ಮಡಿಕೇರಿ ಜ.14 : ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ 33ನೇ ಮಕರ ಸಂಕ್ರಾಂತಿ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು.
ಮುಂಜಾನೆಯಿಂದಲೇ ನಿರ್ಮಾಲ್ಯ ವಿಸರ್ಜನೆ, ಉಷಾ ಪೂಜೆ, ಶ್ರೀ ಮುತ್ತಪ್ಪ ಹಾಗೂ ಶ್ರೀ ಸುಬ್ರಹ್ಮಣ್ಯ ದೇವರ ಪೂಜೆ ಹಾಗೂ ಪಂಚಾಮೃತಾಭಿಷೇಕ, ತುಪ್ಪಾಭಿಷೇಕ, ಕ್ಷೀರಾಭಿಷೇಕ, ಭಸ್ಮಾಭಿಷೇಕ, ಎಳನೀರಭಿಷೇಕ, ಪುಷ್ಪಾರ್ಚನೆ ಸೇವೆ ನಡೆಯಿತು.
ನಂತರ ಶ್ರಿ ಕುಟ್ಟಿಚಾತನ್ ದೇವರ ವೆಳ್ಳಾಟಂ, ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ, ಶ್ರೀ ಗುಳಿಗ ದೇವರ ವೆಳ್ಳಾಟಂ ಬಳಿಕ, ಶ್ರೀ ಅಯ್ಯಪ್ಪ ದೇವರ ಅಲಂಕಾರ ಪೂಜೆ ನಡೆಯಿತು. ನಂತರ ಶ್ರೀ ಅಯ್ಯಪ್ಪ ದೇವರ ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆ ಜರುಗಿತು.
ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ ನೆರವೇರಿತು.
ಸಂಜೆ 6 ರಿಂದ ಭಜನೆ ಕಾರ್ಯಕ್ರಮ ಜರುಗಲಿದ್ದು, 7 ಗಂಟೆಗೆ ಅಲಂಕಾರ ಪೂಜೆ, ಪಡಿಪೂಜೆ, ರಾತ್ರಿ 8 ಗಂಟೆಗೆ ದೀಪಾರಾಧನೆ ಹಾಗೂ ಪ್ರಸಾದ ವಿತರಣೆಯಾಗಲಿದೆ.
ಜ.13 ರಂದು ಗಣಪತಿ ಹೋಮ, ಪಂಚಾಮೃತ ಅಭಿಷೇಕ ಇತ್ಯಾದಿ ಸೇವೆಗಳು ನಡೆಯಿತು.
ನಗರದ ವಿವಿಧೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.