ಗೋಣಿಕೊಪ್ಪ ಜ.7 : ಕೊಡಗು ಪ್ರೆಸ್ ಕ್ಲಬ್, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಗೋಣಿಕೊಪ್ಪ ಕಾಲ್ಸ್ ಸಹಯೋಗದಲ್ಲಿ ಕಾಲ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಬೆಳ್ಳಿ ಮಹೋತ್ಸವ ಕಾರ್ಯಕ್ರಮಕ್ಕೆ ಸಂಭ್ರಮದ ಚಾಲನೆ ನೀಡಲಾಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಬೆಳ್ಳಿ ಮಹೋತ್ಸವ ಲಾಂಛನ ಅನಾವರಣ, ಚಿತ್ರಕಲೆಯೊಂದಿಗೆ ಪ್ರಾರ್ಥನೆ, ಅತಿಥಿಗಳಿಂದ ಚಿತ್ರಕಲೆ ಚಿತ್ತಾರ ಪ್ರಸ್ತುತ ಪಡಿಸಲಾಯಿತು.
ಜಿಲ್ಲೆಯ ವಿವಿಧ ಭಾಗಗಳಿಂದ 317 ಸ್ಪರ್ಧಿಗಳು ಭಾಗವಹಿಸಿ ಕಲೆಯ ಮೂಲಕ ಸಂದೇಶ ಸಾರಿದರು. ಪ್ರಕೃತಿ, ಕೊಡಗಿನ ಇತಿಹಾಸ, ಕಾವೇರಿ ಐತಿಹ್ಯ ಕಲೆಯ ಮೂಲಕ ಹೊರ ಹೊಮ್ಮಿತು. ಪುತ್ತಾಮನೆ ವಿದ್ಯಾ ಜಗದೀಶ್ ಪ್ರಕೃತಿ ಹಾಡಿಗೆ ಕಲಾವಿದ ಬಿ. ಆರ್. ಸತೀಶ್ ಚಿತ್ರ ಬಿಡಿಸಿ ಪ್ರಾರ್ಥನೆ ಕಾರ್ಯಕ್ರಮವನ್ನು ವಿಶೇಷವಾಗಿ ನಡೆಸಿಕೊಟ್ಟರು.
ಉದ್ಘಾಟನೆ : ಅಂತಾರಾಷ್ಟ್ರೀಯ ಅಥ್ಲೆಟ್ ತೀತಮಾಡ ಅರ್ಜುನ್ ದೇವಯ್ಯ ಲಾಂಛನ ಅನಾವರಣಗೊಳಿಸಿ ಮಾತನಾಡಿ, ಭಾವನೆಗಳನ್ನು ಅಲೆಯಾಗಿ ಬಡಿಯದಂತೆ ನಿಯಂತ್ರಿಸುವ ಸಾಮರ್ಥ್ಯ ಮುಖ್ಯ. ಜೀವನದಲ್ಲಿ ಶಿಸ್ತು ಹೆಚ್ಚು ಸಾಧಿಸಲು ಸಹಕಾರಿಯಾಗುತ್ತದೆ. ಗುರು ಗೌರವ ಕಾಪಾಡಿಕೊಳ್ಳಬೇಕು ಎಂದರು.
ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಮಹಾಪೋಷಕ ಜಿ.ರಾಜೇಂದ್ರ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಕಲೆಯಿಂದ ಬದುಕಿನ ಸಾಕಷ್ಟು ಚಿತ್ರಣಗಳು ನೆನಪಿನಲ್ಲಿ ಉಳಿಯುವಂತಾಗಿದೆ. ಸಮಾಜದಲ್ಲಿ ಸಾಕಷ್ಟು ಜಾಗೃತಿ ಮೂಡಿಸಲು ಹಾಗೂ ಇಂಜಿನಿಯರಿಂಗ್ ಶಿಕ್ಷಣದ ಮೂಲಕ ಕಲೆಗೆ ಮಹತ್ವ ದೊರೆಯುತ್ತಿದೆ ಎಂದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಚಿತ್ರಕಲೆ ಬುದ್ದಿಶಕ್ತಿ ಪೋಷಣೆಗೆ ಸಹಕಾರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಡಾ. ಉಳ್ಳಿಯಡ ಎಂ. ಪೂವಯ್ಯ ಮಾತನಾಡಿ, ಬೆಳ್ಳಿ ಹಬ್ಬದ ಪ್ರಯುಕ್ತ ಸೆಪ್ಟೆಂಬರ್ ತಿಂಗಳವರೆಗೂ ಜನಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಲೆ, ಸಾಹಿತ್ಯ, ಕ್ರೀಡೆ, ಸಾಮಾಜಿಕ ಕಾರ್ಯಗಳ ಮೂಲಕ ಆಚರಣೆಯನ್ನು ಸಾಮಾಜಕ್ಕೆ ಅರ್ಪಣೆ ಮಾಡಿಕೊಳ್ಳಲಾಗುವುದು ಎಂದರು.
ಕಾಲ್ಸ್ ಶಾಲಾ ಶಿಕ್ಷಕಿ ಸಣ್ಣುವಂಡ ಶಕು ಮಂದಣ್ಣ, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಇದ್ದರು.
ಸಮಾರೋಪ : ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಐಮಂಡ ಗೋಪಾಲ್ ಸೋಮಯ್ಯ ನಡೆಯಿತು.
ಶಾಸಕ ಕೆ. ಜಿ. ಬೋಪಯ್ಯ ಮಾತನಾಡಿ, ಕೊಡಗು ಪ್ರೆಸ್‌ಕ್ಲಬ್ ಬೆಳ್ಳಿ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆ ವಿಚಾರವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗ ತನ್ನದೇ ಆದ ಸೇವೆ ನೀಡುತ್ತಿದೆ. ಕೊಡಗಿನ ಪತ್ರಕರ್ತರು ಜಿಲ್ಲೆಯಲ್ಲಿ ನಡೆದ ಜಲಪ್ರಳಯ ಸಂದರ್ಭ ಹಾಗೂ ಕೋವಿಡ್ ಕಾಲದಲ್ಲಿ ಸಾಮಾಜಿಕ ಜವಬ್ದಾರಿ ನಿಭಾಯಿಸಿದ ರೀತಿ ಮೆಚ್ಚುವಂತ ವಿಚಾರವಾಗದೆ. ವೃತ್ತಿಯೊಂದಿಗೆ ಕಲೆ ಪೋಷಣೆಗೂ ಚಿತ್ರಕಲಾ ಕಾರ್ಯಕ್ರಮದ ಮೂಲಕ ತೊಡಗಿಕೊಂಡಿರುವುದು ಶ್ಲಾಘನೀಯ ಎಂದರು.
ಕಾಲ್ಸ್ ವಿದ್ಯಾ ಸಂಸ್ಥೆ ಪ್ರಾಂಶುಪಾಲ ಬಾಚೇಟೀರ ಗೌರಮ್ಮ ನಂಜಪ್ಪ, ವಿರಾಜಪೇಟೆ ಲಿಟ್ಲ್ ಸ್ಕಾಲರ್ ಅಕಾಡೆಮಿ ಅಧ್ಯಕ್ಷೆ ಪೂಜಾ ರವೀಂದ್ರ, ಅಂತಾರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಟಿ. ಎನ್. ಮಂಜುನಾಥ್, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಎನ್. ದಿನೇಶ್ ಬಹುಮಾನ ವಿತರಣೆ ಮಾಡಿದರು.
ಕಲಾವಿದರಾದ ರೂಪೇಶ್ ನಾಣಯ್ಯ, ರಾಮ್ ಗೌತಂ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಫಲಿತಾಂಶ : ಕಿರಿಯ ಪ್ರಾಥಮಿಕ ವಿಭಾಗದ ಪಿ. ಎಂ. ಸಮುದೈತ (ಪ್ರ), ಕೆ. ಎಂ. ದೀಕ್ಷಾ (ದ್ವಿ), ಎಚ್. ಆರ್. ಮೋಕ್ಷಾ (ತೃ), ಕಾಕೇರ ಪೌನ ಪೂವಮ್ಮ, ಎಂ. ಎಸ್. ರಿನ್ಸಿ, ಟಿ. ಡಿ. ರಿಧಿ ಪೊನ್ನಮ್ಮ ಸಮಧಾನಕರ ಬಹುಮಾನ ಪಡೆದುಕೊಂಡರು. ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಚೀರಂಡ ಸಿ. ತಿಮ್ಮಯ್ಯ (ಪ್ರ), ಎಂ. ಸಿ. ಶಿವಾನಿ (ದ್ವಿ), ಕೆ. ಎಂ. ಉನ್ಮಯ್ (ತೃ), ಅಲಿಕಾ ಮನ್ನಾ, ವಿ. ಎಸ್. ಸುಜಯ್ ಸಮಧಾನಕರ ಬಹುಮಾನ ಪಡೆದರು. ಪ್ರೌಢ ವಿಭಾಗದಲ್ಲಿ ಸಿ. ಪಿ. ಭುವನಾ (ಪ್ರ), ಬಿ. ಎಂ. ಸೀತಮ್ಮ (ದ್ವಿ), ಟಿ. ಎಸ್. ವಿಷ್ಣು (ತೃ), ಎ. ಎಸ್. ತನಿಷ್ಕಾ, ಕೆ. ಎಲ್. ತಸ್ಫಯಾ ಸಮದಾನಕರ ಬಹುಮಾನ ಪಡೆದುಕೊಂಡರು. ಕಾಲೇಜು ವಿಭಾಗದಲ್ಲಿ ಅಧಿತಿ ಭಾನುಪ್ರಕಾಶ್ (ಪ್ರ), ಹರ್ಷಿನಿ ಪ್ರದೀಪ್ (ದ್ವಿ), ಆರ್. ಮನೋಜ್ (ತೃ), ರಿಸಿಸ್ ಸುಬ್ಬಯ್ಯ, ಜೆ. ಸಾಧು ಸಮಧಾನಕರ ಬಹುಮಾನ ದೊರಕಿತು. ಸಾರ್ವಜನಿಕ ವಿಭಾಗದಲ್ಲಿ ಕ್ಲಿಫರ್ಡ್ ಡಿಮೆಲ್ಲೋ (ಪ್ರ), ಕೆ. ಎ. ಲೋಹಿತ್ (ದ್ವಿ), ಪಿ. ಆರ್. ನಿಸಾರ್ (ತೃ), ಸದಾನಂದ ಪುರೋಹಿತ್, ಪುತ್ತಾಮನೆ ವಿದ್ಯಾ ಜಗದೀಶ್ ಸಮದಾನಕರ ಬಹುಮಾನ ಪಡೆದರು. ಪತ್ರಕರ್ತರ ವಿಭಾಗದಲ್ಲಿ ಐಮಂಡ ಗೋಪಾಲ್ ಸೋಮಯ್ಯ (ಪ್ರ), ಚೈತನ್ಯ (ದ್ವಿ), ಪ್ರದೀಪ್ ಕುಮಾರ್ (ತೃ), ಸುನಿಲ್ ಪೊನ್ನೇಟಿ, ವನಿತಾ ಚಂದ್ರಮೋಹನ್ ಸಮದಾನಕರ ಬಹುಮಾನ ಪಡೆದರು.