ನಾಪೋಕ್ಲು ಜ.16 : ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರ ಸಮನ್ವಯತೆಯಿಂದ ಮಕ್ಕಳ ಭವಿಷ್ಯವನ್ನು ರೂಪಿಸಲು ಸಾಧ್ಯ ಎಂದು ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಹೇಳಿದರು.
ಕೊಡವ ಸಮಾಜದಲ್ಲಿ ನಡೆದ ಬೇತು ಗ್ರಾಮದ ಎಕ್ಸೆಲ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ದಿನದ ಹೆಚ್ಚಿನ ಸಮಯವನ್ನು ಮಕ್ಕಳು ಪೋಷಕರೊಂದಿಗೆ ಕಳೆಯುತ್ತಾರೆ. ಹೀಗಾಗಿ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರಿಗಿಂತಲೂ ಪೋಷಕರ ಪಾತ್ರ ಮಹತ್ವದ್ದು ಎಂದರು.
ಪೋಷಕರು ಮಕ್ಕಳು ಕಲಿಯುವ ಶಾಲೆ ಹಾಗೂ ಶಿಕ್ಷಕರ ಬಗ್ಗೆ ಗೌರವವನ್ನು ಹೊಂದಿರಬೇಕು. ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಿದ ಬಳಿಕ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಪೋಷಕರು ಸುಮ್ಮನಾಗಬಾರದು. ಶಾಲೆಗೆ ಕಳುಹಿಸಿದ ನಂತರ ಮುಂದಿನ ಬೆಳವಣಿಗೆಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಮಕ್ಕಳ ಆಸೆ ಆಕಾಂಕ್ಷೆಗಳನ್ನು ಈಡೇರಿಸಿದರೆ ಮಾತ್ರ ಜವಾಬ್ದಾರಿಯುತ ಪೋಷಕರಾಗಲು ಸಾಧ್ಯ. ಗುರು ಹಿರಿಯರನ್ನು ಗೌರವಿಸುವಂತೆ ಮಕ್ಕಳಿಗೆ ತಿಳಿ ಹೇಳುವ ಕರ್ತವ್ಯ ಪೋಷಕರದ್ದು ಎಂದರು.
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಚೌರೀರ ಜಗತ್ ತಿಮ್ಮಯ್ಯ ಮಾತನಾಡಿ, ಪೋಷಕರು ಮಕ್ಕಳಿಗೆ ಶಿಕ್ಷಣದ ಮೇಲೆ ಹೆಚ್ಚಿನ ಒತ್ತಡ ಹೇರಬಾರದು. ಶಿಕ್ಷಣದ ಜೊತೆಯಲ್ಲಿ ಕ್ರೀಡೆಗೂ ಮಹತ್ವ ನೀಡಬೇಕು. ಎಳೆಯ ವಯಸ್ಸಿನಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಸಾಧನೆ ಮಾಡುವ ಅವಕಾಶಗಳಿವೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಶಾಲೆ ನಡೆಸುವುದು ಸುಲಭದ ಕೆಲಸವಲ್ಲ. ಶಾಲಾ ಆಡಳಿತ ಮಂಡಳಿ, ಶಿಕ್ಷಕರೊಂದಿಗೆ ಪೋಷಕರು ಉತ್ತಮ ಬಾಂಧವ್ಯ ಹೊಂದಿರಬೇಕು. ವಿದ್ಯಾರ್ಥಿಗಳು ಕನ್ನಡ, ಇಂಗ್ಲಿಷ್ ಭಾಷೆಯೊಂದಿಗೆ ಇತರ ಭಾಷೆಗಳ ಬಗ್ಗೆಯೂ ಹೆಚ್ಚಿನ ಜ್ಞಾನವನ್ನು ಬಳಸಿಕೊಳ್ಳಬೇಕು, ಸಂಸ್ಕಾರಯುತ ಶಿಕ್ಷಣದಿಂದ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು.
ದಾರವಾಡ ಉದ್ಗಂ ಫೌಂಡೇಶನ್ ನ ಅಧ್ಯಕ್ಷ ಶರಣ್ ಹೊಸಮನಿ ಮಾತನಾಡಿ, ಪೋಷಕರು ಮಕ್ಕಳಿಗೆ ಶಿಸ್ತು, ಉತ್ತಮ, ಗುಣನಡತೆ, ಸಂಸ್ಕೃತಿಯನ್ನು ಮನವರಿಕೆ ಮಾಡಿಕೊಡಬೇಕು ಎಂದರು.
ಈ ಸಂದರ್ಭ ವೇದಿಕೆಯಲ್ಲಿದ್ದ ಗಣ್ಯರು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಕುಟ್ಟಂಜೆಟ್ಟೀರ ಮಾದಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಕುಟ್ಟಂಜೆಟ್ಟೀರ ಮಾದಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಪ್ರಾಂಶುಪಾಲರಾದ ದಿವ್ಯ ಗಣೇಶ್ ಶಾಲಾ ವರದಿ ವಾಚಿಸಿದರು. ನಿರ್ದೇಶಕಿ ಭವ್ಯ, ಪ್ರಾಂಶುಪಾಲರಾದ ದಿವ್ಯ ಗಣೇಶ್, ಮ್ಯಾನೇಜರ್ ಕೊಂಡಿರ ತಮ್ಮಯ್ಯ, ಶಿಕ್ಷಕಿ ರಮ್ಯಾ ನಂಜಪ್ಪ ಅತಿಥಿಗಳ ಪರಿಚಯ ಮಾಡಿದರು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ನಿರ್ದೇಶಕ ಶರತ್ ಸ್ವಾಗತಿಸಿದರೆ, ಶಿಕ್ಷಕಿ ಸಂಧ್ಯಾ ನಿರೂಪಿಸಿದರು. ರಶ್ಮಿ ವಂದಿಸಿದರು.
ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ ಸೇರಿದಂತೆ ಹಿಂದಿನ ಹಾಗೂ ಪ್ರಸ್ತುತ ವಿದ್ಯಾಮಾನಗಳನ್ನು ಪ್ರಕಟಿತ ವೇಷ ಭೂಷಣ ನೃತ್ಯ ಪ್ರಕಾರಗಳ ಹಿನ್ನೆಲೆ ಸೌಂಡ್, ಲೈಟಿಂಗ್ ಮೂಲಕ ವಿವಿಧ ಆಕರ್ಷಕ ನೃತ್ಯ, ಸಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರನ್ನು ರಂಜಿಸಿತು.
ವರದಿ : ದುಗ್ಗಳ ಸದಾನಂದ.