ವಿರಾಜಪೇಟೆ ಜ.14 : ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡಲು ಯತ್ನಿಸಿದ ಇಬ್ಬರನ್ನು ಪತ್ತೆ ಹಚ್ಚಿರುವ ಸ್ಥಳೀಯ ಪೊಲೀಸರು, ಒಂದು ಕರು ಸೇರಿದಂತೆ 7 ಜಾನುವಾರುಗಳನ್ನು ರಕ್ಷಿಸಿರುವ ಘಟನೆ ಪೆರುಂಬಾಡಿ ಗ್ರಾಮದಲ್ಲಿ ನಡೆದಿದೆ.
ಕೇರಳದ ಕಣ್ಣೂರು ಜಿಲ್ಲೆಯ ಕೈಯರಾಳಂ ಗ್ರಾಮದ ನಿವಾಸಿ ಎನ್.ಪಿ.ಸೈನುದ್ದೀನ್(38) ಮತ್ತು ಪಿರಿಯಾಪಟ್ಟಣ ತಾಲ್ಲೂಕಿನ ಕಿತ್ತೂರು ಗ್ರಾಮದ ಪರ್ವಿಜ್ ಬಾಷ (35) ಬಂಧಿತ ವ್ಯಕ್ತಿಗಳು. ಪಿರಿಯಾಪಟ್ಟಣದಿಂದ ಲಾರಿಯೊಂದರಲ್ಲಿ ಅಕ್ರಮವಾಗಿ ಗೋವುಗಳನ್ನು ತುಂಬಿಕೊಂಡು ಗೋಣಿಕೊಪ್ಪಲು, ಪೆರುಂಬಾಡಿ ಮಾರ್ಗವಾಗಿ ಕೇರಳ ರಾಜ್ಯಕ್ಕೆ ಆರೋಪಿಗಳು ತೆರಳುತ್ತಿದ್ದರು.
ಪೆರುಂಬಾಡಿ ಪೊಲೀಸು ತಪಾಸಣೆ ಕೇಂದ್ರದಲ್ಲಿ ಲಾರಿ ಪರಿಶೀಲನೆ ಮಾಡಿದಾಗ ಗೋವುಗಳ ಅಕ್ರಮ ಸಾಗಾಟ ಪತ್ತೆಯಾಗಿತ್ತು. ಬಂಧಿತ ಆರೋಪಿಗಳ ವಿರುದ್ಧ ವಿರಾಜಪೇಟೆ ನಗರ ಠಾಣಾ ಪೊಲೀಸರು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿರಾಜಪೇಟೆ ನಗರ ಪೊಲೀಸ್ ಠಾಣಾಧಿಕಾರಿ ಶ್ರೀಧರ್ ಮತ್ತು ಎಎಸ್‌ಐನಾಣಿಯಪ್ಪ ಹಾಗೂ ಸಿಬ್ಬಂದಿ ಸತೀಶ್, ಸುಬ್ರಮಣಿ, ಮಲ್ಲಿಕಾರ್ಜುನ ಮತ್ತು ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.