ವಿರಾಜಪೇಟೆ ಜ.10 : ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಪ್ಲೈಯರ್ಸ್ ತಂಡದ ವತಿಯಿಂದ ಫೆ.23 ರಿಂದ ದ. ಕೊಡಗಿನ 3 ನಾಡು ವ್ಯಾಪ್ತಿಯ ತಂಡಗಳಿಗಾಗಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಹೈಪ್ಲೈಯರ್ಸ್ ತಂಡದ ಅಧ್ಯಕ್ಷ ಅಮ್ಮಣಿಚಂಡ ರಂಜಿ ಪೂಣಚ್ಚ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯ ಕೊಡವ ಕುಟುಂಬ ತಂಡಗಳಿಗಾಗಿ ಆಯೋಜಿಸಲಾಗಿರುವ ಈ ಹಾಕಿ ಪಂದ್ಯಾವಳಿಯು ವಿ. ಬಾಡಗ ಗ್ರಾಮದಲ್ಲಿ ಮೊದಲ ಬಾರಿಗೆ ಜರುಗುತ್ತಿದೆ. ವಿ.ಬಾಡಗದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಒಟ್ಟು 4 ದಿನಗಳ ಕಾಲ ನಡೆಯುವ ಈ ಕೌಟುಂಬಿಕ ಹಾಕಿ ಪಂದ್ಯಾವಳಿಗಾಗಿ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿದ್ದು, ಹೆಚ್ಚಿನ ತಂಡಗಳ ನೋಂದಣಿಯನ್ನು ನಿರೀಕ್ಷಿಸಲಾಗಿದೆ ಎಂದು ರಂಜಿ ಪೂಣಚ್ಚ ಮಾಹಿತಿ ನೀಡಿದರು.
ಹಾಕಿ ಕೂರ್ಗ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲು ಉದ್ದೇಶಿಸಿರುವ ಈ ಹಾಕಿ ಪಂದ್ಯಾವಳಿಯು ಹಾಕಿ ಕರ್ನಾಟಕ ಸಂಸ್ಥೆಯ ನಿಯಮಾವಳಿಗೆ ಬದ್ಧವಾಗಿ ನಡೆಯಲಿದೆ. ನಾಕ್‍ಔಟ್ ಮಾದರಿಯಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತದೆ. ಪಂದ್ಯಾವಳಿಯು ಸಂಪೂರ್ಣವಾಗಿ ದಾನಿಗಳ ನೆರವಿನಿಂದಲೇ ನಡೆಯುತ್ತದೆ. ಇದರ ಫೈನಲ್ ಪಂದ್ಯದ ಭಾಗವಾಗಿ ನಡೆಯುವ ಸಮಾರೋಪ ಸಮಾರಂಭದಂದು ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯ ಸಾರ್ವಜನಿಕ ಮಹಿಳೆಯರಿಗಾಗಿ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ 3 ನಾಡಿನ ಗ್ರಾಮ ವ್ಯಾಪ್ತಿಯ ತಂಡಗಳು ಮುಕ್ತವಾಗಿ ಭಾಗವಹಿಸಬಹುದಾಗಿದೆ ಎಂದು ಅವರು ಹೇಳಿದರು.
ಪಂದ್ಯಾವಳಿಯ ಕುರಿತ ಹೆಚ್ಚಿನ ಮಾಹಿತಿಗಾಗಿ ಕ್ರೀಡಾ ಸಮಿತಿ ಮುಖ್ಯಸ್ಥರಾದ ದಿಲನ್ ಬೋಪಣ್ಣ- 9448188378, ಪದಾಧಿಕಾರಿಗಳಾದ ಮಚ್ಚಾರಂಡ ಪ್ರವೀಣ್-9740196318 ಅಥವಾ ಕಂಜಿತಂಡ ಪೂವಣ್ಣ-7022356456 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ರಂಜಿ ಪೂಣಚ್ಚ ತಿಳಿಸಿದರು.
ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಸಲಹಾ ಸಮಿತಿ ಮುಖ್ಯಸ್ಥರಾದ ಮಳವಂಡ ಗಿರೀಶ್ ಮುದ್ದಯ್ಯ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಹಾಕಿ ಪಂದ್ಯಾವಳಿಯನ್ನು ನಿರಂತರವಾಗಿ ಆಯೋಜಿಸುವುದರಿಂದ ಹಾಕಿ ಕ್ರೀಡೆಗೆ ಮತ್ತಷ್ಟು ಉತ್ತೇಜನ ದೊರೆತಂತಾಗುತ್ತದೆ. ಗ್ರಾಮೀಣ ಮಟ್ಟದ ಕ್ರೀಡಾಕೂಟಗಳಿಂದ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ದೊರೆತಂತಾಗುತ್ತದೆ. ಈ ಹಿನ್ನಲೆಯಲ್ಲಿ ವಿ. ಬಾಡಗದ ಹೈಪ್ಲೈಯರ್ಸ್ ತಂಡದ ವತಿಯಿಂದ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಕೊಂಗಂಡ ಕಾಶಿ ಕಾರ್ಯಪ್ಪ, ಚೇಮಿರ ನಂದಾ ನಂಜಪ್ಪ, ಕೊಂಗಂಡ ಬೋಪಣ್ಣ ಮತ್ತು ಚೇಮಿರ ಪ್ರಭು ಉಪಸ್ಥಿತರಿದ್ದರು.