ಮಡಿಕೇರಿ ಜ.12 : ಕೊಡಗು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಮಿನಿ ತಾರಾಲಯ ನಿರ್ಮಾಣ ಸಂಬಂಧ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಹುಬ್ಬಳ್ಳಿಯ ಸಂಕಲ್ಪ ಗ್ರೂಪ್‍ನ ಕಟ್ಟಡ ವಾಸ್ತುಶಿಲ್ಪಿ ಮುಖ್ಯಸ್ಥ ಮಹೇಶ್ ಹಿರೇಮಠ ಹಾಗೂ ಸುಷ್ಕಮ ಸ್ಥಳ ವೀಕ್ಷಿಸಿದರು.
ನಗರದ ಹೊರ ವಲಯದ ಕೆ.ನಿಡುಗಣೆ ಗ್ರಾ.ಪಂ.ವ್ಯಾಪ್ತಿಯಲ್ಲಿರುವ ಜಾಗವನ್ನು ಪರಿಶೀಲಿಸಿದರು. ಕೆ.ನಿಡುಗಣೆ ಗ್ರಾ.ಪಂ. ವ್ಯಾಪ್ತಿಯಲ್ಲಿ 3 ಎಕರೆ ಜಾಗವಿದ್ದು, ಅದರ ಪಕ್ಕದಲ್ಲಿರುವ ಸರ್ಕಾರಿ ಜಾಗದ ಗಡಿ ಗುರುತಿಸಿ ಡಿಜಿಟಲ್ ಸರ್ವೇ ಮಾಡುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಜಿಲ್ಲಾ ಕೇಂದ್ರದಲ್ಲಿ ಕೊಡಗು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಮಿನಿ ತಾರಾಲಯ ನಿರ್ಮಾಣ ಮಾಡಬೇಕಿದೆ ಆ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮವಹಿಸಬೇಕು ಎಂದರು.
ಹುಬ್ಬಳ್ಳಿಯ ಸಂಕಲ್ಪ ಗ್ರೂಪ್‍ನ ಕಟ್ಟಡ ವಾಸ್ತುಶಿಲ್ಪಿ ಮುಖ್ಯಸ್ಥ ಮಹೇಶ್ ಹಿರೇಮಠ ಮಾತನಾಡಿ, ಕೆ.ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಜಾಗವನ್ನು ಸರ್ವೇ ಮಾಡಿಸಿ ಗಡಿ ಗುರುತಿಸಬೇಕು. ನಂತರ ಮತ್ತೊಂದು ಸಾರಿ ವೀಕ್ಷಣೆ ಮಾಡಿ ಅಂತಿಮಗೊಳಿಸಲಾಗುವುದು ಎಂದರು.
ನೋಡಲ್ ಅಧಿಕಾರಿ ಟಿ.ಜಿ. ಪ್ರೇಮಕುಮಾರ್ ಅವರು ಮಾತನಾಡಿ 5 ಕೋಟಿ ರೂ. ವೆಚ್ಚದಲ್ಲಿ ಮಿನಿ ತಾರಾಲಯ ಮತ್ತು 4 ಕೋಟಿ ರೂ. ವೆಚ್ಚದಲ್ಲಿ ಕೊಡಗು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ಮಾಣ ಮಾಡಬೇಕಿದೆ. ಆ ನಿಟ್ಟಿನಲ್ಲಿ ತ್ವರಿತವಾಗಿ ಕಾರ್ಯಗಳು ಆಗಬೇಕು ಎಂದು ಕೋರಿದರು.
ಬಳಿಕ ನಗರದ ಸುದರ್ಶನ ಅತಿಥಿ ಗೃಹದಲ್ಲಿ ಕೊಡಗು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಮಿನಿ ತಾರಾಲಯ ನಿರ್ಮಾಣ ಸಂಬಂಧ ರೂಪುರೇಷೆ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಯಿತು.
ಹುಬ್ಬಳ್ಳಿಯ ಸಂಕಲ್ಪ ಗ್ರೂಪ್‍ನ ಕಟ್ಟಡ ವಾಸ್ತುಶಿಲ್ಪಿ ಮುಖ್ಯಸ್ಥ ಮಹೇಶ್ ಹಿರೇಮಠ ಅವರು ಕೊಡಗು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಪ್ರಾರಂಭವಾಗುವುದರಿಂದ ವಿದ್ಯಾರ್ಥಿಗಳಿಗೆ, ವಿಜ್ಞಾನಿಗಳಿಗೆ, ಶಿಕ್ಷಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಭೂ ದಾಖಲೆಗಳ ಉಪ ನಿರ್ದೇಶಕ ಪಿ.ಶ್ರೀನಿವಾಸ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ರಂಗಧಾಮಯ್ಯ, ಕುಶಾಲನಗರ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಶೀನಪ್ಪ, ತಹಶೀಲ್ದಾರ್ ಪಿ.ಎಸ್.ಮಹೇಶ್, ಡಿಜಿಟಲ್ ಸರ್ವೇ ವಿಭಾಗದ ಕೆ.ಸಿ.ಬಿನೇಶ್, ಕಂದಾಯ ನಿರೀಕ್ಷಕರಾದ ರುದ್ರೇಶ್ ಇತರರು ಹಾಜರಿದ್ದರು.