ಸುಂಟಿಕೊಪ್ಪ, ಜ.16 : ಸುಂಟಿಕೊಪ್ಪದ ತಮಿಳು ಸಂಘ ಹಾಗೂ ಪೊಂಗಲ್ ಹಾಗೂ ಸಂಕ್ರಾಂತಿ ಆಚರಣಾ ಸಮಿತಿಯ ವತಿಯಿಂದ 23ನೇ ವರ್ಷದ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮಾದಾಪುರದ ಮಧುರಮ್ಮ ಬಡಾವಣೆಯ ಶ್ರೀವೃಕ್ಷೋದ್ಭವ ಮಹಾಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ನಂತರ ಶ್ರೀ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ಅಲಂಕೃತ ಭವ್ಯಮಂಟಪದಲ್ಲಿ ಕುಳ್ಳಿರಿಸಿ, ಕಳಶವನ್ನು ಹೊತ್ತ ಮಹಿಳೆಯರು ಹಾಗೂ ಪುರುಷರು ಮತ್ತು ನಾದಸ್ವರದೊಂದಿಗೆ ನಗರ ಪ್ರದಕ್ಷಿಣೆ ನಡೆಯಿತು.
ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ತೆರಳಿದ್ದರು. ಪಟಾಕಿ ಸಿಡಿಸಿ ಪೊಂಗಲ್ ಆಚರಣೆಗೆ ಮೆರಗು ನೀಡಿದ್ದರು.
ದೇವಸ್ಥಾನ ಟ್ರಸ್ಟಿ ಕಾರ್ಯದರ್ಶಿ ಎ.ಲೋಕೇಶ್ ಕುಮಾರ್, ಆಚರಣಾ ಸಮಿತಿ ಅಧ್ಯಕ್ಷ ಮಂಜುನಾಥ್ ಹಾಗೂ ತಮಿಳ್ ಸಂಘದ ಅಧ್ಯಕ್ಷ ವಿಘ್ನೇಶ್ ಸೇರಿದಂತೆ ಪದಾಧಿಕಾರಿಗಳು ಕಳಸಗಳನ್ನು ಮಹಿಳೆಯರಿಗೆ ಹೊತ್ತು ಕೊಡುವ ಮೂಲಕ ಚಾಲನೆ ನೀಡಿದರು.
ಸುಂಟಿಕೊಪ್ಪದ ಶ್ರೀಚಾಮುಂಡೇಶ್ವರಿ ದೇವಾಲಯವನ್ನು ತಳಿರು ತೊರಣಗಳಿಂದ ಅಲಂಕರಿಸಲಾಗಿತ್ತು. ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜಾ ಕೈಂಕರ್ಯವನ್ನು ಆರ್ಚಕರಾದ ಮಂಜುನಾಥ ಉಡುಪ ಅವರ ನೇತೃತ್ವದಲ್ಲಿ ನಡೆಸಲಾಯಿತು. ಮಹಾಮಂಗಳಾರತಿ ನಂತರ ಪ್ರಸಾದ ವಿತರಿಸಲಾಯಿತು. ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಯಿತು.
ಈ ಸಂದರ್ಭ ಉಪಾಧ್ಯಕ್ಷ ಶರವಣ, ಪ್ರಧಾನ ಕಾರ್ಯದರ್ಶಿ ಆರ್.ಅರುಣ್‍ಕುಮಾರ್, ಉಪಕಾರ್ಯದರ್ಶಿ ಎಂ.ಗಣೇಶ್, ಖಜಾಂಚಿ ವೇಲುಮುರುಗನ್, ಸಂಘಟಣಾ ಕಾರ್ಯದರ್ಶಿ ಎಸ್.ಸೂರ್ಯ ಸರ್ವ ಸದಸ್ಯರು ಹಾಜರಿದ್ದರು.