ಮಡಿಕೇರಿ ಜ.13 : ಮಂಗಳೂರು ವಿಶ್ವ ವಿದ್ಯಾನಿಲಯ, ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರ, ಸಮಾಜಕಾರ್ಯ ಅಧ್ಯಯನ ವಿಭಾಗ ಹಾಗೂ ಪ್ರಥಮ ವರ್ಷದ ಸಮಾಜ ಕಾರ್ಯ ಪ್ರಶಿಕ್ಷಣಾರ್ಥಿ ಗಳಿಂದ ನೇರುಗಳಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ‘ಆರೋಗ್ಯ ಮತ್ತು ನೈರ್ಮಲ್ಯ’ ಕುರಿತು ಪ್ರೌಢಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದ ನೇರುಗಳಲೆ ಗ್ರಾ.ಪಂ ಅಧ್ಯಕ್ಷರಾದ ಕೆ.ಜಿ .ಪುಷ್ಪ ಇಂತಹ ಜಾಗೃತಿ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿ ಪಡೆದುಕೊಳ್ಳುವುದರ ಜೊತೆಗೆ ಎಚ್ಚರ ವಹಿಸಿಕೊಳ್ಳಲಿದ್ದಾರೆ ಎಂದರು.
ಸಮಾಜ ಕಾರ್ಯ ವಿಭಾಗದ ಉಪನ್ಯಾಸಕ ಲೋಕೇಶ ಭರಣಿ ಪ್ರಾಸ್ತಾವಿಕ ಮಾತನಾಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ಶುಶ್ರೂಷಕಿ ಎಂ.ಜಿ.ದಿವ್ಯ, ಅಬ್ಬೂರು ಕಟ್ಟೆಯ ಸಮುದಾಯ ಆರೋಗ್ಯ ಅಧಿಕಾರಿ ಡಿ.ನಂದಿನಿ ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೀಣ್ ಕುಮಾರ್ ನೇರುಗಳಲೆ ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ನೈರ್ಮಲ್ಯದ ಮಹತ್ವದ ಕುರಿತು ಮನದಟ್ಟು ಮಾಡಿಸಿದರು. ವೈಯಕ್ತಿಕ ಆರೋಗ್ಯ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಸಾಂಕ್ರಾಮಿಕ ರೋಗಗಳಿಂದ ಹೇಗೆ ರಕ್ಷಣೆ ಹೊಂದಬೇಕು ಎಂದು ವಿವರಿಸಿದರು.
ನೇರುಗಳಲೆ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಇಬ್ರಾಹಿಂ ಮಾತನಾಡಿ, ಇಂದಿನಿಂದಲೇ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವನ್ನು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು’ ಎಂದು ಕರೆ ನೀಡಿದರು.
ನೇರುಗಳಲೆ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಕೆ.ಉಮೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕ ಕೆ.ಜೆ.ರಾಬಿನ್ ಮತ್ತು ಎಸ್.ಎಂ.ನಟರಾಜ್, ಸ್ಥಳೀಯ ಗ್ರಾ.ಪಂ ಸದಸ್ಯರಾದ ಪ್ರಕಾಶ್ ಹಾಗೂ ನೇರುಗಳಲೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರು ಹಾಜರಿದ್ದರು.
ಸಮಾಜಕಾರ್ಯ ಪ್ರಶಿಕ್ಷಣಾರ್ಥಿ ನಿಶ್ಚಿತ ರೋಡ್ರಿಗಸ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ಸ್ವಾಗತ ಮತ್ತು ವಂದನಾರ್ಪಣೆಯನ್ನು ನಾಗಲಕ್ಷ್ಮಿ ನೆರವೇರಿಸಿದರು.