ನಾಪೋಕ್ಲು ಜ.10 : ಕೊಡವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಹಿರಿಯರು ಹುಟ್ಟು ಹಾಕಿದ ಸ್ವಾತಂತ್ರ್ಯ ಪೂರ್ವ ಮಾತೃ ಸಂಸ್ಥೆಯಾದ ಅಖಿಲ ಕೊಡವ ಸಮಾಜದ ಆರ್ಥಿಕ ಪುನಶ್ಚೇತನಕ್ಕಾಗಿ ನೂತನ ಆರ್ಥಿಕ ಉಪ ಸಮಿತಿಯನ್ನು ಮಾಡಲಾಗಿದ್ದು, ಇದರ ಮೂಲಕ ಜನಾಂಗಬಾಂಧವರು ಕೈಜೋಡಿಸಬೇಕು ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಹಾಗೂ ಇಗ್ಗುತ್ತಪ್ಪ ದೇವಾಲಯದ ದೇವತಕ್ಕರಾದ ಪರದಂಡ ಸುಬ್ರಮಣಿ ಕಾವೇರಪ್ಪ ಹೇಳಿದರು.
ಸಮೀಪದ ಕಕ್ಕಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಅವರು ಮಾತನಾಡಿ ಕೊಡವ ಜನಾಂಗದ ಪದ್ಧತಿ, ಪರಂಪರೆ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಎಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಅಖಿಲ ಕೊಡವ ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ದೇವಾಲಯದ ಭಕ್ತ ಜನ ಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ, ನೂತನ ಆರ್ಥಿಕ ಸಮಿತಿಯ ಗೌರವ ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ, ಪದಾಧಿಕಾರಿಗಳಾದ ಕೀತಿಯಂಡ ವಿಜಯಕುಮಾರ್( ಶರಿ), ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಬೊಳ್ಳೆರ ವಿನಯ್ ಅಪ್ಪಯ್ಯ, ಮಾಚಿಮಂಡ ರವೀಂದ್ರ ,ಬಾಚಿರ ಜಗದೀಶ್ ಉಪಸ್ಥಿತರಿದ್ದರು.
ಈ ಸಂದರ್ಭ ಕಕ್ಕಬೆ ನಾಲಡಿ ಗ್ರಾಮದ ದಾನಿಯೊಬ್ಬರು ನೀಡಿದ ರೂ 10,000 ಚೆಕ್ ಅನ್ನು ಕಾಂಡ೦ಡ ಜೋಯಪ್ಪ ಅವರ ಮೂಲಕ ಅಖಿಲ ಕೊಡವ ಸಮಾಜಕ್ಕೆ ಹಸ್ತಾಂತರಿಸಲಾಯಿತು.
ಅರ್ಚಕ ಕುಶ ಭಟ್, ಪಾರುಪತ್ಯೆಗಾರ ಪರದಂಡ ಪ್ರಿನ್ಸ್ ತಮ್ಮಪ್ಪ ದೇಣಿಗೆಯಾಗಿ ತಲಾ 2001 ರೂ. ಸಮಿತಿ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.
ವರದಿ : ದುಗ್ಗಳ ಸದಾನಂದ.