ವಿರಾಜಪೇಟೆ ಜ.14 : ಸಮಾಜವು ವೈದ್ಯರ ಸೇವೆಯು ದೇವರ ಸೇವೆ ಎಂದು ನಂಬಿಕೊಂಡು ಸಾಗುತ್ತಿದೆ. ಸಮಾಜಕ್ಕೆ ಉತ್ತಮ ಸೇವೆ ಕಲ್ಪಿಸುವುದು ಸಾಮಾನ್ಯ ವೈದ್ಯನ ಬಹುಮುಖ್ಯ ಕರ್ತವ್ಯವಾಗಬೇಕು ಎಂದು ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ. ಎಂ.ಕೆ.ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ವಿರಾಜಪೇಟೆಯ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಅಂತಿಮ ವರ್ಷ ಪೂರೈಸಿದ ವಿದ್ಯಾರ್ಥಿಗಳ ಪದವಿ ಪ್ರದಾನ ಕಾರ್ಯಕ್ರಮದಲ್ಲಿ
ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಪತ್ರ ವಿತರಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಪದವಿ ಪಡೆದುಕೊಳ್ಳುವ ಸುದಿನವು ಸಾಮಾಜಿಕ ಜೀವನದ ಮೈಲಿಗಲ್ಲು. ಈ ನಿಟ್ಟಿನಲ್ಲಿ ಕೊಡಗು ದಂತ ಮಹಾವಿದ್ಯಾಲಯವು ಗುರುಕುಲದ ಮಾದರಿಯಲ್ಲಿ ಮೌಲ್ಯಯುತವಾದ ಶಿಕ್ಷಣವನ್ನು ಒದಗಿಸಿದೆ. ವೈದ್ಯನಾದವನು ರೋಗಿಗಳನ್ನು ಹಸನ್ಮುಖಿಯಾಗಿ ನಗುಮುಖದೊಂದಿಗೆ ಸ್ವಾಗತಿಸಬೇಕು ಹಾಗೂ ರೋಗಿಯ ಚಿಕಿತ್ಸಾವಿಧಿಗಳನ್ನು ಅನುಸರಿಸಬೇಕು. ಬೃಹತ್ ಸಮಾಜವು ನಮಗೆ ಹಲವು ಉತ್ತಮ ವ್ಯಾವಹಾರಿಕ, ಆರೋಗ್ಯಕರ, ಹಿತವಾದ ಸ್ವಸ್ಥ ಪ್ರಕೃತಿಕ ಜಗತ್ತನ್ನು ಕಲ್ಪಿಸಿದೆ. ಇಂತಹ ಸಮಾಜಕ್ಕೆ ದ್ರೋಹಬಗೆಯದೆ ಉತ್ತಮ ಸೇವೆಯನ್ನು ನೀಡುವುದರೊಂದಿಗೆ ತಮ್ಮ ಗೌರವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವಾಗಬೇಕು ಎಂದರು.
ಗಳಿಕೆ ಇಂದಿನ ಜೀವನಶೈಲಿಗೆ ಬಹುಮುಖ್ಯ. ಆದರೆ ಹಣ ಮಾಡುವ ಉದ್ದೇಶ ಹೊರತುಪಡಿಸಿ, ಸೇವಾ ಮನೋಭಾವವನ್ನು ಬೆಳೆಸಿಕೊಂಡು ಸಮಾಜದೊಂದಿಗೆ ಬೆರೆಯಬೇಕು. ಸಮಾಜ, ವೃತ್ತಿ ಜೀವನ, ಮತ್ತು ಸಂಸಾರದಲ್ಲಿ ಮೌಲ್ಯಯುತ ಬದುಕು ಕಂಡುಕೊಳ್ಳುವ ಅನಿವಾರ್ಯತೆ ಬದುಕಿಗಿದೆ. ಉತ್ತಮ ಪರಿಸರದಲ್ಲಿ ಐದು ವರ್ಷಗಳ ಕಾಲ ಕಲಿತ ವಿದ್ಯೆಗೆ ಚ್ಯುತಿ ಬಾರದ ರೀತಿಯಲ್ಲಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಎಂದು ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ದಂತ ವೈದ್ಯಕೀಯ ಮಾಹಾವಿದ್ಯಾಲಯದ ಡೀನ್ ಡಾ.ಸುನೀಲ್ ಮುದ್ದಯ್ಯ, ಹೊಂದಾಣಿಕೆ ಮತ್ತು ಅಳವಡಿಕೆ ಜೀವನದ ಪರಿಪಾಠವಾಗಬೇಕು. ಸಮಾಜದೊಂದಿಗೆ ಅಥಾವ ವೈದ್ಯರ ಬಳಿ ಬರುವ ವ್ಯಕ್ತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮುಂದುವರೆಯುವುದು ಪ್ರಸ್ತುತ ಕಾಲಘಟ್ಟಕ್ಕೆ ಅಗತ್ಯವಾಗಿದೆ. ವಿದ್ಯಾರ್ಥಿ ಜೀವನವು ಪದವಿ ಪಡೆದ ನಂತರ ಕೊನೆಯಾಗಲಿದೆ. ಆದರೆ ಜೀವನದಲ್ಲಿ ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಮುಂದಾಗುವುದು ಮುಖ್ಯ. ರೋಗಿಯ ರೋಗ ಬಗ್ಗೆ ಅಧ್ಯಯನ ನಡೆಸಿ ರೋಗದ ಗುಣಲಕ್ಷಣಗಳನ್ನು ಕಲಿಯುವುದರೊಂದಿಗೆ ಚಿಕಿತ್ಸೆಗೆ ಅಣಿಯಾಗಬೇಕು. ಭವಿಷ್ಯದಲ್ಲಿ ವೈದ್ಯರುಗಳಾಗಿ ಸಮಾಜಕ್ಕೆ ಸೇವೆ ಸಲ್ಲಿಸಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ 50 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಪತ್ರ ಮತ್ತು 35 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿಗಳನ್ನು ವಿತರಿಸಲಾಯಿತು.
ಡಾ.ಸುನೀಲ್ ಮುದ್ದಯ್ಯ ಅವರು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟ ಚಿನ್ನದ ಪದಕವನ್ನು ಡಾ. ಆಲೆಮೆಂಗಡ ಶಾನ್‍ಶವಿ ಪೊನ್ನಮ್ಮ ಅವರು ಪಡೆದುಕೊಂಡರು.
ಕಂಜಿತಂಡ ಎಂ.ಕುಶಾಲಪ್ಪ ಚಿನ್ನದ ಪದಕವನ್ನು ಡಾ. ಜೆ.ಜಯಲಕ್ಷ್ಮೀ ತನ್ನದಾಗಿಸಿಕೊಂಡರು. ಎಲ್ಲಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗಾಗಿ ಮೀಸಲಿಟ್ಟ ಕೆ.ಪೊನ್ನಮ್ಮ ಕುಶಾಲಪ್ಪ ಚಿನ್ನದ ಪದಕವನ್ನು ಡಾ. ಕಂಜಿತಂಡ ಕುಶಾಲಪ್ಪ ಮುದ್ದಯ್ಯ ಅವರು ಪಡೆದುಕೊಂಡರು. ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ. ಎಂ.ಕೆ. ರಮೇಶ್ ಸಾಧನೆಗೈದ ವಿದ್ಯಾರ್ಥಿಗಳಿಗೆ ಪದಕಗಳನ್ನು ವಿತರಿಸಿದರು.
ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ಉಪ ಪ್ರಾಂಶುಪಾಲ ಡಾ.ಜಿತೇಶ್ ಜೈನ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಭೋದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ದೆಶೀಯ ಸಂಸ್ಕøತಿಯನ್ನು ಬಿಂಬಿಸುವ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಕೊಡಗು ದಂತ ವೈದ್ಯಕೀಯ ಮಾಹಾವಿದ್ಯಾಲಯದ ಉಪನ್ಯಾಸಕ ಡಾ.ಶಶಿಧರ್ ಮತ್ತು ಡಾ. ಬಿ.ಎಂ.ಶಾಂತಲ ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿರಿದ್ದರು.
ಕೊಡಗು ದಂತ ವೈದ್ಯಕೀಯ ಮಾಹಾವಿದ್ಯಾಲಯದ ಉಪನ್ಯಾಸಕ ಡಾ.ಶಶೀಧರ್ ಸ್ವಾಗತಿಸಿದರು, ವಿದ್ಯಾರ್ಥಿಗಳಾದ ಪ್ರತೀಕ್ಷಾ ಮತ್ತು ಕುಂಕುಂ ನಾಣಯ್ಯ ಕಾರ್ಯಕ್ರಮದ ನಿರೂಪಣೆ ಮಾಡಿ, ಸರ್ವರನ್ನು ವಂದಿಸಿದರು.
ಕಾರ್ಯಕ್ರಮದಲ್ಲಿ ಕೊಡಗು ದಂತ ವೈದ್ಯಕೀಯ ಮಾಹಾವಿದ್ಯಾಲಯದ ಪ್ರಾಂಶುಪಾಲ ಕೆ.ಸಿ.ಪೊನ್ನಪ್ಪ, ಸಂಸ್ಥಾಪಕ ಮತ್ತು ಪ್ರಮುಖರಾದ ಕೆ.ಕೆ.ಅಯ್ಯಪ್ಪ, ಕಂಜಿತಂಡ ಕುಟುಂಬದ ಸದಸ್ಯರು ಸೇರಿದಂತೆ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ