ಮಡಿಕೇರಿ ಜ.9 : ನಗರದಲ್ಲಿ ತಲೆ ಎತ್ತುತ್ತಿರುವ ಗುಜರಿ ಅಂಗಡಿಗಳಿಂದ ಸಾರ್ವಜನಿಕರಿಗೆ ಹಾಗೂ ವಾಹನಗಳ ಸಂಚಾರಕ್ಕೆ ಅನಾನುಕೂಲವಾಗುತ್ತಿದೆ. ನಗರಸಭೆ ತಕ್ಷಣ ಎಚ್ಚೆತ್ತುಕೊಂಡು ಗುಜರಿ ಅಂಗಡಿಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕೆಂದು ವೀರನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಹರೀಶ್ ಜಿ.ಆಚಾರ್ಯ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಟಕಣೆ ನೀಡಿರುವ ಅವರು, ನಗರದ ಜನನಿಬಿಡ ಮತ್ತು ಇಕ್ಕಟ್ಟಾದ ಪ್ರದೇಶದಲ್ಲಿ ಗುಜರಿ ಅಂಗಡಿಗಳಿಗೆ ಅವಕಾಶ ನೀಡಬಾರದೆನ್ನುವ ನಿಯಮವಿದ್ದರೂ ಅಲ್ಲಲ್ಲಿ ಗುಜರಿ ಅಂಗಡಿಗಳು ತಲೆ ಎತ್ತುತ್ತಿವೆ. ಇದರಿಂದಾಗಿ ರಸ್ತೆಗಳಲ್ಲಿ ಗಾಜಿನ ಚೂರು, ಕಬ್ಬಿಣದ ತುಂಡುಗಳು, ಹಳೆಯ ವಾಹನಗಳ ಬಿಡಿಭಾಗಗಳು ಮತ್ತಿತರ ತ್ಯಾಜ್ಯಗಳು ಕಾಣಿಸಿಕೊಳ್ಳುತ್ತಿದ್ದು, ಪಾದಾಚಾರಿಗಳು ಹಾಗೂ ವಾಹನ ಚಾಲಕರು ಅಪಾಯದ ಆತಂಕದಲ್ಲಿ ಮುಂದೆ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗುಜರಿ ಅಂಗಡಿಗಳಿರುವ ಪ್ರದೇಶದ ರಸ್ತೆಗಳಲ್ಲಿ ಸಂಚಾರ ಸುರಕ್ಷಿತವಲ್ಲ ಎನ್ನುವುದು ಈಗಾಗಲೇ ಖಾತ್ರಿಯಾಗಿದ್ದು, ಫುಟ್ ಪಾತನ್ನು ಕೂಡ ಗುಜರಿ ಸಾಮಾನುಗಳು ಆಕ್ರಮಿಸಿಕೊಂಡಿವೆ.
ಮಾರುಕಟ್ಟೆ ರಸ್ತೆಯಲ್ಲಿ ಗುಜರಿ ಅಂಗಡಿ ಬಳಿ ದ್ವಿಚಕ್ರ ವಾಹನ ಚಾಲಕರೊಬ್ಬರು ಅನಾಹುತ ತಪ್ಪಿಸಲು ಹೋಗಿ ಕೈ ಮುರಿದುಕೊಂಡು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ರೀತಿಯ ಅನೇಕ ಘಟನೆಗಳು ನಡೆಯುತ್ತಲೇ ಇದೆ. ಹಳೆಯ ರಾಸಾಯನಿಕಯುಕ್ತ ಸಿಲಿಂಡರ್ ಮತ್ತಿತರ ಡಬ್ಬಿಗಳನ್ನು ವಿಲೇವಾರಿ ಮಾಡಲು ರಸ್ತೆ ಬದಿಯಲ್ಲೇ ಜಜ್ಜಲಾಗುತ್ತಿದೆ. ಕೆಲವು ತ್ಯಾಜ್ಯಗಳಿಗೆ ಬೆಂಕಿ ಹಚ್ಚುತ್ತಿರುವುದರಿಂದ ಇವುಗಳು ಹೊರ ಸೂಸುವ ಹೊಗೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಹರೀಶ್ ಜಿ.ಆಚಾರ್ಯ ಆರೋಪಿಸಿದ್ದಾರೆ.
ಗುಜರಿ ಅಂಗಡಿಗಳು ಪರವಾನಗಿ ಪಡೆದಿವೆಯೇ, ತೆರಿಗೆ ಪಾವತಿಸುತ್ತಿವೆಯೆ, ಮತ್ತು ಕಾನೂನು ಪಾಲಿಸುತ್ತಿವೆಯೇ ಎಂದು ಪರಿಶೀಲಿಸಬೇಕಾದ ನಗರಸಭೆ ಕಣ್ಣಿದ್ದು ಕುರುಡಾಗಿದ್ದು, ನಗರದ ಹೃದಯ ಭಾಗದಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಕಳೆದ ಅನೇಕ ವರ್ಷಗಳಿಂದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಗುಜರಿ ಅಂಗಡಿಗಳನ್ನು ನಗರದಿಂದ ಹೊರಭಾಗಕ್ಕೆ ಸ್ಥಳಾಂತರಿಸುವ ಕುರಿತು ನಿರ್ಣಯಗಳು ಆಗುತ್ತಿದೆಯೇ ಹೊರತು ಅನುಷ್ಠಾನಗೊಳ್ಳುತ್ತಿಲ್ಲವೆಂದು ಟೀಕಿಸಿದ್ದಾರೆ.
ಸುಂದರವಾದ ಮಡಿಕೇರಿ ನಗರ ಗುಜರಿ ಅಂಗಡಿಗಳ ನಗರವಾಗಿ ಮಾರ್ಪಡುವ ಮೊದಲು ಜಿಲ್ಲಾಡಳಿತ ಮತ್ತು ನಗರಸಭೆ ಎಚ್ಚೆತ್ತುಕೊಳ್ಳಬೇಕು. ಜನ ಹಾಗೂ ವಾಹನ ಸಂಚಾರ ವಿರಳ ಇರುವ ನಗರದ ಹೊರವಲಯಕ್ಕೆ ಗುಜರಿ ಅಂಗಡಿಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆಗೆ ತುರ್ತಾಗಿ ಚಾಲನೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ತಪ್ಪಿದಲ್ಲಿ ನಗರಸಭೆ ಮತ್ತು ಗುಜರಿ ಅಂಗಡಿಗಳ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.













