ಮಡಿಕೇರಿ ಜ.16 : ಯಾವುದೇ ಒಂದು ಜನಾಂಗದ ಜೀವಸೆಲೆಯೇ ಅದರ ಭಾಷೆ. ಭಾಷೆ ಉಳಿದರೆ ಮಾತ್ರ ಜನಾಂಗದ ಉಳಿವು ಸಾಧ್ಯ ಎಂದು ಬೆಂಗಳೂರು ಕೊಡವ ಸಾಮಾಜ ಅಧ್ಯಕ್ಷ ಕರವಟ್ಟಿರ ಪೆಮ್ಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡವಾಮೆರ ಕೊಂಡಾಟ ಸಂಘಟನೆಯ ತಿಂಗಕೋರ್ ಅರಿವು ಮಾಲಿಕೆಯ ಹನ್ನೆರಡನೇ ವೆಬಿನಾರ್’ನಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಅತ್ಯಂತ ಪುರಾತನ, ವಿಶಿಷ್ಟವಾದ ಕೊಡವ ಭಾಷೆಯು, ಅವನತಿಯತ್ತ ಸಾಗುತ್ತಿರುವುದು ವಿಷಾದನೀಯ ಎಂದರು.
ಜನಾಂಗ ಉಳಿಯಬೇಕಾದರೆ ಭಾಷೆಯನ್ನು ಬೆಳೆಸಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಪ್ರತಿಯೊಬ್ಬ ಕೊಡವರೂ ಜಾಗರೂಕರಾಗಿ ತಮ್ಮ ಮನೆಗಳಲ್ಲಿ ಬಂದುಗಳ ಜೊತೆಯಲ್ಲಿ ಕೊಡವ ಭಾಷೆಯಲ್ಲಿ ವ್ಯವಹರಿಸುವಂತಾಗಬೇಕು. ಮಕ್ಕಳಲ್ಲಿ ಭಾಷೆಯ ಅಭಿಮಾನವನ್ನು ಜಾಗೃತಿಗೊಳಿಸುವತ್ತ ಪೋಷಕರು ಗಮನ ಹರಿಸಬೇಕು ಎಂದರು.
ಕೊಡವರು ಎಲ್ಲೇ ನೆಲೆಸಿದ್ದರೂ ನಮ್ಮ ಸಂಸ್ಕೃತಿ ಸಂಪ್ರದಾಯಗಳ ಪಾಲನೆಗೆ ಒತ್ತುಕೊಡಬೇಕು. ಸಾಧ್ಯವಾದಷ್ಟು ಹಬ್ಬಗಳ ಆಚರಣೆಗೆ ತಮ್ಮ ಗುರುಮನೆಗೆ ಬರುವಂತಾಗಬೇಕು. ಹೀಗಾದಾಗ ಮಾತ್ರ ಮುಂದಿನ ಪೀಳಿಗೆಗೆ ಶ್ರೀಮಂತ ಕೊಡವ ಸಂಸ್ಕೃತಿಯನ್ನು ಉಳಿಸಿಕೊಡಲು ಸಾಧ್ಯ ಎಂದರು. ಕೊಡವ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೆಂಗಳೂರು ಕೊಡವ ಸಮಾಜವು ಸದಾ ಕಾರ್ಯ ಪ್ರವೃತ್ತವಾಗಿದ್ದು, ಮುಂಚೂಣಿಯಲ್ಲಿ ನಿಲ್ಲಲಿದೆ ಎಂದರು.
ಕೊಡವಾಮೆರ ಕೊಂಡಾಟ ಸಂಘಟನೆ ಪ್ರಾರಂಭವಾಗಿ ಕೇವಲ ಮೂರೂವರೆ ವರ್ಷಗಳಲ್ಲಿ ಮಾಡಿರುವ ಜನಾಂಗ ಸೇವೆಯು ಮೆಚ್ಚುವಂತದ್ದು, ಅವ್ವ ಪಾಜೆರ ಉಳಿಕೆ ಬೊಳ್ಚೆಕ್ಕಾಯಿತ್ ಎನ್ನುವ ದ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಾ, ಹಲವಾರು ಯಶಸ್ವಿ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ಸು ಕಂಡಿದೆ. ಅದರ ಭಾಗವಾಗಿ ನಡೆಯುತ್ತಿರುವ ತಿಂಗಕೋರ್ ಅರಿವು ಮಾಲೆಯು ಜನಮನ್ನಣೆ ಪಡೆದಿದ್ದು, ಜನಾಂಗೀಯ ಜಾಗೃತಿಗೆ ನಾಂದಿಯಾಗಿದೆ. ಮತ್ತಷ್ಟು ಪರಿಣಾಮಕಾರಿ ಅನುಷ್ಠಾನಗಳು ಸಂಘಟನೆಯಿಂದ ಬರುವಂತಾಗಲಿ ಎಂದರು. ಸಂಘಟನೆಯ ಮುಂದಿನ ಕಾರ್ಯಯೋಜನೆಗಳಿಗೆ ತಾವು ಸಹಕರಿಸುವುದಾಗಿ ಹೇಳಿದ ಅವರು, ಜನಾಂಗದ ಪ್ರತಿಯೊಬ್ಬರೂ ಉತ್ತಮ ಕೆಲಸಗಳಿಗೆ ಸಹಕರಿಸುವಂತಾಗಬೇಕು ಎಂದರು.
ಅಂತರಾಷ್ಟ್ರೀಯ ಅಥ್ಲೇಟ್ ತೀತಮಾಡ ಅರ್ಜುನ್ ದೇವಯ್ಯ, ಮಾಳೇಟಿರ ಶ್ರೀನಿವಾಸ್, ಮಾಳೇಟಿರ ರಷ್ಮಿ ಉತ್ತಪ್ಪ, ಪೋಡಮಾಡ ಭವಾನಿ ನಾಣಯ್ಯ, ಮಾಳೇಟಿರ ಸೀತಮ್ಮ ವಿವೇಕ್, ಕನ್ನಿಗಂಡ ದೇವಯ್ಯ, ಮಾಣಿರ ಕವನ್, ಕಾಳೇಂಗಡ ಬೋಸ್, ಬೊಟ್ಟೋಳಂಡ ನಿವ್ಯ ದೇವಯ್ಯ ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಜನಾಂಗದ ಮತ್ತು ಸಂಘಟನೆಯ ಮುಂದಿನ ಕಾರ್ಯಯೋಜನೆಯ ಕುರಿತು ಚರ್ಚಿಸಿದರು.
ಸಂಘಟನೆಯ ಸ್ಥಾಪಕರೂ ಆಗಿರುವ, ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಮೊದಲಿಗೆ ಸದಸ್ಯ ಮಾಳೇಟಿರ ಶ್ರೀನಿವಾಸ್ ನೇರ್ಚೆ ಕಟ್ಟಿದರೆ, ಸದಸ್ಯೆ ಮಂಡೆಡ ಬೀನ ಸ್ವಾಗತಿಸಿ, ಸದಸ್ಯೆ ಬೊಳ್ಳೆರ ಸೀತಮ್ಮ ನಿರೂಪಿಸಿ, ಮತ್ರಂಡ ದೇಚಮ್ಮ ವಂದಿಸಿದರು.