ಮಡಿಕೇರಿ ಜ.10 : ಪ್ರತಿಯೊಬ್ಬರು ಸೇವಾ ಮನೋಭಾವ, ಪ್ರಕೃತಿ ಪ್ರೇಮ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ರೋಟರಿಯ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಕರೆ ನೀಡಿದ್ದಾರೆ.
ಮಡಿಕೇರಿಯ ರೋಟರಿ ಹಾಲ್‍ನಲ್ಲಿ ಸಂಜೆ ನಡೆದ ರೋಟರಿಯ ವಿವಿಧ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೇವಾ ಮನೋಭಾವ ಮತ್ತು ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ರೋಟರಿ ಸಂಸ್ಥೆಗೆ ಹೊಸ ಸದಸ್ಯರ ಅವಶ್ಯಕತೆ ಇದೆ. ಯುವ ಸಮೂಹವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆ ಮಾಡಿಕೊಂಡು ಸದಸ್ಯತ್ವವನ್ನು ನೀಡಬೇಕು. ಮಹಿಳಾ ಸದಸ್ಯತ್ವವನ್ನು ಕೂಡ ಹೆಚ್ಚಿಸಬೇಕೆಂದು ತಿಳಿಸಿದರು.
ಮಡಿಕೇರಿ ರೋಟರಿ ಸಂಸ್ಥೆಯ ಅಧ್ಯಕ್ಷ ಕೆ.ಸಿ.ಕಾರ್ಯಪ್ಪ ಸ್ವಾಗತಿಸಿದರು. ಜಿಲ್ಲಾ ರೋಟರಿ ಅಸಿಸ್ಟೆಂಟ್ ಗವರ್ನರ್ ಕೆ.ಎಸ್.ರತನ್ ತಮ್ಮಯ್ಯ, ಜೋನಲ್ ಲೆಫ್ಟಿನೆಂಟ್ ಎನ್.ಡಿ.ಅಚ್ಚಯ್ಯ, ಕಾರ್ಯದರ್ಶಿ ಸುದೈ ನಾಣಯ್ಯ ಹಾಗೂ ಗೀತಾ ಗಿರೀಶ್ ಉಪಸ್ಥಿತರಿದ್ದರು.
ಫೆನ್ಸಿಂಗ್ ಕ್ರೀಡೆಯಲ್ಲಿ ಸಾಧನೆ ಮಾಡಿದ ವಿಜಯ್ ದೇವಯ್ಯ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
::: ರಕ್ತದಾನ ಶಿಬಿರ :::
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಗ್ಗೆ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಪ್ರಕಾಶ್ ಕಾರಂತ್, ವಿದ್ಯಾರ್ಥಿಗಳು ರಕ್ತದಾನಕ್ಕೆ ಹೆಚ್ಚು ಆಸಕ್ತಿ ತೋರುತ್ತಿರುವುದು ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭ ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ಪ್ರತಿಭಾವಂತ 50 ವಿದ್ಯಾರ್ಥಿಗಳಿಗೆ ತಲಾ ರೂ.1 ಸಾವಿರದಂತೆ ಪ್ರೋತ್ಸಾಹಧನ ವಿತರಿಸಲಾಯಿತು.













