ಮಡಿಕೇರಿ ಜ.9 : ‘ಹುಲಿ’ಗಳು ಎಂದಿಗೂ ಮನುಷ್ಯನ ಮೇಲೆ ಎದುರು ಭಾಗದಿಂದ ನೇರವಾಗಿ ದಾಳಿ ಮಾಡುವುದಿಲ್ಲ, ಬದಲಾಗಿ ಹಿಂಬದಿಯಿಂದ ದಾಳಿ ಮಾಡುತ್ತವೆ. ಇದರಿಂದ ಪಾರಾಗಲು ಪಶ್ಚಿಮ ಬಂಗಾಳದ ಸುಂದರ ಬನ್ ವ್ಯಾಪ್ತಿಯಲ್ಲಿ ತಲೆಯ ಹಿಂಭಾಗಕ್ಕೆ ‘ಮುಖವಾಡ’ವನ್ನು ಅಳವಡಿಸಿಕೊಳ್ಳುವ ತಂತ್ರಗಾರಿಕೆಯನ್ನು ಅನುಸರಿಸಲಾಗುತ್ತಿದ್ದು, ಇದು ಫಲಪ್ರದವಾಗಿದೆ. ಈ ಮಾದರಿ ಕೊಡಗು ಜಿಲ್ಲೆಯಲ್ಲೂ ಉಪಯುಕ್ತವಾಗಬಹುದು ಎಂದು ಪರಿಸರ ಮತ್ತು ಆರೋಗ್ಯ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಕರ್ನಲ್ ಸಿ.ಪಿ. ಮುತ್ತಣ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಬ್ರಹ್ಮಪುತ್ರ ನದಿ ಸಮುದ್ರವನ್ನು ಸೇರುವ ಸುಂದರಬನ್‍ನಲ್ಲಿ ಹುಲಿ ದಾಳಿಗೆ ಸಾಕಷ್ಟು ಮಂದಿ ಸಾವನ್ನಪ್ಪಿದ್ದು, ಅಲ್ಲಿ ಇದೀಗ ತಲೆಯ ಹಿಂಭಾಗಕ್ಕೆ ಅಳವಡಿಸುವ ಮುಖವಾಡ ಬಳಸಲಾಗುತ್ತಿದೆ. ಇದರಿಂದ ಹುಲಿ ದಾಳಿ ಪ್ರಕರಣಗಳು ಇಳಿಮುಖವಾಗಿದೆ. ಈ ಮುಖವಾಡ ಧರಿಸಿದಲ್ಲಿ, ದಾಳಿ ಮಾಡುವ ಹುಲಿಗೆ ವ್ಯಕ್ತಿಯ ಹಿಂಭಾಗದ ಮುಖವಾಡ ವ್ಯಕ್ತಿಯ ಮುಖದಂತೆ ಗೋಚರಿಸುವುದರಿಂದ ದಾಳಿಗೆ ಮುಂದಾಗುವುದಿಲ್ಲವೆಂದು ಗಮನ ಸೆಳೆದರು.
::: ಪ್ರಸ್ತಾವನೆ :::
ಕೊಡಗು ಜಿಲ್ಲೆಯ ದಕ್ಷಿಣ ಭಾಗದಲ್ಲಿ ಹುಲಿ ಹಾವಳಿ ಹೆಚ್ಚಾಗುತ್ತಿದ್ದು, ಈಗಾಗಲೆ 5 ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ರಬ್ಬರ್‍ನಿಂದ ಸಿದ್ಧಪಡಿಸಿದ ಮುಖವಾಡವನ್ನು ಬಳಸುವುದಕ್ಕೆ ಕ್ರಮ ಕೈಗೊಳ್ಳುವಂತೆ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಿರುವುದಾಗಿ ಮುತ್ತಣ್ಣ ಹೇಳಿದರು.
ಜಿಲ್ಲೆಯಲ್ಲಿ ಹುಲಿ ದಾಳಿಯಿಂದ ಸಾವನ್ನಪ್ಪಿದ ಪ್ರಕರಣಗಳನ್ನು ಗಮನಿಸಿದಾಗ ಬೆಳಗ್ಗಿನ ಜಾವ ಬಹಿರ್ದೆಸೆಗೆಂದು ತೆರಳಿದವರ ಮೇಲೆ ಹುಲಿ ಹಿಂಬದಿಯಿಂದ ದಾಳಿ ನಡೆಸಿ ಕೊಂದು ಹಾಕಿರುವುದು ಸ್ಪಷ್ಟವಾಗುತ್ತಿದೆ. ಜಿಲ್ಲೆಯಲ್ಲಿ ಬಯಲು ಶೌಚ ಇಲ್ಲವೆಂದು ಹೇಳಿಕೊಳ್ಳಲಾಗುತ್ತದೆಯಾದರು, ಸಾಕಷ್ಟು ಕಡೆಗಳಲ್ಲಿ ಇಂದಿಗೂ ಮನೆಗಳಲ್ಲಿ ಶೌಚಾಲಯಗಳ ವ್ಯವಸ್ಥೆ ಇಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಶೌಚಾಲಯಗಳಿಲ್ಲದ ಮನೆಗಳಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಸರ್ಕಾರ ಸೂಕ್ತ ಯೋಜನೆ ರೂಪಿಸುವುದು ಅವಶ್ಯಕ. ಬಯಲು ಶೌಚದಿಂದಾಗಿಯೇ ಸಾಕಷ್ಟು ಮಂದಿ ಹುಲಿ ದಾಳಿಗೆ ಸಿಲುಕುತ್ತಿರುವುದು ಗಮನಾರ್ಹ ಎಂದರು.
::: ಜಾನುವಾರುಗಳನ್ನು ಹಾಗೇ ಬಿಡಿ :::
ಹುಲಿ ಆಹಾರಕ್ಕಾಗಿ ಜಾನುವಾರುಗಳನ್ನು ಕೊಂದು, ಒಂದಷ್ಟು ತಿಂದು ತೆರಳುತ್ತದೆ. ಮತ್ತೆ ಅದೇ ಸ್ಥಳಕ್ಕೆ ಉಳಿದ ಜಾನುವಾರಿನ ಭಾಗವನ್ನು ಭsಕ್ಷಿಸಲು ಬರುತ್ತದೆ. ಈ ಹಿನ್ನೆಲೆ ಸತ್ತ ಜಾನುವಾರುಗಳನ್ನು ಅಲ್ಲೆ ಬಿಟ್ಟು, ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದಲ್ಲಿ, ಮತ್ತೆ ಹುಲಿ ಆ ಸ್ಥಳಕ್ಕೆ ಬಂದಾಗ ಅದನ್ನು ಸೆರೆ ಹಿಡಿಯಲು ಅನುಕೂಲವಾಗುತ್ತದೆ. ಸತ್ತ ಜಾನುವಾರನ್ನು ಹೊತ್ತೊಯ್ದಲ್ಲಿ, ಹುಲಿ ಆಹಾರಕ್ಕಾಗಿ ಮತ್ತೆ ಬೇರೊಂದನ್ನು ಹುಡುಕಲು ಮುಂದಾಗುತ್ತದೆ ಎಂದು ತಿಳಿಸಿದರು.
ಹುಲಿ ಹಾವಳಿ ಹೆಚ್ಚಾಗಿರುವ ಪ್ರದೇಶದ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಸೂಕ್ತ ವಾಹನ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಬೇಕು. ಪಾಳು ಬಿದ್ದ ಗದ್ದೆಗಳಲ್ಲಿ ಕಾಡು ಹಂದಿ ಸೇರಿಕೊಳ್ಳುವುದರಿಂದ ಅದನ್ನು ಬೇಟೆಯಾಡಲು ಹುಲಿಗಳು ಬರುವ ಸಾಧ್ಯತೆ ಇದೆ. ಈ ಹಿನ್ನೆಲೆ ಗದ್ದೆಗಳನ್ನು, ಕಾಫಿ ತೋಟಗಳಲ್ಲಿ ಕಾಡು ಕೂಡಲು ಅವಕಾಶ ಮಾಡಿಕೊಡಬಾರದೆಂದು ಕರ್ನಲ್ ಮುತ್ತಣ್ಣ ಸಲಹೆ ನೀಡಿದರು.
ಹುಲಿ ದಾಳಿಯಿಂದ ಜಾನುವಾರುಗಳು ಮೃತಪಟ್ಟಲ್ಲಿ ನಮ್ಮ ಸಂಸ್ಥೆಯಿಂದ ವಲ್ರ್ಡ್ ವೈಲ್ಡ್ ಲೈಫ್ ಫಂಡ್‍ನಿಂದ ಲಭ್ಯ ಅನುದಾನದಲ್ಲಿ ತಕ್ಷಣ 5 ಸಾವಿರ ರೂ. ಪರಿಹಾರವನ್ನು ನೀಡಲಾಗುತ್ತಿದೆ. ಇಲ್ಲಿಯವರೆಗೆ 78 ಮಂದಿಗೆ ಪರಿಹಾವನ್ನು ಒದಗಿಸಲಾಗಿದೆ ಎಂದು ಎಂದು ಸಂಸ್ಥೆಯ ಪ್ರಮುಖರಾದ ರಾಯ್ ಬೋಪಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ಶಾನ್ ಬೋಪಯ್ಯ, ಪಾಂಡಂಡ ನರೇಶ್ ಹಾಗೂ ಕೇಟೋಳಿರ ಸನ್ನಿ ಸೋಮಣ್ಣ ಉಪಸ್ಥಿತರಿದ್ದರು.