ಕುಶಾಲನಗರ ಜ.14 : ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಫೆ.3 ರಂದು ಕುಶಾಲನಗರದಲ್ಲಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಹೇಳಿದರು.
ಕುಶಾಲನಗರದ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕುಶಾಲನಗರದ ರೈತ ಸಹಕಾರ ಭವನದಲ್ಲಿ ತಾಲ್ಲೂಕು ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಮೈಸೂರು ರಸ್ತೆಯ ಕಾವೇರಿ ನದಿ ದಂಡೆಯಿಂದ ಸಮ್ಮೇಳನದ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದ ಅವರು ತಾಲ್ಲೂಕು ಸಮ್ಮೇಳನವನ್ನು ಹಬ್ಬದೋಪಾದಿಯಲ್ಲಿ ಆಚರಿಸುವಂತಾಗಬೇಕೆಂದು ಕೋರಿದರು.
ತಾಲ್ಲೂಕು ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ, ಸಮ್ಮೇಳನದಲ್ಲಿ ಕುಶಾಲನಗರ ತಾಲ್ಲೂಕಿನ ಎಲ್ಲಾ ಗ್ರಾ.ಪಂ ಗಳ ವ್ಯಾಪ್ತಿಯಿಂದ ಸಾರ್ವಜನಿಕರು ಹೆಚ್ವಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ತಾಲ್ಲೂಕಿನ ಉತ್ಸವವಾಗಿಸಲು ಸಹಕಾರ ನೀಡಬೇಕೆಂದು ಪಂಚಾಯಿತಿಗಳ ಚುನಾಯಿತರು ಹಾಗೂ ಅಧಿಕಾರಿಗಳಲ್ಲಿ ಕೋರಿಕೊಂಡರು.
ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ ಮಾತನಾಡಿ, ಕುಶಾಲನಗರ ಆಡಳಿತಾತ್ಮಕವಾಗಿ ಉದ್ಘಾಟನೆಯಾಗಿದೆ. ಆದರೆ ತಾಲ್ಲೂಕು ಸಮ್ಮೇಳನದ ವೈಭವದ ಮೆರವಣಿಗೆಯೊಂದಿಗೆ ಸಾಂಸ್ಕೃತಿಕವಾಗಿ ಉದ್ಘಾಟಿಸಲು ಇಡೀ ತಾಲ್ಲೂಕಿನ ಮಹಾಜನತೆ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.
ಜಿಲ್ಲಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಎಂ.ಇ.ಮೊಹಿದ್ದೀನ್, ನಿರ್ದೇಶಕರಾದ ಫ್ಯಾನ್ಸಿ ಮುತ್ತಣ್ಣ, ಮೆ.ನಾ.ವೆಂಕಟನಾಯಕ್, ಮಂಜುನಾಥ್, ಕೆ.ಎನ್.ದೇವರಾಜು, ತಾಲ್ಲೂಕು ಸಮಿತಿ ಮಾಜಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ತಾಲ್ಲೂಕು ಕಾರ್ಯದರ್ಶಿ ಎಸ್.ನಾಗರಾಜು, ಕೋಶಾಧಿಕಾರಿ ಕೆ.ವಿ.ಉಮೇಶ್, ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯದರ್ಶಿ ಪ್ರೊ.ಹೆಚ್.ಬಿ. ಲಿಂಗಮೂರ್ತಿ ಹಾಜರಿದ್ದರು.