NEWS DESK : : ಹಿಂದೂಗಳ ಹಬ್ಬಗಳಲ್ಲಿ ಶ್ರೀ ಗಣೇಶ ಚತುರ್ಥಿಗೆ ವಿಶೇಷ ಸ್ಥಾನವಿದೆ. ಶ್ರೀ ಗಣೇಶ ಚತುರ್ಥಿಯ ದಿನದಂದು ಮತ್ತು ಈ ಹಬ್ಬದ ಇತರ ದಿನಗಳಂದು ಶ್ರೀ ಗಣೇಶತತ್ತ್ವವು ಇತರ ದಿನಗಳ ತುಲನೆಯಲ್ಲಿ 1000 ಪಟ್ಟು ಹೆಚ್ಚು ಕಾರ್ಯರತವಾಗಿರುತ್ತದೆ. ಇಂತಹ ಸಮಯದಲ್ಲಿ ಶ್ರೀ ಗಣಪತಿಯ ಉಪಾಸನೆಯನ್ನು ಮಾಡುವುದರಿಂದ ಆಧ್ಯಾತ್ಮಿಕ ಸ್ತರದಲ್ಲಿ ಗಣೇಶತತ್ತ್ವದ ಹೆಚ್ಚು ಲಾಭವಾಗುತ್ತದೆ. ಶ್ರೀ ಗಣೇಶ ಚತುರ್ಥಿಯನ್ನು ಸೆ.7 ರಂದು ಆಚರಿಸಲಿದ್ದೇವೆ. ಗಣೇಶಭಕ್ತರಿಗೆ ವಿಘ್ನಹರ್ತಾ, ಸಿದ್ಧಿದಾತಾ ಮತ್ತು ಅಷ್ಟ ದಿಕ್ಕುಗಳ ಅಧಿಪತಿಯಾದ ಶ್ರೀ ಗಣೇಶನ ಭಾವಪೂರ್ಣ ಪೂಜೆಯನ್ನು ಮಾಡಿ ಅವನ ಆಶೀರ್ವಾದವನ್ನು ಪಡೆಯುವ ಹಂಬಲ ಸದಾ ಇರುತ್ತದೆ. ‘ಗಣೇಶಭಕ್ತರು ಗಣೇಶಪೂಜೆಯನ್ನು ಭಾವಪೂರ್ಣವಾಗಿ ಮಾಡುವಂತಾಗಲಿ, ಮತ್ತು ಅವರ ಮೇಲೆ ಗಣಪತಿಯ ಕೃಪೆಯಾಗಲಿ’ ಎಂಬ ಉದ್ದೇಶದಿಂದ ಶ್ರೀ ಗಣೇಶ ಚತುರ್ಥಿಯನ್ನು ಶಾಸ್ತ್ರೀಯವಾಗಿ ಹೇಗೆ ಆಚರಿಸಬೇಕು ಎಂಬ ಮಾರ್ಗದರ್ಶನವನ್ನು ಮುಂದಿನ ಲೇಖನದ ಮೂಲಕ ನೀಡಲಾಗಿದೆ.
ಜೇಡಿಮಣ್ಣು ಅಥವಾ ಆವೆಮಣ್ಣಿನಿಂದ ಮೂರ್ತಿಯನ್ನು ತಯಾರಿಸಬೇಕು ಎಂಬ ಶಾಸ್ತ್ರವಿಧಿಯಿದೆ:
ಪಾರ್ವತಿಯು ತಯಾರಿಸಿದ ಶ್ರೀ ಗಣೇಶನು ಮಹಾಗಣಪತಿಯ ಅವತಾರವಾಗಿದ್ದಾನೆ. ಅವಳು ಮೃತ್ತಿಕೆಯ (ಮಣ್ಣಿನ) ಆಕಾರ ಮಾಡಿ ಅದರಲ್ಲಿ ಶ್ರೀ ಗಣೇಶನ ಆವಾಹನೆಯನ್ನು ಮಾಡಿದಳು. (ಪುರಾಣದಲ್ಲಿ ಶ್ರೀ ಗಣೇಶನು ಮಣ್ಣಿನಿಂದ ನಿರ್ಮಾಣವಾಗಿದ್ದಾನೆ ಎಂದು ಹೇಳಲಾಗಿದೆ.) ಶ್ರೀ ಗಣೇಶನ ಮೂರ್ತಿಯನ್ನು ಜೇಡಿಮಣ್ಣಿನಿಂದ ಅಥವಾ ಆವೆಮಣ್ಣಿನಿಂದ ತಯಾರಿಸಬೇಕು. ಇತ್ತೀಚೆಗೆ ಭಾರ ಕಡಿಮೆಯಾಗಬೇಕು ಮತ್ತು ಅದು ಹೆಚ್ಚು ಆಕರ್ಷಕವಾಗಿ ಕಾಣಿಸಬೇಕೆಂದು ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನಿಂದ ಮೂರ್ತಿಗಳನ್ನು ತಯಾರಿಸಲಾಗುತ್ತದೆ.
1. ಮಣ್ಣಿನ ಮೂರ್ತಿಯಿಂದಾಗುವ ಲಾಭಗಳು
* ಮಣ್ಣಿನ ಮೂರ್ತಿಯಲ್ಲಿ ಶ್ರೀ ಗಣೇಶನ ಪವಿತ್ರಕಗಳು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಿ ಕಾರ್ಯನಿರತವಾಗಿರುತ್ತವೆ: ‘ಮಣ್ಣಿನಲ್ಲಿರುವ ಪೃಥ್ವಿತತ್ತ್ವದಿಂದಾಗಿ ಮೂರ್ತಿಯು ಬ್ರಹ್ಮಾಂಡ ಮಂಡಲದಿಂದ ಆಕರ್ಷಿಸಿದ ದೇವತೆಯ ತತ್ತ್ವವು ಮೂರ್ತಿಯಲ್ಲಿ ದೀರ್ಘಕಾಲ ಕಾರ್ಯನಿರತವಾಗಿರುತ್ತದೆ. ತದ್ವಿರುದ್ಧವಾಗಿ ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನ ಮೂರ್ತಿಯಲ್ಲಿ ದೇವತೆಯ ತತ್ತ್ವವನ್ನು ಆಕರ್ಷಿಸುವ ಮತ್ತು ಕಾರ್ಯನಿರತವಾಗಿಡುವ ಕ್ಷಮತೆಯು ಕಡಿಮೆಯಿರುತ್ತದೆ. ಆದ್ದರಿಂದ ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನ ಮೂರ್ತಿಯಿಂದ ಆಧ್ಯಾತ್ಮಿಕ ಸ್ತರದಲ್ಲಿ ಹೆಚ್ಚೇನೂ ಲಾಭವಾಗುವುದಿಲ್ಲ.’
* ‘ಮಣ್ಣಿನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವುದರಿಂದ ಅದು ಕೂಡಲೇ ನೀರಿನಲ್ಲಿ ಕರಗಿ, ಹರಿಯುವ ನೀರಿನಿಂದ ಸುತ್ತ ಮುತ್ತಲಿನ ಪರಿಸರದಲ್ಲಿ ದೂರದವರೆಗೆ ದೇವತೆಗಳ ಸಾತ್ತ್ವಿಕ ಲಹರಿಗಳನ್ನು ಕಡಿಮೆ ಕಾಲಾವಧಿಯಲ್ಲಿ ಪ್ರಕ್ಷೇಪಿಸುತ್ತದೆ. ಇದರಿಂದ ಸಂಪೂರ್ಣ ಪರಿಸರದ ವಾಯುಮಂಡಲ ಶುದ್ಧವಾಗುತ್ತದೆ. ಈ ಪ್ರಕ್ರಿಯೆಯಿಂದ ಸಮಷ್ಟಿ ಸ್ತರದಲ್ಲಿ ಲಾಭವಾಗಲು ಸಹಾಯವಾಗುತ್ತದೆ.
2. ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನ ಮೂರ್ತಿಯಿಂದಾಗುವ ಹಾನಿ
*ಮೂರ್ತಿಯ ವಿಸರ್ಜನೆಯು ಸರಿಯಾಗಿ ಆಗುವುದಿಲ್ಲ:
‘ಪ್ಲಾಸ್ಟರ್ ಆಫ್ ಪ್ಯಾರಿಸ್’ ನೀರಿನಲ್ಲಿ ಸಹಜವಾಗಿ ಕರಗದಿರುವುದರಿಂದ ವಿಸರ್ಜನೆಯ ನಂತರ ಮೂರ್ತಿಯು ನೀರಿನ ಮೇಲೆ ತೇಲುತ್ತದೆ. ಅನೇಕ ಕಡೆಗಳಲ್ಲಿ ವಿಸರ್ಜಿತವಾಗದ ಮೂರ್ತಿಗಳ ಅವಶೇಷಗಳನ್ನು ಕೆಲವೊಮ್ಮೆ ಒಟ್ಟು ಮಾಡಿ ಅವುಗಳ ಮೇಲೆ ‘ಬುಲ್ಡೋಝರ್’ನ್ನು ಚಲಾಯಿಸಲಾಗುತ್ತದೆ. ಹೀಗೆ ಮಾಡುವುದು ಶ್ರೀ ಗಣಪತಿಯ ಘೋರ ವಿಡಂಬನೆಯೇ ಆಗಿದೆ. ಯಾವ ಸನ್ಮಾನದಿಂದ ನಾವು ಶ್ರೀ ಗಣಪತಿಯನ್ನು ಆವಾಹನೆ ಮಾಡುತ್ತೇವೆಯೋ, ಅದೇ ಸನ್ಮಾನದಿಂದ ಅವನನ್ನು ಬೀಳ್ಕೊಡುವುದೂ ಆವಶ್ಯಕವಾಗಿದೆ. ಶ್ರೀ ಗಣಪತಿಯ ವಿಡಂಬನೆಯಾಗುವುದರಿಂದ ಘೋರ ಪಾಪ ತಗಲುತ್ತದೆ.
*‘ಪ್ಲಾಸ್ಟರ್ ಆಫ್ ಪ್ಯಾರಿಸ್’ನಿಂದ ಕೆರೆ, ನದಿ, ಸಮುದ್ರ ಮುಂತಾದವುಗಳ ನೀರು ಕಲುಷಿತಗೊಳ್ಳುತ್ತದೆ.
ಇತ್ತೀಚೆಗೆ ತೆಂಗಿನಕಾಯಿ, ಬಾಳೆಹಣ್ಣು, ಅಡಿಕೆ, ನಾಣ್ಯ, ‘ಸಿರಿಂಜ್’ ಮುಂತಾದ ವಸ್ತುಗಳಿಂದಲೂ ಶ್ರೀ ಗಣೇಶಮೂರ್ತಿಯನ್ನು ತಯಾರಿಸುತ್ತಾರೆ. ಇಂತಹ ವಸ್ತುಗಳಿಂದ ಮೂರ್ತಿಯನ್ನು ತಯಾರಿಸುವುದು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ. ಇಂತಹ ಮೂರ್ತಿಯ ಕಡೆಗೆ ಶ್ರೀ ಗಣೇಶನ ಪವಿತ್ರಕಗಳು ಆಕರ್ಷಿತವಾಗುವುದಿಲ್ಲ.
ಶಾಸ್ತ್ರಕ್ಕನುಸಾರ ತಯಾರಿಸಿದ ಮೂರ್ತಿಯು ಏಕೆ ಸಾತ್ತ್ವಿಕವಾಗಿರುತ್ತದೆ ?
* ಮೂರ್ತಿಯು ದೇವತೆಯ ಮೂಲ ರೂಪದೊಂದಿಗೆ ಎಷ್ಟು ಹೋಲುತ್ತದೆಯೋ, ಅಷ್ಟೇ ಹೆಚ್ಚು ಪ್ರಮಾಣದಲ್ಲಿ ಆ ದೇವತೆಯ ತತ್ತ್ವವು ಮೂರ್ತಿಯ ಕಡೆಗೆ ಆಕರ್ಷಿಸುತ್ತದೆ. ಋಷಿಮುನಿಗಳು ಮತ್ತು ಸಂತರು ಶಾಸ್ತ್ರಗಳನ್ನು ಬರೆದಿದ್ದಾರೆ. ಅವರಿಗೆ ದೇವತೆಗಳ ಸಾಕ್ಷಾತ್ಕಾರವು ಹೇಗೆ ಆಗಿದೆಯೋ, ಹಾಗೇ ಅವರು ಶಾಸ್ತ್ರದಲ್ಲಿ ವರ್ಣಿಸಿದ್ದಾರೆ; ಆದುದರಿಂದ ಶಾಸ್ತ್ರದಲ್ಲಿ ಹೇಳಿದಂತೆ ಮೂರ್ತಿಯನ್ನು ತಯಾರಿಸಿದರೆ ಅದು ಸಾತ್ತ್ವಿಕವಾಗುತ್ತದೆ.
* ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಪ್ರತಿಯೊಂದು ದೇವತೆ ಎಂದರೆ ಒಂದು ವಿಶಿಷ್ಟ ತತ್ತ್ವವಾಗಿದೆ. ‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳಿಗೆ ಸಂಬಂಧಿಸಿದ ಶಕ್ತಿ ಒಟ್ಟಿಗೆ ಇರುತ್ತವೆ’, ಈ ಸಿದ್ಧಾಂತಕ್ಕನುಸಾರ ಮೂರ್ತಿವಿಜ್ಞಾನದಂತೆ ಮೂರ್ತಿಯನ್ನು ತಯಾರಿಸಿದರೆ ಆ ಮೂರ್ತಿಯಲ್ಲಿ ಆ ದೇವತೆಯ ತತ್ತ್ವವು ಆಕರ್ಷಿಸುತ್ತದೆ.
‘ಶ್ರೀ ಗಣಪತಿ ಅಥರ್ವಶೀರ್ಷ’ದಲ್ಲಿ ವರ್ಣಿಸಿದ ಶ್ರೀ ಗಣೇಶನ ಮೂರ್ತಿವಿಜ್ಞಾನ
‘ಶ್ರೀ ಗಣಪತಿ ಅಥರ್ವಶೀರ್ಷ’ದಲ್ಲಿ ಗಣೇಶನ ರೂಪ (ಮೂರ್ತಿವಿಜ್ಞಾನ) ವನ್ನು ಮುಂದಿನಂತೆ ಕೊಡಲಾಗಿದೆ. – ‘ಏಕದಂತಂ ಚತುರ್ಹಸ್ತಂ…|’ ಅಂದರೆ ‘ಏಕದಂತ, ಚತುರ್ಭುಜ, ಪಾಶ ಮತ್ತು ಅಂಕುಶವನ್ನು ಧರಿಸಿರುವವನು, ಒಂದು ಕೈಯಲ್ಲಿ (ಮುರಿದ) ದಂತವನ್ನು (ಹಲ್ಲು) ಧರಿಸುವವನು ಮತ್ತು ಇನ್ನೊಂದು ಕೈಯು ವರದಮುದ್ರೆಯಲ್ಲಿರುವವನು, ಮೂಷಕ ಚಿಹ್ನೆ ಇರುವ ಧ್ವಜವಿರುವವನು, ರಕ್ತ (ಕೆಂಪು) ವರ್ಣ, ಲಂಬೋದರ, ಮೊರದಂತೆ ಕಿವಿಗಳಿರುವವನು, ರಕ್ತ (ಕೆಂಪು) ವಸ್ತ್ರಗಳನ್ನು ಉಟ್ಟುಕೊಂಡಿರುವವನು, ಮೈಗೆ ರಕ್ತಚಂದನದ ಲೇಪನವನ್ನು ಹಚ್ಚಿಕೊಂಡವನು ಮತ್ತು ರಕ್ತ (ಕೆಂಪು) ಪುಷ್ಪಗಳಿಂದ ಪೂಜಿಸಲ್ಪಡುವವನು.’
ಶ್ರೀ ಗಣೇಶನ ಪೂಜೆಯಲ್ಲಿ ಉಪಯೋಗಿಸುವ ವಿಶಿಷ್ಟ ವಸ್ತು – ದೂರ್ವೆ
ಗಣೇಶನ ಪೂಜೆಯಲ್ಲಿ ದೂರ್ವೆಗೆ (ಗರಿಕೆ) ವಿಶೇಷ ಮಹತ್ವವಿದೆ. ದೂಃಅವಮ್ ಹೀಗೆ ದೂರ್ವೆ ಈ ಶಬ್ದವು ನಿರ್ಮಾಣವಾಗಿದೆ. ‘ದೂಃ’ ಅಂದರೆ ದೂರದಲ್ಲಿ ಇರುವುದು ಮತ್ತು ‘ಅವಮ್’ ಅಂದರೆ ಯಾವುದು ಹತ್ತಿರ ತರುತ್ತದೆಯೋ ಅದು. ದೂರದಲ್ಲಿರುವ ಶ್ರೀ ಗಣೇಶನ ಪವಿತ್ರಕಗಳನ್ನು ಯಾವುದು ಹತ್ತಿರ ತರುತ್ತದೆಯೋ, ಅದುವೇ ದೂರ್ವೆ ಆಗಿದೆ.
*ಶ್ರೀ ಗಣಪತಿಗೆ ದೂರ್ವೆಯನ್ನು ಅರ್ಪಿಸುವುದರ ಕಾರಣಗಳು
ಪೌರಾಣಿಕ ಕಾರಣ: ಗಣಪತಿಯು ತನ್ನನ್ನು ಮದುವೆಯಾಗಬೇಕೆಂದು ಓರ್ವ ಅಪ್ಸರೆಯು ಧ್ಯಾನಮಗ್ನನಾಗಿದ್ದ ಗಣಪತಿಯ ಧ್ಯಾನಭಂಗ ಮಾಡಿದಳು. ಗಣಪತಿಯು ವಿವಾಹಕ್ಕೆ ನಿರಾಕರಿಸಿದ್ದರಿಂದ ಅಪ್ಸರೆಯು ಗಣಪತಿಗೆ ಶಾಪ ಕೊಟ್ಟಳು. ಇದರಿಂದ ಗಣಪತಿಯ ತಲೆಗೆ ದಾಹವಾಗತೊಡಗಿತು. ಈ ದಾಹವನ್ನು ಕಡಿಮೆ ಮಾಡಿಕೊಳ್ಳಲು ಗಣಪತಿಯು ತಲೆಯ ಮೇಲೆ ದೂರ್ವೆಗಳನ್ನು ಧರಿಸಿದನು. ಈ ಕಾರಣಕ್ಕಾಗಿ ಗಣಪತಿಗೆ ದೂರ್ವೆಗಳನ್ನು ಅರ್ಪಿಸುತ್ತಾರೆ.’
*ಆಯುರ್ವೇದಕ್ಕನುಸಾರ ಕಾರಣ: ‘ದೂರ್ವೆಯ ರಸದಿಂದ ಶರೀರದ ಉಷ್ಣತೆಯು ಕಡಿಮೆಯಾಗುತ್ತದೆ’ ಎಂದು ಆಯುರ್ವೇದವು ಸಹ ಹೇಳುತ್ತದೆ.
ಆಧ್ಯಾತ್ಮಿಕ ಕಾರಣ: ನಾವು ಪೂಜಿಸುವ ಮೂರ್ತಿಯಲ್ಲಿ ದೇವತ್ವವು ಹೆಚ್ಚಿಗೆ ಬಂದು ನಮಗೆ ಚೈತನ್ಯದ ಲಾಭವಾಗಬೇಕು ಎಂಬುದು ಪೂಜೆಯ ಒಂದು ಉದ್ದೇಶವಾಗಿರುತ್ತದೆ. ಆದುದರಿಂದ ಆಯಾಯ ದೇವತೆಗಳ ತತ್ತ್ವವನ್ನು ಹೆಚ್ಚೆಚ್ಚು ಆಕರ್ಷಿಸುವಂತಹ ವಸ್ತುಗಳನ್ನು ದೇವತೆಗಳಿಗೆ ಅರ್ಪಿಸುವುದು ಸೂಕ್ತವಾಗಿದೆ. ದೂರ್ವೆಯಲ್ಲಿ ಗಣೇಶತತ್ತ್ವವನ್ನು ಆಕರ್ಷಿಸುವ ಕ್ಷಮತೆಯು ಎಲ್ಲಕ್ಕಿಂತ ಹೆಚ್ಚಿಗೆ ಇರುವುದರಿಂದ ಗಣಪತಿಗೆ ದೂರ್ವೆಗಳನ್ನು ಅರ್ಪಿಸುತ್ತಾರೆ.
ದೂರ್ವೆ ಹೇಗಿರಬೇಕು?: ಗಣಪತಿಗೆ ಎಳೆಯ ದೂರ್ವೆಗಳನ್ನು ಅರ್ಪಿಸಬೇಕು. ಎಳೆಯ ದೂರ್ವೆಗೆ ‘ಬಾಲತೃಣಮ್’ ಎನ್ನುತ್ತಾರೆ. ಬಲಿತಿರುವ ದೂರ್ವೆಯು ಒಂದು ರೀತಿಯ ಹುಲ್ಲಿನಂತೆಯೇ ಇರುತ್ತದೆ. ದೂರ್ವೆಗಳಿಗೆ 3, 5, 7 ಹೀಗೆ ಬೆಸ ಸಂಖ್ಯೆಯ ಗರಿಗಳಿರಬೇಕು. ದೂರ್ವೆಗಳನ್ನು ಒಟ್ಟಿಗೆ ಕಟ್ಟುವುದರಿಂದ ಅವುಗಳ ಸುಗಂಧವು ಹೆಚ್ಚು ಸಮಯ ಉಳಿಯುತ್ತದೆ. ಅವು ಹೆಚ್ಚು ಸಮಯ ತಾಜಾ ಆಗಿರಬೇಕೆಂದು ಅವುಗಳನ್ನು ನೀರಿನಲ್ಲಿ ಅದ್ದಿ ಅರ್ಪಿಸುತ್ತಾರೆ. ಇವುಗಳಿಂದ ಗಣಪತಿಯ ಪವಿತ್ರಕಗಳು ಹೆಚ್ಚು ಕಾಲ ಮೂರ್ತಿಯಲ್ಲಿ ಉಳಿಯುತ್ತವೆ.
ಗಣಪತಿಗೆ ಮಾಡಬೇಕಾದ ಪ್ರಾರ್ಥನೆ
* ಹೇ ಬುದ್ಧಿದಾತಾ, ಶ್ರೀ ಗಣೇಶಾ, ನನಗೆ ಸದ್ಬುದ್ಧಿಯನ್ನು ಪ್ರದಾನಿಸು. ಹೇ ವಿಘ್ನಹರ್ತಾ, ನನ್ನ ಜೀವನದಲ್ಲಿ ಬರುವ ಸಂಕಟಗಳನ್ನುನಿವಾರಿಸು.
* ಪ್ರಾಣಶಕ್ತಿಯನ್ನು ನೀಡುವ ಹೇ ಶ್ರೀ ಗಣಪತಿ, ದಿನವಿಡೀ ಉತ್ಸಾಹದಿಂದ ಕೆಲಸ-ಕಾರ್ಯಗಳನ್ನು ಮಾಡಲು ನನಗೆ ಅವಶ್ಯಕವಿದ್ದಷ್ಟು ಶಕ್ತಿಯನ್ನು ನೀಡು.
ಗಣೇಶ ಪೂಜೆಯನ್ನು ಆರಂಭಿಸುವಾಗ ಮಾಡಬೇಕಾದ ಪ್ರಾರ್ಥನೆ
* ಹೇ ಗಜಾನನಾ, ಈ ಪೂಜೆಯ ಮಾಧ್ಯಮದಿಂದ ನನ್ನ ಅಂತಃಕರಣದಲ್ಲಿ ನಿನ್ನ ಬಗ್ಗೆ ಭಕ್ತಿಭಾವ ಉತ್ಪನ್ನವಾಗಲಿ.
* ಈ ಪೂಜೆಯ ಮಾಧ್ಯಮದಿಂದ ಪ್ರಕ್ಷೇಪಿಸುವ ಚೈತನ್ಯವು ನಿನ್ನ ಕೃಪೆಯಿಂದ ನನ್ನಿಂದ ಹೆಚ್ಚು ಪ್ರಮಾಣದಲ್ಲಿ ಗ್ರಹಿಸುವಂತಾಗಲಿ.
ಗಣೇಶೋತ್ಸವದ ಸಮಯದಲ್ಲಿ ಮಾಡಬೇಕಾದ ಪ್ರಾರ್ಥನೆ
ಹೇ ಶ್ರೀ ಗಣೇಶಾ, ಗಣೇಶೋತ್ಸವದ ಸಮಯದಲ್ಲಿ ಎಂದಿಗಿಂತ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುವ ನಿನ್ನ ತತ್ತ್ವದ ಲಾಭವು ನನಗೆ ಹೆಚ್ಚಿನ ಪ್ರಮಾಣದಲ್ಲಿ ಗ್ರಹಿಸುವಂತಾಗಲಿ.
ಆಧಾರ : ಸನಾತನ ಸಂಸ್ಥೆ