ಮಡಿಕೇರಿ ಜ.13 : ಅರಣ್ಯ ಇಲಾಖೆಯಿಂದ ಹಿಂಪಡೆಯುವ 2 ಲಕ್ಷ ಏಕರೆ ಜಾಗವನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿ ದಲಿತರು, ಆದಿವಾಸಿಗಳು ಹಾಗೂ ಕೃಷಿ ಕಾರ್ಮಿಕರಿಗೆ ಹಂಚಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ದಲಿತ ಆದಿವಾಸಿ ಕೃಷಿ ಕಾರ್ಮಿಕರ ಸಂಘದ ಕೊಡಗು ಜಿಲ್ಲಾ ಘಟಕ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ಕಾರ್ಯಪ್ಪ ವೃತ್ತದಿಂದ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಮಾವೇಶಗೊಂಡು ಬೇಡಿಕೆಯ ಈಡೇರಿಗಾಗಿ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ದಲಿತರು, ಆದಿವಾಸಿಗಳು ತಲತಲಾಂತರದಿಂದ ಸ್ವಂತ ಭೂಮಿ ಇಲ್ಲದೆ, ಸ್ವಂತ ಸೂರಿಲ್ಲದೆ ಉಳ್ಳವರ ಲೈನ್ ಮನೆಗಳಲ್ಲಿ, ಅರಣ್ಯದಲ್ಲಿ ಟಾರ್ಪಲ್ ಗುಡಿಸಲು ನಿರ್ಮಿಸಿಕೊಂಡು ನರಕಯಾತೆನಲ್ಲಿ ಬದುಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
2 ಲಕ್ಷ ಏಕರೆ ಭೂಮಿಯನ್ನು ಅರಣ್ಯದಿಂದ ಹಿಂಪಡೆದು ಕಂದಾಯ ಭೂಮಿಯಾಗಿ ಪರಿವರ್ತಿಸಿ ದಲಿತರಿಗೆ, ಆದಿವಾಸಿ ಕೃಷಿ ಕಾರ್ಮಿಕ ನಿರಾಶ್ರಿತರಿಗೆ ತಲಾ 3 ಏಕರೆಯಂತೆ ಹಂಚಬೇಕು, ಎಲ್ಲಾ ಲೈನ್ ಮನೆ ನಿವಾಸಿಗಳಿಗೆÉ ಕೃಷಿ ಭೂಮಿ ಮತ್ತು ಸೂಕ್ತ ನಿವೇಶನ ನೀಡಬೇಕು, ಉಳ್ಳವರಿಗೆ ಭೂ ಗುತ್ತಿಗೆ ಯೋಜನೆಯನ್ನು ರದ್ದುಗೊಳಿಸಿ ಕೃಷಿ ಕಾರ್ಮಿಕರಿಗೆ ಹಂಚಬೇಕು, ಮಲೆನಾಡಿಗೆ ಭೂಮಿತಿ ಕಾಯಿದೆ ಜಾರಿಯಾಗಬೇಕು, ನಾಗರಹೊಳೆ ಅರಣ್ಯದ ಮಧ್ಯೆ ಇರುವ ಗೋಣಿಗದ್ದೆ, ಕೊಡಂಗೆ ಹಾಡಿಯ ಗಿರಿಜರನ್ನು ಅದೇ ಅರಣ್ಯ ಅಂಚಿಗೆ ಪುನರ್ ವಸತಿಗೊಳಿಸಿ ಸರ್ಕಾರ ಎಲ್ಲಾ ಸೌಲಭ್ಯಗಳನ್ನು ನೀಡಬೇಕು, ಬ್ಯಾಡಗೊಟ್ಟ ಬಸವನಹಳ್ಳಿಯಲ್ಲಿ ಪುನರ್ವಸತಿಗೊಂಡಿರುವ 528 ಕುಟುಂಬ ಆದಿವಾಸಿಗಳಿಗೆ ತಲಾ 3 ಏಕರೆ ಜಾಗ ನೀಡಬೇಕು ಮತ್ತು ಉದ್ಯೋಗಗಳನ್ನು ನೀಡಬೇಕು, ಹೊರ ಜಿಲ್ಲೆಯ ಮತ್ತು ಹೊರ ರಾಜ್ಯಗಳಿಂದ ಲಕ್ಷಾಂತರ ಕಾರ್ಮಿಕರು ಬರುವುದನ್ನು ತಡೆಯಬೇಕು, ಜಿಲ್ಲೆಯಲ್ಲಿ ವಿಲೇವಾರಿಯಾಗದೆ ಬಾಕಿ ಇರುವ ಅರಣ್ಯ ಹಕ್ಕು ಕಾಯಿದೆ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಿ ಹಕ್ಕು ಪತ್ರಗಳನ್ನು ನೀಡಬೇಕೆಂದು ಒತ್ತಾಯಿಸಿದರು.
ಸಿಪಿಐ(ಎಂ.ಎಲ್)ಆರ್‍ಐ ನ ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರ್, ಜಿಲ್ಲಾ ಕಾರ್ಯದರ್ಶಿ ಜೆ.ಎಂ.ಸುರೇಶ್, ಜಿಲ್ಲಾ ಮುಖಂಡರಾದ ವೈ.ಎಂ.ಸುರೇಶ್, ಅನಿತ, ಜಿಲ್ಲಾ ಸಮಿತಿ ಸದಸ್ಯರಾದ ವೈ.ಪಿ.ಮೋಹನ, ಜಿ.ಕೆ.ರಘು, ಹೆಚ್.ಜೆ.ಪ್ರಕಾಶ, ಕೆ.ಎ.ಬಾಬು, ಇಂದಿರಾ, ಸಾವಿತ್ರಿ, ರಮೇಶ್, ಸರ್ಲಿ ಮಧು ಮತ್ತಿತರ ಪದಾಧಿಕಾರಿಗಳು ಹಾಗೂ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.