಸುತ್ತಾರೆ. ವೇದ ಹಾಗು ಜ್ಯೋತಿಷ್ಯ ಶಾಸ್ತ್ರದ ಜ್ಞಾನಹೊಂದಿದ್ದ ಸೋಮ ಶರ್ಮರು, ಜ್ಯೋತಿಷ್ಯ ಶಾಸ್ತ್ರವನ್ನು ತಮ್ಮ ಜೀವನೋಪಾಯಕ್ಕಾಗಿ ಅವಲಂಬಿಸಿದರು. ಕಾರ್ಕಳದಲ್ಲಿ ಅದಾಗಲೇ ನೆಲೆಗೊಂಡಿದ್ದ ಗೌಡ ಸಾರಸ್ವತ ಬ್ರಾಹ್ಮಣರು ಬಹುತೇಕ ಸಾಸಷ್ಟಿಯ ವೈಷ್ಣವರಾಗಿದ್ದರು. ಆ ಕಾಲದಲ್ಲಿ ಕಾರ್ಕಳದಲ್ಲಿ ಶಿವಾಲಯಗಳಿದ್ದರೂ ವೈಷ್ಣವ ದೇವಾಲಯವಿರಲಿಲ್ಲ. ಆಗ ಸೋಮ ಶರ್ಮ ಮತ್ತು ಸೋಹಿರೆ ಪ್ರಭು ಕಾರ್ಕಳದಲ್ಲಿ ವೈಷ್ಣವ ದೇವಾಲಯವೊಂದನ್ನು ನಿರ್ಮಿಸುವ ನಿರ್ಧಾರ ಕೈಗೊಂಡರು. ಸೋಮ ಶರ್ಮರು ತಿರುಪತಿಯಿಂದ ಬರುವಾಗ ವೆಂಕಟರಮಣನ ವಿಗ್ರಹವೊಂದನ್ನು ತಂದಿದ್ದರು. ಅದನ್ನೇ ಪ್ರತಿಷ್ಠಾಪಿಸುವ ಉದ್ದೇಶ ಹೊಂದಿದರು. ಬಳಿಕ ಬೈರವರಸನಲ್ಲಿ ದೇವಳ ನಿರ್ಮಾಣಕ್ಕೆ ಅನುಮತಿ ಕೇಳಿದರು. ಕಾರ್ಕಳದಿಂದ ವರಂಗಕ್ಕೆ ಹೋಗುವ ದಾರಿಯಲ್ಲಿ ಕಾಡಿನಿಂದ ಆವೃತ್ತವಾದ ಪ್ರದೇಶವೊಂದನ್ನು ದೇವಾಲಯ ಹಾಗೂ ಮನೆಗಳನ್ನು ನಿರ್ಮಿಸುವ ಸಲುವಾಗಿ ಸೋಮ ಶರ್ಮ ಹಾಗೂ ಸೋಹಿರೇ ಪ್ರಭುಗಳಿಗೆ ಬೈರವರಸರು ನೀಡಿದರು. ಈ ಎಲ್ಲಾ ವಿಷಯಗಳಿಗೆ ಯಾವುದೇ ದಾಖಲೆಗಳಿಲ್ಲ. ಆದರೆ ಇಂದಿಗೂ ಸೋಹೀರೇ ಪ್ರಭುರವರ ವಂಶಸ್ಥರೇ ದೇವಸ್ಥಾನದ ಒಂದನೇ ಮೊಕ್ತೇಸರರಾಗಿರುತ್ತಾರೆ ಹಾಗೂ ಸೋಮಶರ್ಮರ ವಂಶಸ್ಥರೇ ಅರ್ಚಕ ವರ್ಗದವರಾಗಿತ್ತಾರೆ. ಅವರ ಮೌಖಿಕ ಹೇಳಿಕೆಗಳನ್ನು ಹಾಗೂ ಕ್ರಿಸ್ತಶಕ 1432ರಲ್ಲಿ ನಡೆದ ಕಾರ್ಕಳ ಗೊಮ್ಮಟೆಶ್ವರನ ಪ್ರತಿಷ್ಠೆಯಂದು ಗೌಡ ಸಾರಸ್ವತ ಬ್ರಾಹ್ಮಣರಿಗೆ ಅವರ ಗುಡಿಯಲ್ಲೇ ಅನ್ನ ಸಂತರ್ಪಣೆ ನಡೆದ ಬಗ್ಗೆ ಉಲ್ಲೇಖವಿರುವುದನ್ನೇ ದಾಖಲೆಯಾಗಿ ಪರಿಗಣಿಸಲಾಗಿದೆ.[1]
16ನೇ ಶತಮಾನದ ಆರಂಭದಲ್ಲಿ ಪೋರ್ಚುಗೀಸರು ಗೋವಾದಲ್ಲಿ ತಮ್ಮ ರಾಜಕೀಯ ಆಧಿಪತ್ಯವನ್ನು ಸ್ಥಾಪಿಸಿದರು. ಆ ಸಂದರ್ಭದಲ್ಲಿ ಪೋರ್ಚುಗೀಸರು ಸ್ಥಳೀಯರನ್ನು ಒತ್ತಾಯದಿಂದ ಕ್ರೈಸ್ತಧರ್ಮಕ್ಕೆ ಮತಾಂತರಗೊಳಿಸತೊಡಗಿದರು. ಈ ಮತತಾಂತರಕ್ಕೆ ಒಲ್ಲದೆ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಹಲವರು ಗೋವಾದಿಂದ ದಕ್ಷಿಣ ದಿಕ್ಕಿಗೆ ವಲಸೆ ಬಂದರು. ವಲಸೆ ಬಂದವರು ದಕ್ಷಿಣ ಕರಾವಳಿಯುದ್ದಕ್ಕೂ ಅಂದರೆ ಈಗ ಕರ್ನಾಟದಲ್ಲಿರುವ ಕಾರವಾರ, ಅಂಕೋಲಾ, ಶಿರಾಲಿ, ಭಟ್ಕಳ, ಗಂಗೊಳ್ಳಿ, ಮುಂತಾದ ಸ್ಥಳಗಳು ಹಾಗೂ ಕೇರಳದ ಮಂಜೇಶ್ವರ, ಕುಂಬ್ಳೆ, ಕೊಚ್ಛಿಯವರೆಗೂ ನೆಲೆ ಕಂಡುಕೊಳ್ಳುತ್ತಾ ಬಂದರು[3]ಹೀಗೆ ಆಶ್ರಯ ಹುಡುಕುತ್ತಾ ಬಂದ ಈ ಸಮುದಾಯದವರು ಕೆಲವರು ಆ ಸಮಯದಲ್ಲಾಗಲೇ ಗೌಡ ಸಾರಸ್ವತ ಬ್ರಾಹ್ಮಣರಿದ್ದ ಕಾರ್ಕಳದಲ್ಲಿ ನೆಲೆಸಿದರು. ಈ ಸಮುದಾಯದವರು ವೆಂಕಟರಮಣ ದೇವಸ್ಥಾನದ ಆಸುಪಾಸಿನಲ್ಲೆ ಮನೆಗಳನ್ನು ಕಟ್ಟಿಕೊಂಡರು. ಹೀಗೆ ಹೊಸ ಪೇಟೆಯೊಂದು ದೇವಸ್ಥಾನದಿಂದ ಈಗ ಸಾಲ್ಮರವೆಂದು ಕರೆಯಲ್ಪಡುವ ಪ್ರದೇಶದವರೆಗೂ ವಿಸ್ತರಿಸಿತು.
:: ಉತ್ಸವ ಹಾಗೂ ಆಚರಣೆಗಳು ::
ದಿನ ನಿತ್ಯದ ಪೂಜೆಗಳೊಂದಿಗೆ ಕೆಲವು ವಾರ್ಷಿಕ ಉತ್ಸವಗಳು ಹಾಗೂ ವಿಶೇಷ ಆಚರಣೆಗಳು ನಡೆಯುತ್ತವೆ.
:: ರಥೋತ್ಸವ ::
ಕಾರ್ಕಳ ದೇವಸ್ಥಾನದಲ್ಲಿ ರಥೋತ್ಸವ ಆಚರಣೆಯು ಯಾವಾಗ ಪ್ರಾರಂಭವಾಯ್ತು ಎಂಬ ಬಗ್ಗೆ ದೃಢವಾದ ದಾಖಲೆಗಳಿಲ್ಲ. ಪುರಾತನ ಕಡತಗಳನ್ನು ಅವಲೋಕಿಸಿದಾಗ ಕ್ರಿಸ್ತಶಕ 1777ರ ಜೀರ್ಣೋದ್ಧಾರದ ನಂತರ 1785ರಲ್ಲಿ ಬಣ್ಣದ ರಥ ಹಾಗೂ ಕ್ರಿಸ್ತಶಕ 1827ರಲ್ಲಿ ಬ್ರಹ್ಮ ರಥದ ನಿರ್ಮಾಣವಾಯಿತೆಂದು ತಿಳಿದು ಬರುತ್ತದೆ. ಕಡತದಲ್ಲಿ ಸಿಕ್ಕಿದ ದಾಖಲೆಯೊಂದರಲ್ಲಿ ಕ್ರಿಸ್ತಶಕ 1816 ರಲ್ಲಿ ನಡೆದ ರಥೋತ್ಸವದ ಖರ್ಚಿನ ವಿವರಗಳಿವೆ. ಇದರಿಂದ 1785ರಲ್ಲಿ ಬಣ್ಣದ ರಥ ನಿರ್ಮಾಣವಾದ ಮೇಲೆ ರಥೋತ್ವದ ಆಚರಣೆಯು ಆರಂಭವಾಯಿತು ಎಂಬ ಊಹೆ ಇದೆ. ದೀಪೋತ್ಸವ
ಕಾರ್ತಿಕ ಮಾಸದ ಪಂಚಮಿಯಂದು ದೀಪೋತ್ಸವದ ಆಚರಿಸಲಾಗುತ್ತದೆ. ಅದೇ ದಿನ ಶ್ರೀ ಭುವನೇಂದ್ರ ಕಾಲೇಜಿನ ಬಳಿಯಿರುವ ವನದಲ್ಲಿ ವನ ಭೋಜನವು ನಡೆಯುವುದು.
ಈ ರಥೊತ್ಸವವನ್ನು ಹಿಂದೂ ಪಂಚಾಂಗದ ಶಾಲಿವಾಹನ ಶಕೆಯ ಅನುಸಾರ ಪ್ರತಿವರ್ಷ ವೈಶಾಖ ಶುದ್ಧ ಪ್ರತಿಪದೆಯಿಂದ ವೈಶಾಖ ಶುದ್ಧ ಷಷ್ಠಿಯವರೆಗ ಆರು ದಿನಗಳ ಕಾಲ ಆಚರಿಸುವರು.
:: ದೀಪೋತ್ಸವ ::
ಕಾರ್ತಿಕ ಮಾಸದ ಪಂಚಮಿಯಂದು ದೀಪೋತ್ಸವದ ಆಚರಿಸಲಾಗುತ್ತದೆ. ಅದೇ ದಿನ ಶ್ರೀ ಭುವನೇಂದ್ರ ಕಾಲೇಜಿನ ಬಳಿಯಿರುವ ವನದಲ್ಲಿ ವನ ಭೋಜನವು ನಡೆಯುವುದು.
:: ವಿಶ್ವರೂಪ ದರ್ಶನ ::
ಕಾರ್ತೀಕ ಮಾಸದ ಕೊನೆಯ ಆದಿತ್ಯವಾರದಂದು ವಿಶ್ವರೂಪ ದರ್ಶನವನ್ನು ಆಚರಿಸಲಾಗುತ್ತದೆ.ದೇವಸ್ಥಾನದ ಪರಿಸರದಲ್ಲೇಲ್ಲಾ ದೀಪಗಳನ್ನು ಬೆಳಗಿ ಬ್ರಾಹ್ಮೀ ಮಹೂರ್ತದಲ್ಲಿ ವಿಷ್ವರೂಪ ದರ್ಶನ ಪುಜೆ ಮಾಡಲಾಗುವುದು. ಸುಮಾರು ಏಳೆಂಟು ಸಾವಿರ ಜನ ಸಾಲಾಗಿ ಬಂದು ದೇವರ ದರ್ಶನ ಮಾಡುವುದು ಈ ದಿನದ ವಿಶೇಷ.