ಮಡಿಕೇರಿ ಜ.12 : ಒಂಟಿ ಸಲಗವೊಂದು ತೋಟಗಳಿಗೆ ಲಗ್ಗೆ ಇಟ್ಟು ಕೃಷಿ ಫಸಲು ನಾಶ ಮಾಡಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಮಗ್ಗುಲ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತರಾದ ಪುಲಿಯಂಡ ಜಗದೀಶ್ ಹಾಗೂ ಕುಪ್ಪಚ್ಚಿರ ಸತೀಶ್ ಅವರುಗಳ ತೋಟಕ್ಕೆ ದಾಳಿ ಮಾಡಿದ ಕಾಡಾನೆ ಕಾಫಿ, ತೆಂಗು, ಅಡಿಕೆ, ಬಾಳೆ ಮತ್ತಿತರ ಗಿಡಗಳನ್ನು ನಾಶಪಡಿಸಿದೆ. ಲಕ್ಷಾಂತರ ರೂ. ನಷ್ಟ ಉಂಟಾಗಿದ್ದು, ಸೂಕ್ತ ಪರಿಹಾರ ನೀಡಬೇಕು ಮತ್ತು ಕಾಡಾನೆಗಳನ್ನು ಕಾಡಿಗಟ್ಟಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಆನೆ ಕಾರ್ಯಪಡೆ ಎ.ಸಿ.ಎಫ್ ಚಂಗಪ್ಪ, ಉಪವಲಯ ಅರಣ್ಯಾಧಿಕಾರಿ ಮೋನಿಶ, ಶ್ರೀಶೈಲ ಸೇರಿದಂತೆ ಆನೆ ಕಾರ್ಯಪಡೆ ತಂಡದ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮದಲ್ಲಿ ಭೀತಿಯ ವಾತಾವರಣವಿದ್ದು, ಕಾರ್ಮಿಕರು ತೋಟಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಕಾಫಿ ಕೊಯ್ಲಿನ ಸಂದರ್ಭವಾಗಿರುವುದರಿಂದ ಬೆಳೆಗಾರರು ನಷ್ಟದ ಆತಂಕ ಎದುರಿಸುತ್ತಿದ್ದಾರೆ.














