ಮಡಿಕೇರಿ ಜ.9 : ಪಾಲೂರು ಗ್ರಾಮದ ವಾರ್ಷಿಕ ಊರೊರ್ಮೆ ಸಂಭ್ರಮದಿಂದ ಜರುಗಿತು.
‘ಪಾಲೂರ್ ಕೊಡವಾಮೆ ಕೂಟ’ ಏರ್ಪಡಿಸಿದ್ದ 17ನೇ ವರ್ಷದ ಕಾರ್ಯಕ್ರಮದಲ್ಲಿ ಪಾಲೂರಿನಲ್ಲಿ ನೆಲೆಸಿರುವ ಕೊಡವ ಕುಟುಂಬದ ನೂರಾರು ಸದಸ್ಯರು ಭಾಗಿಯಾಗಿದ್ದರು.
ಈ ಸಂದರ್ಭ ಅಖಿಲ ಕೊಡವ ಸಮಾಜದ ಅಧ್ಯಕ್ಷರಾದ ಪರದಂಡ ಸುಬ್ರಮಣಿ ಅವರು ಮಾತನಾಡಿ “ಕೊಡವ ಜನಾಂಗದ ಅಭಿವೃದ್ಧಿಗೆ ಗ್ರಾಮ ಮಟ್ಟದಲ್ಲಿ ಇಂತಹ ಕಾರ್ಯಕ್ರಮದ ಅವಶ್ಯಕತೆ ಇದೆ. ಕೊಡವರ ಆಚಾರ ವಿಚಾರಗಳ ಬಗ್ಗೆ ಯುವಜನತೆಗೆ ಅರಿವು ಮೂಡಿಸಲು ಇದು ಉತ್ತಮ ವೇದಿಕೆಯಾಗಿದೆ ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೇಪಾಡಂಡ ವೇಣು ಉತ್ತಪ್ಪ ಅಧ್ಯಕ್ಷತೆ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ, ಕಾಫಿ ಬೆಳೆಗಾರ ಬೊಳ್ಳಿಯಂಡ ಎಂ.ಪಳoಗಪ್ಪ ಅವರನ್ನು ಗೌರವಿಸಲಾಯಿತು.
ಕೊಡವಾಮೆ ಕೂಟದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಕಿರುಚಿತ್ರ, ಸಾಕ್ಷ್ಯಚಿತ್ರ ನಿರ್ದೇಶಕ ಮಂದನೆರವಂಡ ಯುಗ ದೇವಯ್ಯ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಗ್ರಾಮಸ್ಥರಿಗೆ ಹಲವು ಮನೋರಂಜನಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು, ಇದರಲ್ಲಿ ಮುಖ್ಯ ಆಕರ್ಷಣೆಯಾಗಿದ್ದು ‘ಕೊಡವ ವಾಲಗ ಆಟ್’ ಸ್ಪರ್ಧೆ. ಸ್ಪರ್ಧೆಯಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಕೂಡಿ ಒಬ್ಬರಿಗೊಬ್ಬರು ಸವಾಲು ಹಾಕುತ್ತಾ ಸಾಂಪ್ರದಾಯಿಕ ವಾಲಗಕ್ಕೆ ಹೆಜ್ಜೆ ಹಾಕಿದರು.
ಸಮಾರಂಭದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಮಂದನೆರವಂಡ ಸಂಜು, ಉಪಾಧ್ಯಕ್ಷ ಪೊಡುವಡ ಜಯ ಪೊನ್ನಪ್ಪ,ಉಪಾಧ್ಯಕ್ಷೆ ನೆರವಂಡ ಚೆಸ್ಲಿ ದೇವಯ್ಯ,ಸದಸ್ಯರಾದ ಪೈಕೇರ ನಂದ, ಚೆರುವಾಳoಡ ದಿವಿಜ, ನೆರವಂಡ ಸಭಿ, ಮಂದನೆರವಂಡ ಲೋಕೇಶ್, ಮೇಪಾಡಂಡ ವಿಜು, ನೆರವಂಡ ಶ್ವೇತಾ ಹಾಜರಿದ್ದರು.